Advertisement

ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

12:14 AM Aug 04, 2019 | Sriram |

ಎಂಡೋ ಸಂತ್ರಸ್ತೆಯ ಸಾವು
ಬದಿಯಡ್ಕ: ಎಂಡೋಸಲ್ಫಾನ್‌ ಸಂತ್ರಸ್ತೆಯಾಗಿರುವ ಬಣ್ಪುತ್ತಡ್ಕ ನಿವಾಸಿ ಬಿಫಾತಿಮ(51) ಸಾವಿಗೀಡಾದರು. ಮೃತರು ಬದಿಯಡ್ಕ ಪಂಚಾಯತ್‌ ಎಂಡೋಸಲ್ಫಾನ್‌ ಸಂತ್ರಸ್ತರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದರು

Advertisement

ಜ್ವರದಿಂದ ಬಾಲಕನ ಸಾವು
ಮಂಜೇಶ್ವರ: ಜ್ವರದಿಂದ ಬಳಲುತ್ತಿದ್ದ ಹೊಸಂಗಡಿ ಬೆಜ್ಜ ಐ.ಎಸ್‌.ಡಿ.ಪಿ. ಕಾಲನಿ ನಿವಾಸಿ ಸೀತಾರಾಮ ಅವರ ಪುತ್ರ ಪ್ರಜಿತ್‌ ಕುಮಾರ್‌(15) ಅವರು ಸಾವಿಗೀಡಾದರು. ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಅವರನ್ನು ಉಪ್ಪಳ ಪರಿಸರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ವಿದ್ಯುತ್‌ ಶಾಕ್‌ : ಸಾವು
ಮಂಜೇಶ್ವರ: ವಿದ್ಯುತ್‌ ಶಾಕ್‌ನಿಂದ ಮೀಂಜ ಚಿಂತಾಜೆ ನಿವಾಸಿ ಸೇಸಪ್ಪ ಅವರ ಪುತ್ರ ಹರಿದಾಸ್‌ ಸಾಲ್ಯಾನ್‌(49) ಅವರು ಮುಂಬೈಯಲ್ಲಿ ಸಾವಿಗೀಡಾದರು.ಅವರು ಕಳೆದ ಹಲವಾರು ವರ್ಷದಿಂದ ಕುಟುಂಬ ಸಹಿತ ಮುಂಬೈಯಲ್ಲಿ ವಾಸ್ತವ್ಯ ಹೂಡಿದ್ದು, ಜು.31 ರಂದು ರಾತ್ರಿ ಮೆಶಿನ್‌ವೊಂದನ್ನು ದುರಸ್ತಿ ಮಾಡುತ್ತಿದ್ದಾಗ ವಿದ್ಯುತ್‌ ಶಾಕ್‌ ತಗಲಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.

ನೇಣು ಬಿಗಿದು ಆತ್ಮಹತ್ಯೆ
ಬದಿಯಡ್ಕ: ಪೆರ್ಲ ನಲ್ಕ ರೆಂಜೆಯಲ್ಲಿರುವ ಪತ್ನಿ ಮನೆಯಲ್ಲಿ ವಾಸಿಸುತ್ತಿದ್ದ ತೆಂಗಿನ ಮರವೇರು ಕಾರ್ಮಿಕ ಮೂಲತ: ಪುತ್ತೂರು ನಿವಾಸಿಯಾಗಿರುವ ರಾಮ ನಾಯ್ಕ(43) ಅವರು ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾದಕ ವಸ್ತು ಸಹಿತ ವ್ಯಕ್ತಿ ಬಂಧನ
ಕಾಸರಗೋಡು: ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಮಾದಕ ವಸ್ತು ಮತ್ತು ಬಂಧೂಕನ್ನು ವಶಪಡಿಸಿ, ಕಲ್ಲಿಕೋಟೆ ನಿವಾಸಿ ಹಾಗು ಮಂಗಳೂರಿನಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಯೂ ಆಗಿರುವ ಮೊಹಮ್ಮದ್‌ ಶಕೀಬ್‌(22)ನನ್ನು ಬಂಧಿಸಿದ್ದಾರೆ. ಆತನ ಜತೆಗಿದ್ದ ಪ್ರಮುಖ ಆರೋಪಿ ಬೇಕಲದ ಕತ್ತಿ ಅಶ್ರಫ್‌ ಯಾನೆ ಅಶ್ರಫ್‌ ಮತ್ತು ಇನ್ನೋರ್ವ ಪರಾರಿಯಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರನ್ನು ವಶಪಡಿಸಲಾಗಿದೆ. ಬೇಕಲ ಪೊಲೀಸ್‌ ಠಾಣೆಯ ಎಸ್‌.ಐ. ಅಜಿತ್‌ ಕುಮಾರ್‌ ನೇತೃತ್ವದ ಪೊಲೀಸ್‌ ತಂಡ ಕೋಟಿಕುಳಂನಲ್ಲಿ ಕಾರ್ಯಾಚರಣೆ ನಡೆಸಿದೆ. ಮಾದಕ ವಸ್ತು ಸಾಗಿಸುವ ಬಗ್ಗೆ ಎಸ್‌.ಐ. ಅಜಿತ್‌ ಕುಮಾರ್‌ ಅವರಿಗೆ ರಹಸ್ಯ ಮಾಹಿತಿ ಲಭಿಸಿತ್ತು. ಇದರಂತೆ ಅವರ ನೇತೃತ್ವದ ಪೊಲೀಸರ ತಂಡ ಆ.2 ರಂದು ರಾತ್ರಿಯಿಂದಲೇ ಕಾರ್ಯಾಚರಣೆ ನಡೆಸಿತ್ತು. ಕೋಟಿಕುಳಂ ಬಳಿ ಶನಿವಾರ ಮುಂಜಾನೆ ಸಂಶಯದ ರೀತಿಯಲ್ಲಿ ಬರುತ್ತಿದ್ದ ಕಾರನ್ನು ಎಸ್‌.ಐ. ನೇತೃತ್ವದ ತಂಡ ನಿಲ್ಲಿಸಿ ತಪಾಸಣೆ ಮಾಡಿದಾಗ ಅದರಲ್ಲಿ 20 ಗ್ರಾಂ ಎ.ಡಿ.ಎಂ. ಎಂಬ ಮಾದಕ ವಸ್ತು ಮತ್ತು ನಾಲ್ಕು ಬುಲ್ಲೆಟ್‌ಗಳು ಇರುವ ಬಂಧೂಕು ಪತ್ತೆಯಾಯಿತು. ಬಂಧೂಕನ್ನು ಇಟೆಲಿಯಲ್ಲಿ ನಿರ್ಮಿಸಲಾಗಿತ್ತು. ಅದನ್ನು ಕಾರಿನ ಡ್ಯಾಶ್‌ನೊಳಗೆ ಬಚ್ಚಿಡಲಾಗಿತ್ತು ಇದೇ ವೇಳೆ ಮಾದಕ ವಸ್ತು ದಂಧೆಯ ಪ್ರಧಾನ ಆರೋಪಿಯಾಗಿರುವುದಾಗಿ ಶಂಕಿಸಿರುವ ಕತ್ತಿ ಅಶ್ರಫ್‌ ಮತ್ತು ಇನ್ನೋರ್ವ ತತ್‌ಕ್ಷಣ ಪರಾರಿಯಾಗಿದ್ದಾರೆ.

Advertisement

ಅಪಹರಣ ಆರೋಪಿ ಸಹಿತ ಇಬ್ಬರ ಸೆರೆ
ಕುಂಬಳೆ: ವ್ಯಾಪಾರಿಯನ್ನು ಅಪಹರಿಸಿದ ಪ್ರಕರಣದ ಆರೋಪಿ ಸಹಿತ ಇಬ್ಬರನ್ನು ಮದ್ಯ ಸಾಗಾಟದ ವೇಳೆ ಪೊಲೀಸರು ಬಂಧಿಸಿದ್ದಾರೆ. ಬಾಯಾರು ಮುಳಿಗದ್ದೆಯ ಸೈನುಲ್ ಆಬಿದಿನ್‌(27) ಮತ್ತು ಮೀಂಜ ಕೊಳೆಚೆಪ್ಪು ನಿವಾಸಿ ಹುಸೈನ್‌ (35) ನನ್ನು ಬಂಧಿಸಲಾಗಿದೆ. ಇವರು ಸಂಚರಿಸುತ್ತಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ 180 ಎಂ.ಎಲ್.ನ 66 ಪ್ಯಾಕೆಟ್ ಮತ್ತು 90 ಎಂ.ಎಲ್.ನ 48 ಪ್ಯಾಕೆಟ್ ವಿದೇಶಿ ಮದ್ಯ ಪತ್ತೆಯಾಗಿದ್ದು ವಶಪಡಿಸಲಾಯಿತು. ಬಾಯಾರು ಕನಿಯಾಲ ಬಂಗ್ಲಾವ್‌ನಿಂದ ಈ ಇಬ್ಬರನ್ನು ಕಾರು ಮತ್ತು ಮದ್ಯದೊಂದಿಗೆ ಬಂಧಿಸಲಾಗಿದೆ. ಹತ್ಯೆ ಯತ್ನ ಪ್ರಕರಣದ ಆರೋಪಿಯೋರ್ವನನ್ನು ಬಂಧಿಸಲು ಮಂಜೇಶ್ವರ ಎಸ್‌.ಐ. ವಿಷ್ಣು ಪ್ರಸಾದ್‌ ನೇತೃತ್ವದ ಪೊಲೀಸರ ತಂಡ ಗಡಿಯಲ್ಲಿ ಹೊಂಚು ಹಾಕಿ ನಿಂತಿತ್ತು. ಈ ವೇಳೆ ಈ ದಾರಿಯಾಗಿ ಬಂದ ಕಾರನ್ನು ತಪಾಸಣೆಗಾಗಿ ನಿಲ್ಲಿಸುವಂತೆ ಪೊಲೀಸರು ತಿಳಿಸಿದಾಗ ಕಾರು ನಿಲ್ಲಿಸದೆ ಪರಾರಿಯಾಯಿತು. ತತ್‌ಕ್ಷಣ ಪೊಲೀಸರು ತಮ್ಮ ವಾಹನದಲ್ಲಿ ಅದನ್ನು ಹಿಂಬಾಲಿಸಿ ಕನಿಯಾಲ ಬಳಿ ತಡೆದು ಅದರಲ್ಲಿದ್ದ ಮದ್ಯ ವಶಪಡಿಸಿ, ಇಬ್ಬರನ್ನು ಬಂಧಿಸಿದರು. ಬಂಧಿತರನ್ನು ಪೊಲೀಸ್‌ ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿದಾಗ ಸೈನುಲ್ ಆಬಿದಿನ ಶಿರಿಯ ನಿವಾಸಿ ಹಾಗು ವ್ಯಾಪಾರಿಯೂ ಆಗಿರುವ ಅಬೂಬಕ್ಕರ್‌ ಸಿದ್ದಿಕ್‌(34) ಅವರನ್ನು ದಿನಗಳ ಹಿಂದೆ ರಾತ್ರಿ ಮಸೀದಿಯಿಂದ ಮರಳುತ್ತಿದ್ದ ವೇಳೆ ಕಾರಿನಲ್ಲಿ ಅಪಹರಿಸಿದ ಪ್ರಕರಣದಲ್ಲಿ ಶಾಮೀಲಾಗಿರುವುದು ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ ಇತ್ತೀಚೆಗೆ ಬಾಯಾರಿನಲ್ಲಿ ಮದ್ರಸ ಅಧ್ಯಾಪಕರ ಮೇಲೆ ಹಲ್ಲೆ ಪ್ರಕರಣದಲ್ಲೂ ಆಬಿದಿನ್‌ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಮನೆಗೆ ನುಗ್ಗಿ ಹಾನಿ
ಉಪ್ಪಳ: ತಂಡವೊಂದು ಶನಿವಾರ ಮುಂಜಾನೆ 2 ಗಂಟೆಗೆ ಉಪ್ಪಳ ನಿವಾಸಿ ಮೊದೀನ್‌ ಕುಂಞಿ ಅವರ ಮನೆಗೆ ನುಗ್ಗಿ ಮರದ ತುಂಡಿನಿಂದ ಮೂರು ಕೊಠಡಿಯ ಕಿಟಕಿ ಬಾಗಿಲು ನಾಶಗೊಳಿಸಿದ ಘಟನೆ ನಡೆದಿದೆ. ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ

ರೈಲಿನಲ್ಲಿ ಸಾಗಿಸುತ್ತಿದ್ದ ತಂಬಾಕು ವಶ
ಕಾಸರಗೋಡು: ಕಾಸರಗೋಡು ರೈಲ್ವೇ ಪೊಲೀಸ್‌ ಠಾಣೆಯ ಎಸ್‌.ಐ. ರಾಮಚಂದ್ರನ್‌ ವಿ.ವಿ. ಅವರ ನೇತೃತ್ವದ ಪೊಲೀಸರು ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ರೈಲು ಗಾಡಿಯಿಂದ ಹನ್ನೊಂದೂವರೆ ಕಿಲೋ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿದೆ. ಮಂಗಳೂರಿನಿಂದ ಕಣ್ಣೂರಿಗೆ ಸಾಗುತ್ತಿದ್ದ ಪ್ಯಾಸೆಂಜರ್‌ ರೈಲು ಗಾಡಿಯಿಂದ ತಂಬಾಕು ಉತ್ಪನ್ನ ವಶಪಡಿಸಲಾಯಿತು.

ರಿಕ್ಷಾ ಮಗುಚಿ ಮೂವರಿಗೆ ಗಾಯ
ಬದಿಯಡ್ಕ: ನಿಯಂತ್ರಣ ತಪ್ಪಿದ ಆಟೋ ರಿಕ್ಷಾ ಪೆರಡಾಲದಲ್ಲಿ ಮಗುಚಿ ಬಿದ್ದು ರಿಕ್ಷಾದಲ್ಲಿದ್ದ ಪೆರಡಾಲಗುತ್ತು ನಿವಾಸಿ ಪ್ರಭಾಕರ ಭಂಡಾರಿ(65), ಪತ್ನಿ ರತ್ನಾ(50), ಆಟೋ ಚಾಲಕ ನೀರ್ಚಾಲು ನಿವಾಸಿ ಪ್ರಸಾದ್‌(35) ಗಾಯಗೊಂಡಿದ್ದಾರೆ.

ಕಳವುಗೈದ ಮೊಬೈಲ್ ಸಹಿತ ಆರೋಪಿ ಸೆರೆ
ಕಾಸರಗೋಡು: ಕಳವು ಮಾಡಿದ ಮೊಬೈಲ್ ಫೋನ್‌ ಸಹಿತ ಹೊಸದುರ್ಗ ಚಿತ್ತಾರಿ ನಿವಾಸಿ ಶಕೀಲ್(19)ನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಜೂನ್‌ ತಿಂಗಳಲ್ಲಿ ಮೂಲಕಂಡದಲ್ಲಿ ಡ್ರೈವಿಂಗ್‌ ಲೈಸನ್ಸ್‌ ಟೆಸ್ಟಿಗೆ ಬಂದಿದ್ದ ಯುವತಿಯ ಬ್ಯಾಗ್‌ನಿಂದ ಭಾರೀ ಮೌಲ್ಯದ ಮೊಬೈಲ್ ಫೋನನ್ನು ಕಳವು ಮಾಡಿದ್ದು, ಅದನ್ನು ಹೊಸದುರ್ಗ ನಗರದ ಮೊಬೈಲ್ ಅಂಗಡಿಗೆ ಮಾರಾಟ ಮಾಡಲು ಬಂದಿದ್ದನು. ಆಗ ಶಂಕೆಗೊಂಡ ಅಂಗಡಿ ಮಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ತತ್‌ಕ್ಷಣ ಪೊಲೀಸರು ಬಂದು ಆರೋಪಿಯನ್ನು ಸೆರೆ ಹಿಡಿದರುಹೊಸದುರ್ಗ ವ್ಯಾಪಾರ ಭವನ ಬಳಿ ಕೆಲವು ದಿನಗಳ ಹಿಂದೆ ಲಾಟರಿ ಏಜೆಂಟ್ರ ಹಣ ಸಹಿತ ಬ್ಯಾಗ್‌, ಅಲಾಮಿಪಳ್ಳಿಯಲ್ಲಿ ಮಹಿಳೆಯ ಚಿನ್ನದ ಸರ ಅಪಹರಿಸಿದ ಪ್ರಕರಣದಲ್ಲೂ ಈತ ಆರೋಪಿಯಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next