Advertisement

ಕಾಸರಗೋಡು ಅಪರಾಧ ಸುದ್ದಿಗಳು

08:29 PM Aug 01, 2019 | Sriram |

ರೈಲು ಢಿಕ್ಕಿ : ಅಪರಿಚಿತ ಮಹಿಳೆ ಸಾವು
ಕಾಸರಗೋಡು: ಕಾಂಞಂಗಾಡ್‌ ಕುಶಾಲನಗರ ರೈಲ್ವೇ ಗೇಟ್‌ ಸಮೀಪ ರೈಲು ಗಾಡಿ ಢಿಕ್ಕಿ ಹೊಡೆದು ಅಪರಿಚಿತ ಮಹಿಳೆ ಸಾವಿಗೀಡಾದ ಘಟನೆ ನಡೆದಿದೆ. ಗುರುವಾರ ಮುಂಜಾನೆ ಚೆನ್ನೈ – ಮಂಗಳೂರು ವೆಸ್ಟ್‌ಕೋಸ್ಟ್‌ ಎಕ್ಸ್‌ಪ್ರೆಸ್‌ ರೈಲುಗಾಡಿ ಢಿಕ್ಕಿ ಹೊಡೆದು ಮಹಿಳೆ ಸಾವಿಗೀಡಾಗಿದ್ದು, ಈ ಮಹಿಳೆಗೆ ಸುಮಾರು 45 ವರ್ಷ ಪ್ರಾಯ ಅಂದಾಜಿಸಲಾಗಿದೆ. ಮೃತ ದೇಹವನ್ನು ಕಾಂಞಂಗಾಡ್‌ನ‌ಲ್ಲಿರುವ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

Advertisement

ಮದ್ಯ ಸಹಿತ ಬಂಧನ
ಕಾಸರಗೋಡು: 23 ಬಾಟ್ಲಿ ವಿದೇಶಿ ಮದ್ಯ ಸಹಿತ ಪುಲ್ಲೂರು ಹರಿಪುರದ ಇ.ಪಿ.ಮಣಿಕಂಠನ್‌(42)ನನ್ನು ಪೊಲೀಸರು ಬಂಧಿಸಿದ್ದಾರೆ. ಜು.31 ರಂದು ರಾತ್ರಿ ಬ್ಯಾಂಕ್‌ ರಸ್ತೆಯಲ್ಲಿ ಮದ್ಯ ಸಹಿತ ತೆರಳುತ್ತಿದ್ದಾಗ ಈತನನ್ನು ಬಂಧಿಸಲಾಯಿತು.

ಯುವತಿ ನಾಪತ್ತೆ
ಮಂಜೇಶ್ವರ: ಮಣ್ಣಂಗುಳಿ ನಿವಾಸಿ ಅಬ್ದುಲ್‌ ಲತೀಫ್‌ ಅವರ ಪುತ್ರಿ ಆಮಿನತ್‌ ರಶೀನಾ (24) ನಾಪತ್ತೆಯಾಗಿರುವುದಾಗಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ. ಜು. 31 ರಂದು ಬೆಳಗ್ಗೆ 10.30ರಿಂದ ನಾಪತ್ತೆಯಾಗಿದ್ದು, ಮೊಬೈಲ್‌ಗೆ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸರಣಿ ಅಂಗಡಿ ಕಳವು
ನೀರ್ಚಾಲು: ಇಲ್ಲಿನ ಪೇಟೆಯಲ್ಲಿ ಜು. 31ರಂದು ರಾತ್ರಿ ಸರಣಿ ಅಂಗಡಿ ಕಳವು ನಡೆದಿದೆ. ಮೇಲಿನ ಪೇಟೆಯ ಐದು ಅಂಗಡಿಗಳಿಗೆ ನುಗ್ಗಿದ ಕಳ್ಳರು ಹಣ ಹಾಗು ವಿವಿಧ ಸಾಮಾಗ್ರಿಗಳನ್ನು ಕಳವು ಮಾಡಿದ್ದಾರೆ. ಇಲ್ಲಿನ ನಾರಾಯಣ ಅವರ ಬೇಕರಿ, ನಾರಾಯಣ ಮಣಿಯಾಣಿ ಅವರ ತರಕಾರಿ ಅಂಗಡಿ, ದೇವಪ್ಪ ಅವರ ಟೈಲರಿಂಗ್‌ ಅಂಗಡಿ, ರಮೇಶ್‌ ಅವರ ಸ್ಟೇಶನರಿ ಅಂಗಡಿ ಮತ್ತು ಕೆಳಗಿನ ಪೇಟೆಯಲ್ಲಿ ಕೃಷ್ಣ ಅವರ ಟೈಲರಿಂಗ್‌ ಅಂಗಡಿಯಿಂದ ಕಳವು ಮಾಡಲಾಗಿದೆ.

ನಾರಾಯಣ ಮಣಿಯಾಣಿ ಅವರ ತರಕಾರಿ ಅಂಗಡಿಯಿಂದ 2,000 ರೂ. ನಗದು ಹಾಗೂ ವಿವಿಧ ವಸ್ತುಗಳನ್ನು ಕಳವು ಮಾಡಲಾಗಿದೆ. ಇತರ ನಾಲ್ಕು ಅಂಗಡಿಗಳಿಂದ ಚಿಲ್ಲರೆ ಹಣ ಹಾಗು ಸಾಮಾಗ್ರಿಗಳು ಕಳವಾಗಿದೆ. ಈ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ.

Advertisement

ಬಸ್‌ ನಿರ್ವಾಹಕನಿಗೆ ಹಲ್ಲೆ
ಕಾಸರಗೋಡು: ಮಾರಕಾಯುಧಗಳೊಂದಿಗೆ ತಡ ರಾತ್ರಿ ವಸತಿ ಗೃಹಕ್ಕೆ ನುಗ್ಗಿದ ಮುಖವಾಡ ಧರಿಸಿದ ಅಕ್ರಮಿಗಳ ತಂಡ ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕ ನೀಲೇಶ್ವರ ಚಾಯೋತ್ತ್ನ ಕೆ.ಮನೋಜ್‌ ಅವರಿಗೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಗಾಯಾಳುವನ್ನು ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಕಾಡಿನಲ್ಲಿ ನೇಣು ಬಿಗಿದ
ಸ್ಥಿತಿಯಲ್ಲಿ ಶವ ಪತ್ತೆ
ಕಾಸರಗೋಡು: ವೆಳ್ಳರಿಕುಂಡ್‌ ಪರಪ್ಪದ ಪಳ್ಳತ್ತ್ ಮೂಲೆಯ ಅರಣ್ಯದಲ್ಲಿ ಅಪರಿಚಿತ ವ್ಯಕ್ತಿಯೋರ್ವ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರಿಗೆ ಸುಮಾರು 55 ವರ್ಷ ಪ್ರಾಯ ಅಂದಾಜಿಸಲಾಗಿದೆ. ಲುಂಗಿ ಹಾಗು ಎರಡು ಅಂಗಿ ಧರಿಸಿದ್ದರು. ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ವೆಳ್ಳರಿಕುಂಡ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next