ಕಾಸರಗೋಡು: ಪೆರಿಯ ಕಲ್ಯೋಟ್ ನಿವಾಸಿಗಳು ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ (19) ಮತ್ತು ಶರತ್‌ಲಾಲ್ (25) ಕೊಲೆ ಪ್ರಕರಣದಲ್ಲಿ ಮಾಜಿ ಶಾಸಕ ಹಾಗೂ ಸಿಪಿಎಂ ಜಿಲ್ಲಾ ಸೆಕ್ರೆಟರಿಯೆಟ್ ಸದಸ್ಯರೂ ಆಗಿರುವ ಕೆ.ವಿ.ಕುಂಞಿರಾಮನ್, ಒಂದನೇ ಆರೋಪಿ ಪೀತಾಂಬರನ್, ಕಾಂಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ. ಮಣಿಕಂಠನ್ ಸಹಿತ 14 ಮಂದಿ ತಪ್ಪಿತಸ್ಥರೆಂದು ಕೊಚ್ಚಿಯ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ 10 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಕೊಲೆ ಪ್ರಕರಣದಲ್ಲಿ 8 ಮಂದಿ ನೇರವಾಗಿ ಭಾಗಿಯಾಗಿರುವುದು ಸಾಬೀತುಗೊಂಡಿದೆ ಎಂದು ತೀರ್ಪಿನಲ್ಲಿ ತಿಳಿಸಿದೆ. ಶಿಕ್ಷಾ ಪ್ರಮಾಣವನ್ನು ನ್ಯಾಯಾಲಯ ಶೀಘ್ರ ಪ್ರಕಟಿಸಲಿದೆ.
ಪಿ. ಪೀತಾಂಬರನ್, ಸಜಿ ಸಿ.ಜಾರ್ಜ್, ಕೆ.ಎಂ.ಸುರೇಶ್, ಕೆ.ಅನಿಲ್ ಕುಮಾರ್, ಜಿಜಿನ್, ಆರ್. ಶ್ರೀರಾಗ್, ಎ.ಅಶ್ವಿನ್ ಯಾನೆ ಅಪ್ಪು, ಸುಬೀಶ್ ಯಾನೆ ಮಣಿ, ಟಿ. ರಂಜಿತ್ ಯಾನೆ ಅಪ್ಪು, ಕೆ. ಮಣಿಕಂಠನ್, ಎ. ಸುರೇಂದ್ರನ್ ಯಾನೆ ವಿಷ್ಣು ಸುರ, ಕೆ.ವಿ. ಕುಂಞಿರಾಮನ್, ರಾಘವನ್ ವೆಳುತ್ತೋಳಿ, ಕೆ.ವಿ.ಭಾಸ್ಕರನ್ ತಪ್ಪಿತಸ್ಥರು.
ಈ ಕೊಲೆ ಪ್ರಕರಣದ ತನಿಖೆಯನ್ನು ಮೊದಲು ಬೇಕಲ ಪೊಲೀಸರು ಅನಂತರ ಕ್ರೈಂ ಬ್ರ್ಯಾಂಚ್ ಪೊಲೀಸರು ನಡೆಸಿದ್ದರು. ಅನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಅದರಂತೆ ಸಿಬಿಐ ತಿರುವನಂತಪುರ ಘಟಕದ ಡಿವೈಎಸ್‌ಪಿ ಅನಂತಕೃಷ್ಣನ್ ನೇತೃತ್ವದ ತಂಡ ಪ್ರಕರಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿತ್ತು. ಈ ಪ್ರಕರಣದ ಆರೋಪಿಗಳೆಲ್ಲರೂ ಸಿಪಿಎಂ ಕಾರ್ಯಕರ್ತರಾಗಿದ್ದಾರೆ. 2023ರ ಫೆಬ್ರವರಿಯಲ್ಲಿ ಕೊಲೆ ಪ್ರಕರಣದ ವಿಚಾರಣೆ ಸಿಬಿಐ ನ್ಯಾಯಾಲಯದಲ್ಲಿ ಆರಂಭಗೊಂಡಿತ್ತು. 2019ರ ಫೆಬ್ರವರಿ 17 ರಂದು ರಾತ್ರಿ 7.30 ಕ್ಕೆ ಕೊಲೆ ಪ್ರಕರಣ ನಡೆದಿತ್ತು.
ಬಂದೋಬಸ್ತು
ತೀರ್ಪು ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಬಿಗು ಬಂದೋಬಸ್ತು ಏರ್ಪಡಿಸಲಾಗಿದೆ. ಪೊಲೀಸ್ ಪೆಟ್ರೋಲಿಂಗ್ ತೀವ್ರಗೊಳಿಸಲಾಗಿದೆ. ಕಲ್ಯೋಟ್‌ನಲ್ಲಿ ಡಿ. 27ರಂದು 100ರಷ್ಟು ಪೊಲೀಸರು ರೂಟ್‌ಮಾರ್ಚ್ ನಡೆಸಿದ್ದರು. ಪೆರಿಯಾದಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಇತ್ತೀಚೆಗೆ ಸಿಪಿಎಂಗೆ ಸೇರ್ಪಡೆಗೊಂಡ ಕಾಂಗ್ರೆಸ್‌ನ ಹಿರಿಯ ನೇತಾರ ನ್ಯಾಯವಾದಿ ಸಿ.ಕೆ.ಶ್ರೀಧರನ್ ಅವರ ಕಾಂಞಂಗಾಡ್‌ನಲ್ಲಿರುವ ಮನೆಗೆ ಪೊಲೀಸರು ಬಿಗು ಕಾವಲು ಏರ್ಪಡಿಸಿದ್ದಾರೆ.