Advertisement
ಕಾಸರಗೋಡಿನ ಕೋವಿಡ್ 19 ಸೋಂಕಿ ತರ ಸಂಪರ್ಕದಲ್ಲಿರುವ ಬಹುತೇಕ ಮಂದಿ ಗಡಿ ಭಾಗದಲ್ಲಿಯೇ ಇರುವ ಕಾರಣದಿಂದ ಅವರು ಕಡಲ ಕಿನಾರೆಯ ಮೂಲಕವೂ ದ.ಕ. ಜಿಲ್ಲೆ ಪ್ರವೇಶಿಸುವ ಸಾಧ್ಯತೆಯಿದೆ ಎಂಬ ಸುಳಿವಿನ ಆಧಾರದಲ್ಲಿ ಪೊಲೀಸ್ ಕಣ್ಗಾವಲು ಹೆಚ್ಚಿಸಲಾಗಿದೆ. ಜತೆಗೆ ಈ ಭಾಗದಲ್ಲಿ ಮರಳುಗಾರಿಕೆ ನಡೆಸುತ್ತಿರುವ ದೋಣಿಯ ಸಹಾಯದಿಂದಲೂ ದ.ಕ. ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಈ ಬಗ್ಗೆಯೂ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಕೇರಳ ಗಡಿ ಭಾಗದ ಉದ್ಯಾವರ ಬೀಚ್‌ನಲ್ಲಿ ಮೀನು ಮಾರಾಟ ನಡೆಯುತ್ತಿದೆ. ಸಮೀಪದ ಕಣ್ವತೀರ್ಥ ನದಿ ಕಿನಾರೆಯಿಂದ ತಲಪಾಡಿ ಗಡಿ ಪ್ರವೇಶಕ್ಕೆ ಕೇವಲ ಮೂರು ಕಿ.ಮೀ. ಮಾತ್ರ ದೂರವಿದೆ. ಹಾಗಾಗಿ ಇಲ್ಲಿಂದ ತಲಪಾಡಿ ರಸ್ತೆ ಮೂಲಕ ಅಥವಾ ನದಿ ತಾಣದ ಮೂಲಕ ದ.ಕ. ಜಿಲ್ಲೆಯ ಗಡಿ ಪ್ರವೇಶಿಸುವ ಸಾಧ್ಯತೆಯಿದೆ. ತಲಪಾಡಿ ಸಮೀಪದ ಉಚ್ಚಿಲ ಭಟ್ರಪಾಡಿ ನದಿ ಕಿನಾರೆ ಕೂಡ ಕೇರಳಿಗರ ಪ್ರವೇಶಕ್ಕೆ ಸುಲಭದ ದಾರಿಯಾಗಿದೆ. ಇಲ್ಲಿಯೂ ನದಿ ನೀರಿನಲ್ಲಿ ಗಡಿ ದಾಟಿ ಹಲವು ಜನರು ಬರುತ್ತಿದ್ದಾರೆ ಎಂಬ ಆರೋಪವಿದೆ.
ತಲಪಾಡಿಗೆ ಹೊಂದಿಕೊಂಡಂತೆ ಕೇರಳ ಗಡಿ ಭಾಗದ ನದಿಯಲ್ಲಿ ಹೇರಳವಾಗಿ ಮರಳುಗಾರಿಕೆ ನಡೆಯುತ್ತಿದೆ. ಇದೇ ದೋಣಿ ಮೂಲಕ ಅಕ್ರಮವಾಗಿ ಮಂಗಳೂರು ಸರಹದ್ದು ಪ್ರವೇಶಿಸುವುದು ಸುಲಭ. ಮಾತ್ರವಲ್ಲ ಇಲ್ಲಿ ನದಿ ಅಷ್ಟೊಂದು ಆಳವಿಲ್ಲ. ಹಾಗಾಗಿ ನೀರಿನಲ್ಲಿ ನಡೆದುಕೊಂಡೇ ಗಡಿ ದಾಟಲು ಅವಕಾಶವಿದೆ. ಬಹುತೇಕ ಜನರು ಇಂತಹ ಸಾಧ್ಯತೆಯನ್ನು ಬಳಸಿರುವ ಬಗ್ಗೆ ಆರೋಪಗಳಿವೆ.
Related Articles
ದ.ಕ. ಜಿಲ್ಲೆಯ ಗಡಿ ಭಾಗದ ನದಿ ಹಾಗೂ ಕಡಲ ತೀರದಲ್ಲಿ ಕರಾವಳಿ ಕಾವಲು ಪೊಲೀಸ್ ಪಡೆಯಿಂದ ಪಹರೆ ಏರ್ಪಡಿಸಲಾಗಿದೆ. ಈ ಭಾಗದಿಂದ ಗಡಿ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ. ಬೆಟ್ಟಂಪಾಡಿ, ಉಚ್ಚಿಲ ಸಹಿತ ಬಹುತೇಕ ಭಾಗದಲ್ಲಿ ಪೊಲೀಸ್ ಕಾವಲು ಬಿಗಿಗೊಳಿಸಲಾಗಿದೆ. ಅಕ್ರಮ ನುಸುಳುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ.
- ಚೇತನ್, ಎಸ್‌ಪಿ-ಕರಾವಳಿ ಕಾವಲು ಪೊಲೀಸ್
Advertisement