ಕಾಸರಗೋಡು: ತಲಪಾಡಿಯಿಂದ ಚೆರ್ಕಳದ ವರೆಗೆ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ರಸ್ತೆ ಬದಿಯಲ್ಲಿ ಸ್ಥಾಪಿಸಿರುವ ದಿಕ್ಸೂಚಿ ಫಲಕಗಳು ಕಾಡು ಹಾಗೂ ಪೊದೆ ಬೆಳೆದು ಕಣ್ಮರೆಯಾಗಿದ್ದು, ಇದರಿಂದ ವಾಹನಗಳ ಚಾಲಕರು ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ಇಂತಹ ದಿಕ್ಸೂಚಕಗಳನ್ನು ಹಾಕಲಾಗಿದ್ದರೂ ಕಾಡು, ಪೊದೆ ಬೆಳೆದು ದಿಕ್ಸೂಚಿ ಫಲಕಗಳನ್ನು ಮರೆ ಮಾಡಿದೆ.
ಇದರಿಂದಾಗಿ ಅನ್ಯರಾಜ್ಯಗಳಿಂದ ಸರಕು ಹೇರಿಕೊಂಡು ಮತ್ತು ಇತರ ಅಗತ್ಯಗಳಿಗೆ ಬರುವ ವಾಹನ ಚಾಲಕರಿಗೆ ಸಮಸ್ಯೆಯಾಗುತ್ತಿದೆ. ಕೆಲವು ವಾಹನ ಚಾಲಕರು ದಿಕ್ಸೂಚಿ ಫಲಕ ಮರೆಯಾದುದರಿಂದ ದಾರಿ ತಪ್ಪಿ ಎಲ್ಲೆಲ್ಲಿಗೋ ಹೋಗಿ ಮತ್ತೆ ಹಿಂದುರುಗಿ ಬಂದ ಘಟನೆಗಳು ಹಲವು ನಡೆದಿದೆ.ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಬಹಳಷ್ಟು ಎತ್ತರಕ್ಕೆ ಕಾಡು, ಪೊದೆ ಬೆಳೆದು ವಾಹನ ಸಂಚಾರಕ್ಕೂ ಭೀತಿಯಾಗಿ ಕಾಡುತ್ತಿದೆ. ಅಲ್ಲದೆ ರಸ್ತೆಯ ಮಧ್ಯೆ ಸ್ಥಾಪಿಸಿದ ರಸ್ತೆ ವಿಭಾಜಕ(ರಸ್ತೆ ಡಿವೈಡರ್)ಗಳಲ್ಲಿ ಕಾಡು ಬೆಳೆದು ವಾಹನ ಚಾಲಕರಿಗೆ ಬೆದರಿಕೆ ಹುಟ್ಟಿಸುತ್ತಿದೆ. ಕಾಸರಗೋಡು ನಗರದ ಅಡ್ಕತ್ತಬೈಲ್‌ನಿಂದ ಅಣಂಗೂರು ವರೆಗಿನ ರಸ್ತೆ ವಿಭಾಜಕದಲ್ಲಿ ಕಾಡು ಹಾಗು ಹುಲ್ಲು ಬೆಳೆದು ಕೊಂಡಿದೆ.
ಕಾಡು ಪೊದೆ ಬೆಳೆದು ರಸ್ತೆಗೆ ವಾಲಿ ನಿಂತಿದೆ. ಇದು ದ್ವಿಚಕ್ರ ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ. ಕಾಡು ಪೊದೆ ಬೆಳೆದಿರುವುದರಿಂದ ಸಿಗ್ನಲ್‌ಗಳೂ ಕಾಣಿಸುವುದಿಲ್ಲ. ಇದರಿಂದಾಗಿ ವಾಹನ ಅಪಘಾತಕ್ಕೂ ಕಾರಣವಾಗುತ್ತಿದೆ.ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಕಾಡು ಪೊದೆಯನ್ನು ಸವರಿ ವಾಹನ ಚಾಲಕರಿಗೆ ಸುಗಮವಾಗಿ ಸಾಗಲು ಅನುವು ಮಾಡಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕಾಗಿದೆ.
ಚಿತ್ರ: ಶ್ರೀಕಾಂತ್ ಕಾಸರಗೋಡು