Advertisement

ನೇಪಾಳದೊಂದಿಗೆ ಕಸಾಪ ನೆಂಟಸ್ತನ

12:30 PM Sep 24, 2018 | |

ಬೆಂಗಳೂರು: ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆ ದೃಷ್ಟಿಯಿಂದ ನೇಪಾಳದೊಂದಿಗೆ ನೆಂಟಸ್ತನ ಮಾಡಲು ಕನ್ನಡ ಸಾಹಿತ್ಯ ಪರಿಷತ್‌ ಮುಂದಾಗಿದೆ. ಆ  ನಿಟ್ಟಿನಲ್ಲಿ ಕನ್ನಡದ ಹೆಸರಾಂತ ಸಾಹಿತಿಗಳ ಕವಿತೆಗಳು ನೇಪಾಳಿ ಭಾಷೆಗೆ, ಹಾಗೇ ಆ ಭಾಷೆಯ ಹೆಸರಾಂತ ಕವಿಗಳ ಕವಿತೆಗಳು ಕನ್ನಡ ಭಾಷೆಯಲ್ಲಿ  ದೊರೆಯುವಂತೆ ಮಾಡುವ ಯೋಜನೆ ಸಿದ್ಧಪಡಿಸಿದ್ದು, ಇನ್ನು 3 ತಿಂಗಳಲ್ಲಿ ಓದುಗರಿಗೆ ಲಭ್ಯವಾಗಲಿದೆ. 

Advertisement

ನೇಪಾಳಿ ಭಾಷಾ ಸಾಂಸ್ಕೃತಿಕ ಮತ್ತು ಸಾಹಿತ್ಯ ವಿಭಾಗದ 6 ಮಂದಿ ಒಳಗೊಂಡ ನಿಯೋಗ ಕಳೆದ ವರ್ಷ ನೇಪಾಳ ಕಲಾ ಡಾಟ್‌.ಕಾಂ ಮುಖ್ಯಸ್ಥೆ  ಮಮಿಲಾ ಜೋಷಿ ನೇತೃತ್ವದಲ್ಲಿ ಬೆಂಗಳೂರಿಗೆ ಭೇಟಿ ನೀಡಿತ್ತು. ಈ ವೇಳೆ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮನು ಬಳಿಗಾರ್‌ ರನ್ನು ಭೇಟಿ ಮಾಡಿ,  ಕವಿತೆಗಳ ವಿನಿಮಯದ ಸಂಬಂಧ ಮಾತುಕತೆ ನಡೆಸಿತ್ತು. 

ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌ ಮತ್ತು ಮಮಿಲಾ ಜೋಷಿ ಅವರು ಕವಿತೆ ವಿನಿಮಯದ  ಕುರಿತು ಒಪ್ಪಿಗೆ ಸೂಚಿಸಿದ್ದರು. ಈ ವೇಳೆ ಕನ್ನಡ ಸಾಹಿತ್ಯ ಲೋಕದ ಜ್ಞಾನಪೀಠ ಪುರಸ್ಕೃತ ಕವಿಗಳ ಜತೆಗೆ ಇತರೆ 50 ಕವಿಗಳ ಕವಿತೆಗಳನ್ನು ನೇಪಾಳಿ  ಭಾಷೆಗೆ, ಹಾಗೆಯೆ ನೇಪಾಳಿ ಭಾಷೆಯ 50 ಕವಿತೆಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುವ ಸಂಬಂಧದ ಒಪ್ಪಂದಕ್ಕೆ ಪರಿಷತ್ತಿನ  ಹಿರಿಯರ ಸಮ್ಮುಖದಲ್ಲಿ ಸಹಿ ಹಾಕಲಾಗಿತ್ತು. 

ಯಾವ ಕವಿಗಳ ಕವಿತೆಗಳು?: ಜ್ಞಾನಪೀಠ ಪುರಸ್ಕೃತರಾದ ಕುವೆಂಪು, ಡಾ.ದ.ರಾ.ಬೇಂದ್ರೆ, ಡಾ.ವಿ.ಕೃ.ಗೋಕಾಕ್‌, ಡಾ.ಚಂದ್ರಶೇಖರ ಕಂಬಾರ,  ಡಾ.ಯು.ಆರ್‌.ಅನಂತಮೂರ್ತಿ ಜತೆಗೆ ರಾಷ್ಟ್ರಕವಿ ಡಾ.ಜಿ.ಎಸ್‌.ಶಿವರುದ್ರಪ್ಪ, ಪಿ. ಲಂಕೇಶ್‌, ಡಾ.ಸಿದ್ದಲಿಂಗಯ್ಯ, ಡಾ.ಕೆ.ಎಸ್‌. ನಿಸಾರ್‌ ಅಹಮದ್‌,  ಡಾ.ಚಂದ್ರಶೇಖರ ಪಾಟೀಲ, ಡಾ.ಬರಗೂರ ರಾಮಚಂದ್ರಪ್ಪ, ಸಿದ್ಧಯ್ಯ ಪುರಾಣಿಕ್‌, ಡಾ.ದೊಡ್ಡರಂಗೇಗೌಡ, 

ಡಾ.ಚನ್ನವೀರ ಕಣವಿ, ಡಾ.ಸುಮತೀಂದ್ರ ನಾಡಿಗ, ಡಾ.ಎಚ್‌.ಎಸ್‌.ವೆಂಕಟೇಶ ಮೂರ್ತಿ, ಡಾ.ಜಯಂತ ಕಾಯ್ಕಿಣಿ, ಪ್ರೊ. ತೇಜಸ್ವಿನಿ ಕಟ್ಟಿಮನಿ ಸೇರಿದಂತೆ ನಾಡಿನ 50  ಹೆಸರಾಂತ ಸಾಹಿತಿಗಳ ಕವಿತೆಗಳು ನೇಪಾಳಿ ಭಾಷೆಗೆ ಅನುವಾದವಾಗಲಿವೆ. ಕುವೆಂಪು ಕವಿತೆಗಳನ್ನು ಎನ್‌.ಎಸ್‌. ನಟರಾಜ, ದ.ರಾ.ಬೇಂದ್ರೆ  ಕವಿತೆಯನ್ನು ಕೆ.ಎಸ್‌. ರಾಘವೇಂದ್ರ, ಡಾ.ಯು.ಆರ್‌. ಅನಂತಮೂರ್ತಿ ಕವಿತೆಯನ್ನು ಸುಕೇತು ಮೆಹ್ತಾ

Advertisement

ಮತ್ತು ಶರತ್‌ ಅನಂತಮೂರ್ತಿ, ಡಾ.ಜಿ.ಎಸ್‌.ಶಿವರುದ್ರಪ್ಪ ಕವಿತೆಗಳನ್ನು ಜಿ.ಎಸ್‌.ಆಮೂರ, ಪಿ.ಲಂಕೇಶ್‌ ಅವರ ಕವಿತೆಗಳನ್ನು ಪಿ.ರಾಮಮೂರ್ತಿ ಆಂಗ್ಲ ಭಾಷೆಗೆ ಭಾಷಾಂತರಿಸಿದ್ದಾರೆ. ಇನೂ,° ಹಲವು ಕವಿಗಳ ಕವಿತೆಗಳ ಇಂಗ್ಲಿಷ್‌ ಅನುವಾದವನ್ನು ಬೇರೆ-ಬೇರೆ ಅನುವಾದಕರಿಗೆ ಕಸಾಪ ವಹಿಸಿದೆ. ನಂತರ  ಅವುಗಳನ್ನು ನೇಪಾಳಿ ಭಾಷಾಂತರಕಾರರು ತಮ್ಮ ಭಾಷೆಗೆ ತರ್ಜುಮೆ ಮಾಡುತ್ತಾರೆ. 

ನೇಪಾಳಿ ಭಾಷೆಯ ಕವಿಗಳು: ಅದೇರೀತಿ ನೇಪಾಳಿ ಹೆಸರಾಂತ ಕವಿ ಗೋಪಾಲ ಪ್ರಸಾದ್‌ ರಿಮಾಲ್‌, ಲಕ್ಷಿ ಪ್ರಸಾದ್‌ ದೇವ್‌ಕೋಟ, ತುಳಸಿ ದಿವಾಸ್‌,  ಶೈಲೇಂದ್ರ ಸರ್ಕಾರ್‌, ನರೇಶ್‌ ಶಕ್ಯಾ, ಎಸ್‌.ಪಿ.ಕೋಯಿರಾಲ, ಅವಿನಾಶ್‌ ಶ್ರೇಷ್ಠ, ಕೃಷ್ಣ ಸೇನ್‌ ಇನ್ನಿತರ ಕವಿಗಳ ಕವಿತೆಗಳನ್ನು ಆಂಗ್ಲ ಭಾಷೆಗೆ, ಅಲ್ಲಿಂದ  ಕನ್ನಡಕ್ಕೆ ಅನುವಾದ ಮಾಡಲಾಗುತ್ತದೆ.

ಮುದ್ರಣ ಹಂತದಲ್ಲಿ ಪುಸ್ತಕ: ಕನ್ನಡ ಭಾಷೆಯ ಕವಿತೆಗಳನ್ನು ಈಗಾಗಲೇ ಇಂಗ್ಲಿಷ್‌ ಭಾಷೆಗೆ ಅನುವಾದ ಮಾಡಿ ನೇಪಾಳಿಗೂ  ಭಾಷಾಂತರಗೊಳಿಸಲಾಗಿದ್ದು, ನೇಪಾಳಿ ಕವಿತೆಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಕಾರ್ಯವೂ ಮುಗಿದು, ಪುಸ್ತಕಗಳು ಮುದ್ರಣ ಹಂತದಲ್ಲಿವೆ. 3  ತಿಂಗಳಲ್ಲಿ ಈ ಕೆಲಸ ಪೂರ್ಣ ಗೊಳ್ಳಲಿದ್ದು, ಶೀಘ್ರದಲ್ಲೇ ಅವುಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಕಸಾಪ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಭಾಷಾ ಬೆಳವಣಿಗೆ ಹಿನ್ನೆಲೆಯಲ್ಲಿ ಕಸಾಪ ನೇಪಾಳದೊಂದಿಗೆ  ನೆಂಟಸ್ತಿಕೆ ಮಾಡಲು ಮುಂದಾಗಿದೆ. ಈ ಕೊಡು-ಕೊಳ್ಳುವಿಕೆ ಪ್ರಕ್ರಿಯೆಯಿಂದಾಗಿ ಕನ್ನಡ ಭಾಷಾ ಸೊಗಡು, ನೇಪಾಳಿಗೆ  ಹಾಗೂ ಅಲ್ಲಿನ ಸಾಹಿತ್ಯದ ಸೊಗಡು ಕನ್ನಡಿಗರಿಗೆ  ದೊರೆಯಲಿದೆ. 
-ಡಾ.ಮನು ಬಳಿಗಾರ್‌, ಕಸಾಪ ಅಧ್ಯಕ್ಷ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next