Advertisement

ವಿವೇಕಾನಂದಗೌಡಗೆ ಜಿಲ್ಲಾ ಕಸಾಪ ಸಾರಥ್ಯ

08:01 PM Nov 22, 2021 | Team Udayavani |

ಗದಗ: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಜಿಲ್ಲಾ ಕಸಾಪ ಚುನಾವಣೆಗೆ ರವಿವಾರ ಮತದಾನ ನಡೆದು ಫಲಿತಾಂಶವೂ ಪ್ರಕಟಗೊಂಡಿದೆ. ಈ ಬಾರಿ ಕಸಾಪ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆಲ್ಲುವ ವಿಶ್ವಾಸ ಹೊಂದಿದ್ದ ನಿಕಟಪೂರ್ವ ಕಸಾಪ ಜಿಲ್ಲಾಧ್ಯಕ್ಷ ಡಾ| ಶರಣು ಗೋಗೇರಿ ಪ್ರತಿಸ್ಪರ್ಧಿ ಸಾಹಿತಿ ವಿವೇಕಾನಂದ ಗೌಡ ಪಾಟೀಲ ಎದುರು ಮುಗ್ಗರಿಸಿದ್ದಾರೆ. 565 ಮತಗಳಿಂದ ವಿವೇಕಾನಂದಗೌಡ ಜಯಭೇರಿ ಬಾರಿಸಿದ್ದಾರೆ.

Advertisement

ಒಟ್ಟು 5,999 ಮತದಾರರ ಪೈಕಿ ಚುನಾವಣೆಯಲ್ಲಿ 4,052 ಮತಗಳು ಚಲಾವಣೆಯಾಗಿದ್ದವು. ಅದರಲ್ಲಿ 4024 ಮತಗಳು ಕ್ರಮಬದ್ಧವಾಗಿದ್ದು, 28 ಮತಗಳು ತಿರಸ್ಕೃತಗೊಂಡಿವೆ. 2231 ಮತಗಳಿಂದ ವಿವೇಕಾನಂದಗೌಡ ಪಾಟೀಲ ಜಯ ಸಾಧಿಸಿದ್ದಾರೆ. ಸಮೀಪ ಸ್ಪರ್ಧಿ ಶರಣು ಗೋಗೇರಿ 1666, ಡಾ| ಸಂಗಮೇಶ್‌ ವಿ. ತಮ್ಮನಗೌಡ್ರ 67 ಹಾಗೂ ಐ.ಕೆ. ಕಮ್ಮಾರ 60 ಮತ ಪಡೆದಿದ್ದಾರೆ.

ಗದಗ-274, ಲಕ್ಷ್ಮೇಶ್ವರ 97, ನರೇಗಲ್‌ 94, ರೋಣ 19, ಗಜೇಂದ್ರಗಡ 84, ಮುಂಡರಗಿ 30, ನರಗುಂದ 1 ಸೇರಿ 762 ಮತಗಳೊಂದಿಗೆ ವಿವೇಕಾನಂದಗೌಡ ಪಾಟೀಲ ಮುನ್ನಡೆಯಲ್ಲಿದ್ದರೆ, ಶರಣು ಗೋಗೇರಿ ಅವರು ಶಿರಹಟ್ಟಿ ಮತ್ತು ಹೊಳೆಆಲೂರಿನಲ್ಲಿ ಮಾತ್ರ ಕ್ರಮವಾಗಿ 13 ಹಾಗೂ 21 ಮತಗಳ ಮುನ್ನಡೆ ಹೊಂದಿದ್ದರು.

ಗುಪ್ತಗಾಮಿನಿಯಾದ ವಿರೋಧಿ ಅಲೆ:
ಕಳೆದ ಬಾರಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಗಿರುವ ಹಲವು ಅಭಿವೃದ್ಧಿ ಕಾರ್ಯಗಳು ಮತ್ತು ಸಾಹಿತ್ಯ ಚಟುವಟಿಕೆಗಳ ಹಿನ್ನೆಲೆಯಲ್ಲಿ ಡಾ| ಶರಣು ಗೋಗೇರಿ ಮರು ಆಯ್ಕೆ ಕುರಿತು ಅತೀವ ವಿಶ್ವಾಸದಲ್ಲಿದ್ದರು. ನೌಕರರ ಸಂಘದ ಜಿಲ್ಲಾಧ್ಯಕ್ಷರು, ಹಲವು ಶಿಕ್ಷಕರ ಸಂಘದ ಅಧ್ಯಕರು, ಹಲವು ಸಾಹಿತಿಗಳೊಂದಿಗೆ ಸಂಘಟಿತರಾಗಿ ವರ್ಷದಿಂದ ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದರು. ಆದರೂ, ಮತದಾರರು ಕೈಹಿಡಿಯಲಿಲ್ಲ.

ನಿಕಟ ಪೂರ್ವ ಅಧ್ಯಕ್ಷ ಗೋಗೇರಿ ಅವರ ಆಡಳಿತದಲ್ಲಿ ನಡೆದಿದೆ ಎನ್ನಲಾದ ಸ್ವಜನ ಪಕ್ಷಪಾತ, ಹಿರಿಯರ ಕಡಗಣನೆಯನ್ನೇ ವಿವೇಕದಿಂದ ಬಳಸಿಕೊಂಡರು ಎನ್ನಲಾಗುತ್ತಿದೆ. ಆಡಳಿತ ವಿರೋಧಿ ಅಲೆಯನ್ನು ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಟ್ಟಿದ್ದಾರೆ. ಹಿಂದಿನ ಅವಧಿಗಳಲ್ಲಿ ವಿವೇಕಾನಂದಗೌಡ ಪಾಟೀಲರು ಗದಗ ತಾಲೂಕಾಧ್ಯಕ್ಷರಾಗಿ, ಗೋಗೇರಿ ಅವರ ಅವಧಿಯಲ್ಲಿ ಗೌರವ ಕಾರ್ಯದರ್ಶಿಗಳಾಗಿರುವುದು, ಜ|ತೋಂಟದಾರ್ಯ ಮಠ ಶಿವಾನುಭವ ಸಮಿತಿ ಅಧ್ಯಕ್ಷರು, ಸರಕಾರಿ ಶಾಲೆಯ ಶಿಕ್ಷಕರಾಗೂ ಉತ್ತಮ ಕೆಲಸಗಳನ್ನು ಮಾಡಿದ್ದಾರೆ.

Advertisement

ಈ ಬಾರಿ ಚುನಾವಣೆಯಲ್ಲಿ ಹೊಸಬರಿಗೆ ಅವಕಾಶ ನೀಡಬೇಕು. ಕಸಾಪಕ್ಕೆ ಒಮ್ಮೆ ಅಧ್ಯಕ್ಷರಾದವರು ಮತ್ತೂಮ್ಮೆ ಆಯ್ಕೆ ಆಗಬಾರದೆಂಬ ಅಲಿಖೀತ ನಿಯಮವನ್ನು ಉಳಿಸಬೇಕು ಎಂದು ಪ್ರಜ್ಞಾವಂತ ಮತದಾರರು ನಿರ್ಧರಿಸಿದ್ದರು. ಅದೆಲ್ಲವೂ ವಿವೇಕಾನಂದಗೌಡರ ಗೆಲುವಿಗೆ ಪೂರಕವಾಯಿತು.ಆದರೆ, ಚುನಾವಣೆಯಲ್ಲಿ ಡಾ| ಶರಣು ಗೋಗೇರಿ ಅವರ ವಿರುದ್ಧದ ಅಲೆ ಗುಪ್ತಗಾಮಿಯಾಗಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.

ಕಸಾಪ ಚುನಾವಣೆ ನಡೆದ ರೀತಿ ಅತ್ಯಂತ ಅಸಹ್ಯವಾಗಿತ್ತು. ಹಣ, ಹೆಂಡ ಹಾಗೂ ಕ್ಷುಲ್ಲಕ ಕುತಂತ್ರದಿಂದ ಬೇಸತ್ತು ಹೋಗಿದ್ದೇವು. ಅನೇಕ ವಿಕೃತ ಮಾರ್ಗಗಳ ಮೂಲಕ ಚುನಾವಣೆ ಗೆಲ್ಲಲಾಗದು ಎಂಬುದನ್ನು ಜಾಣತನವನ್ನು ಮತದಾರರು ಸಾಬೀತು ಮಾಡಿದ್ದಾರೆ. ವಿವೇಕಾನಂದಗೌಡ ಅವರ ಗೆಲುವಿನಿಂದ ಸಜ್ಜನರು ಉಸಿರು ಬಿಡುವಂತಾಗಿದೆ. ಇದು ಜಿಲ್ಲೆಯ ಸಾತ್ವಿಕ ಕನ್ನಡ ಮನಸುಗಳ ಗೆಲುವಾಗಿದೆ.
∙ ಸಿದ್ದು ಯಾಪಲಪರ್ವಿ, ಹಿರಿಯ ಸಾಹಿತಿ

ಕನ್ನಡ ಸಾಹಿತ್ಯ ಪರಿಷತ್‌ನ್ನು ಎಲ್ಲರನ್ನೂ ಒಳಗೊಳ್ಳುವಿಕೆ ಪರಿಷತ್‌ ಆಗಬೇಕು. ಜಿಲ್ಲೆಯ ಜಾನಪದ ಕಲಾವಿದರು, ಚಿತ್ರ ಕಲಾವಿದರು ಎಲ್ಲರನ್ನೂ ಕೂಡಿಸಿಕೊಂಡು ಕನ್ನಡದ ತೇರು ಎಳೆಯಬೇಕು ಎಂಬುದು ನನ್ನ ಮನದ ಇಂಗಿತವಾಗಿತ್ತು. ಸಾಹಿತ್ಯ ಸಮ್ಮೇಳನಗಳು ನಗರ ಕೇಂದ್ರಿತವಾಗಿವೆ. ಸಾಹಿತ್ಯದ ಕಂಪನ್ನು ಹಳ್ಳಿ ಹಳ್ಳಿಗೂ ಪಸರಿಸುವ ಉದ್ದೇಶ ನನ್ನದು. ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನವನ್ನು ತಾಲೂಕು ಕೇಂದ್ರಗಳಲ್ಲಿ, ತಾಲೂಕು ಮಟ್ಟದ ಸಮ್ಮೇಳನಗಳನ್ನು ಹೋಬಳಿ, ಹಳ್ಳಿ ಮಟ್ಟದಲ್ಲಿ ನಡೆಸುವ ಉದ್ದೇಶವಿದೆ.
ವಿವೇಕಾನಂದಗೌಡ ಪಾಟೀಲ,
ಕಸಾಪ ನೂತನ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next