Advertisement

ಯುವಕರನ್ನು ವಶಕ್ಕೆ ಪಡೆದ ಪೊಲೀಸರು: ಪೋಷಕರಿಂದ ಕಸಬಾಪೇಟೆ ಠಾಣೆಗೆ ಏಕಾಏಕಿ ಮುತ್ತಿಗೆ

01:03 PM Nov 02, 2020 | sudhir |

ಹುಬ್ಬಳ್ಳಿ: ಫ್ರಾನ್ಸ್‌ ದೇಶದ ಪ್ರಧಾನಿಯು ಒಂದು ಕೋಮಿನ ಧರ್ಮಗುರು ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ, ಪ್ರಚೋದನೆ ಮಾಡುತ್ತಿದ್ದ ಯುವಕರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದಿದ್ದನ್ನು ವಿರೋಧಿಸಿ ಕೆಲವರು ಕಸಬಾಪೇಟೆ ಠಾಣೆಗೆ ಏಕಾಏಕಿ ಮುತ್ತಿಗೆ ಹಾಕಿದ ಪ್ರಸಂಗ ರವಿವಾರ ನಡೆಯಿತು.

Advertisement

ಫ್ರಾನ್ಸ್‌ ಪ್ರಧಾನಿಯು ಧರ್ಮಗುರು ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಕಸಬಾಪೇಟೆ ಠಾಣೆ ವ್ಯಾಪ್ತಿಯ ಕೆಲ ಯುವಕರು ಅವರ ಭಾವಚಿತ್ರವಿರುವ ಕರಪತ್ರ ಮುದ್ರಿಸಿ ಹಂಚಿಕೆ ಮಾಡಿದ್ದಲ್ಲದೆ, ಭಾವಚಿತ್ರ ತುಳಿದು ಆಕ್ರೋಶ ವ್ಯಕ್ತಪಡಿಸಿ
ಇನ್ನುಳಿದವರನ್ನು ಪ್ರಚೋದನೆ ಮಾಡುತ್ತಿದ್ದರು ಎನ್ನುವ ಆರೋಪದ ಮೇರೆಗೆ ಕಸಬಾಪೇಟೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಮೂವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು. ಇದನ್ನು ವಿರೋಧಿಸಿ ಯುವಕರ ಪಾಲಕರು ಹಾಗೂ ಇನ್ನಿತರರು ಠಾಣೆಗೆ ಏಕಾಏಕಿ ಮುತ್ತಿಗೆ ಹಾಕಿ, ಈ ಬಗ್ಗೆ ಯಾರು ದೂರು ಕೊಡದಿದ್ದರೂ ತಮ್ಮ ಮಕ್ಕಳನ್ನಷ್ಟೆ ಏಕೆ ವಶಕ್ಕೆ ಪಡೆದಿದ್ದೀರಿ. ಇನ್ನುಳಿದವರನ್ನು ಏಕೆ ವಶಕ್ಕೆ ಪಡೆದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಹಿರಿಯ ಅಧಿಕಾರಿಗಳು ಹಾಗೂ ಠಾಣೆಯ ಇನ್ಸ್‌ಪೆಕ್ಟರ್‌ ಅವರನ್ನೆಲ್ಲ ಸಮಾಧಾನಪಡಿಸಿ, ಸಮಜಾಯಿಷಿ ನೀಡಿದ ಮೇಲೆ ಅವರೆಲ್ಲ ಠಾಣೆಯಿಂದ
ಹೊರಟು ಹೋದರು.

ನೂರಾರು ಜನರು ಏಕಾಏಕಿ ಠಾಣೆಗೆ ಮುತ್ತಿಗೆ ಹಾಕಿದ್ದರಿಂದ ಠಾಣೆಯ ಸುತ್ತಲೂ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್‌ ಬಂದೋಬಸ್ತ್ ಕೈಗೊಂಡು ತಿಳಿಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next