ಬೆಂಗಳೂರು: ಭಾಷಾವಾರು ಪ್ರಾಂತ್ಯಗಳ ರಚನೆ ವೇಳೆ ಚದುರಿ ಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸಿದ ಶ್ರೇಯಸ್ಸು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಲ್ಲುತ್ತದೆ ಎಂದು ಮಹಾರಾಣಿ ಕಾಲೇಜಿನ ನಿವೃತ್ತ ಉಪನ್ಯಾಸಕಿ ವಿದ್ಯಾಲಕ್ಷ್ಮೀ ವಿ ಭಾರದ್ವಾಜ್ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಭಾನುವಾರ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಕನ್ನಡ ಸಾಹಿತ್ಯ ಪರಿಷತ್ತು ಸಾಗಿ ಬಂದ ದಾರಿ’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಏಳ್ಗೆಗಾಗಿ ಹಲವು ಮಂದಿ ಬೆವರು ಸುರಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಪರಿಷತ್ತು ಇಂದು ದೊಡ್ಡದಾಗಿ ಬೆಳೆದಿದೆ. ಹಲವು ಮಂದಿ ದಾನಿಗಳು ಪರಿಷತ್ತನ್ನು ಕಟ್ಟಿ ಬೆಳೆಸಿದ್ದು ಅವರ ಕೊಡುಗೆಗಳನ್ನು ಮರೆಯುವಂತಿಲ್ಲ. ಕನ್ನಡ ನಾಡು – ನುಡಿಗೆ ಧಕ್ಕೆ ಬಂದಾಗ ಮೊದಲು ಸಿಡಿದೇಳುವುದು ಕನ್ನಡ ಸಾಹಿತ್ಯ ಪರಿಷತ್ತು ಎಂಬುವುದನ್ನು ಕನ್ನಡಿಗರು ಮರೆಯಲಾರರು ಎಂದು ಹೇಳಿದರು.
ಗಡಿನಾಡ ಕನ್ನಡಿಗರನ್ನು ಸಂಘಟಿಸುವುದರ ಜತೆಗೆ ಗಡಿನಾಡು ಪ್ರದೇಶದ ಮಕ್ಕಳ ಶಿಕ್ಷಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಾಹಿತ್ಯ ಪರಿಷತ್ತು, ಈಗಾಗಲೇ ಕನ್ನಡ ಭಾಷೆಯ ಹಿರಿಯ ಸಾಹಿತಿಗಳ ಕವಿತೆಗಳನ್ನು ನೇಪಾಳಿ ಭಾಷೆಗೆ.
ಹಾಗೇ ನೇಪಾಳಿ ಭಾಷೆಯ ಹಿರಿಯ ಸಾಹಿತಿಗಳ ಕವಿತೆಗಳನ್ನು ಕನ್ನಡಕ್ಕೆ ಪುಸ್ತಕ ರೂಪದಲ್ಲಿ ತರುತ್ತಿರುವುದು ಪ್ರಶಂಸನೀಯ. ದಲಿತ ಸಂಪುಟ ಹೊರತಲು ಸಿದ್ಧವಾಗಿರುವ ಪರಿಷತ್ತು, ದಲಿತ ಸಮ್ಮೇಳನ ನಡೆಸುವುದಕ್ಕೂ ಮುಂದಾಗಿರುವುದು ಸಂತಸ ಪಡುವ ಸಂಗತಿಯಾಗಿದೆ ಎಂದು ತಿಳಿಸಿದರು.
“ಕನ್ನಡ ನಾಡಿಗೆ ಔದ್ಯೋಗಿಕ ಅವಕಾಶಗಳು’ ಎಂಬ ವಿಷಯ ಬಗ್ಗೆ ಮಾತನಾಡಿದ ಸಾಹಿತಿ ಮತ್ತು ಸಂಸ್ಕೃತಿಕ ಚಿಂತಕ ವಿ.ರಂಗನಾಥರಾವ್ , ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗಾಗಿಯೇ ಉದ್ಯೋಗಗಳು ಮೀಸಲಿದ್ದು, ಅವುಗಳನ್ನು ಪಡೆದು ಕೊಳ್ಳುವುದರತ್ತ ಆಲೋಚನೆ ಮಾಡಬೇಕಾಗಿದೆ ಎಂದು ಹೇಳಿದರು.
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾಯಾಣ್ಣ, ಗೌರವ ಕಾರ್ಯದರ್ಶಿ ಬಿ.ಶೃಂಗೇಶ್ವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.