Advertisement

ಕಸಾಪ ಶತಮಾನೋತ್ಸವ ಭವನ ಶೀಘ್ರ ಆರಂಭ

12:48 PM Nov 09, 2017 | Team Udayavani |

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ ಶತಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಶಂಕುಸ್ಥಾಪನೆ ನೆರವೇರಿದ್ದ ಪರಿಷತ್ತಿನ ಶತಮಾನೋತ್ಸವ ಭವನ ಇದೀಗ ಉದ್ಘಾಟನೆಗೆ ಸಜ್ಜಾಗಿದೆ. 2014ರಲ್ಲಿ ಪುಂಡಲೀಕ ಹಾಲಂಬಿ ಅವರು ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿದ್ದಾಗ ಶತಮಾನೋತ್ಸವ ನಡೆದಿತ್ತು. ಈ ಸಂಭ್ರಮಕ್ಕಾಗಿ ಪರಿಷತ್‌ ಆವರಣದಲ್ಲಿ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಉದ್ದೇಶಿಸಿ ಜೂ.17ರಂದು ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಸರ್ಕಾರ ಈ ಭವನ ನಿರ್ಮಾಣಕ್ಕೆ ಸಕಾಲದಲ್ಲಿ ಸುಮಾರು 2.5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಡಲಾಗಿತ್ತು.

Advertisement

ಆದರೆ, ಕಾಮಗಾರಿ ನಡೆಸಬೇಕಾಗಿದ್ದ ಕರ್ನಾಟಕ ವಸತಿ ನಿಗಮ ಕಟ್ಟಡ ನಿರ್ಮಾಣಕ್ಕೆ ಮೀನಮೇಷ ಎಣಿಸಿತ್ತು. ಇದರಿಂದ ಶತಮಾನ ಪೂರೈಸಿದ ಹೆಗ್ಗು ರುತಾಗಿ ಭವನ ನಿರ್ಮಾಣವನ್ನು ತಮ್ಮ ಅಧಿಕಾರ ಅವಧಿಯಲ್ಲೇ ಮುಗಿಸಬೇಕು ಎಂಬ ಹಾಲಂಬಿ ಅವರ ಆಸೆ ಕೊನೆಗೂ ಈಡೇರಲೇ ಇಲ್ಲ. 

ಕರ್ನಾಟಕ ವಸತಿ ನಿಗಮಕ್ಕೆ ಕಡತ ಹಿಡಿದುಕೊಂಡು ಅಲೆದು ಸಾಕಾಗಿದ್ದ ಪುಂಡಲೀಕ ಹಾಲಂಬಿ ಬಹಳ ಬೇಸರದಿಂದ ಸುಮ್ಮನಾಗಿದ್ದರು. ಈ ನಡುವೆಯೇ ಪರಿಷತ್ತಿನ ಚುನಾವಣೆಯೂ ಘೋಷಣೆಯಾಗಿದ್ದರಿಂದ ಶತಮಾನೋತ್ಸವ
ಭವನದ ಕಾಮಗಾರಿ ಆರಂಭಗೊಳ್ಳಲಿಲ್ಲ. 

ಹಾಲಂಬಿ ಯಿಂದ ಗುದ್ದಲಿಪೂಜೆ: ಕಸಾಪ ಇತಿಹಾಸದಲ್ಲೇ ಅತ್ಯಂತ ಅಧಿಕ ಮತಗಳಿಂದ ಚುನಾಯಿತರಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಮನುಬಳಿಗಾರ್‌ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಶತಮಾನೋತ್ಸವ ಭವನಕ್ಕೆ ಹಾಲಂಬಿ ಅವರಿಂದ ಗುದ್ದಲಿಪೂಜೆ ಮಾಡಿಸಿದರು. ಅಷ್ಟೇ ಅಲ್ಲದೇ 2016 ಏಪ್ರಿಲ್‌-ಮೇ ತಿಂಗಳಲ್ಲಿ ಭವನ ಕಾಮಗಾರಿ ಆರಂಭಿಸುವಂತೆ ಕರ್ನಾಟಕ ವಸತಿ ನಿಗಮದ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು. ಈ ಪರಿಣಾಮ 18 ತಿಂಗಳಲ್ಲಿ ಸುಸಜ್ಜಿತವಾದ ಶತಮಾನೋತ್ಸವ ಭವನ ತಲೆ ಎತ್ತಿದ್ದು, ಇದೀಗ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ.

4.20 ಕೋಟಿ ರೂ. ಖರ್ಚು: ಕರ್ನಾಟಕ ವಸತಿ ನಿಗಮ ಸುಮಾರು 4.20 ಕೋಟಿ ರೂ.ವೆಚ್ಚದಲ್ಲಿ ಶತಮಾನೋತ್ಸವ ಭವನ ನಿರ್ಮಾಣ ಮಾಡಿದೆ. ರಾಜ್ಯ ಸರ್ಕಾರ ಭವನ ನಿರ್ಮಾಣಕ್ಕಾಗಿ 4 ಕೋಟಿ ರೂ.ಅನುದಾನ ನೀಡಿದ್ದು, 20 ಲಕ್ಷ ರೂ. ಬಡ್ಡಿಯಿಂದ ಬಂದಿದೆ. ಭವನದ ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಶೇ.10ರಷ್ಟು ಬಾಕಿ ಕಾಮಗಾರಿ ಉದ್ಘಾಟನೆ ದಿನದೊಳಗೆ ಮುಗಿಯಲಿದೆ. ಸಂಸದ ಪಿ.ಸಿ.ಮೋಹನ್‌ ಭವನದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಡಿಟೋರಿಯಂ ಅನ್ನು ಅತ್ಯಾಧುನಿಕವಾಗಿ ನಿರ್ಮಿಸಲು ಸುಮಾರು 50 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡುವ ಭರವಸೆ ನೀಡಿದ್ದು, ಆಡಿಟೋರಿಯಂ ವಿಶೇಷ ತಂತ್ರಜ್ಞಾನ ಬಳಸಿ ನಿರ್ಮಿಸಲಾಗುವುದು ಎಂದು ಕಸಾಪ ಅಧ್ಯಕ್ಷ ಮನುಬಳಿಗಾರ್‌ ಉದಯವಾಣಿಗೆ ತಿಳಿಸಿದರು.

Advertisement

ಮೂರು ಮಹಡಿ: ಶತಮಾನೋತ್ಸವ ಭವನದಲ್ಲಿ ಮೂರು ಮಹಡಿಗಳಿದ್ದು, ಕೆಳಮಹಡಿಯಲ್ಲಿ ಕಚೇರಿ, ವಾಚನಾಲಯ ಮತ್ತು 2 ಶೌಚಾಲಯಗಳಿವೆ. ಮೊದಲ ಮಹಡಿಯಲ್ಲಿ ಆರು ಅತಿಥಿ ಕೊಠಡಿಗಳಿದ್ದು, ಈ ಕೊಠಡಿಗಳಿಗೆ ಹೊಂದಿ ಕೊಂಡಂತೆ ಆರು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಮೂರನೇ ಮಹಡಿಯಲ್ಲಿ ಅತ್ಯಾಧುನಿಕ ಆಡಿಟೋರಿಯಂ ನಿರ್ಮಾಣಗೊಳ್ಳುತ್ತಿದ್ದು, ಅಲ್ಲಿ ಕೂಡ ಎರಡು ಶೌಚಾಲಯಗಳ ವ್ಯವಸ್ಥೆ ಮಾಡ ಲಾಗಿದೆ. ತಳ ಮಹಡಿಯಿಂದ 1 ಮತ್ತು 2ನೇ ಮಹಡಿಗೆ ಹೋಗಲು ಲಿಫ್ಟ್ ವ್ಯವಸ್ಥೆಯೂ ಇದೆ. 

ಸಿಎಂ ರಿಂದ ಅಡಿಗಲ್ಲು 
ಚಾಮರಾಜಪೇಟೆಯ ಕಸಾಪದ ಶ್ರೀಕೃಷ್ಣರಾಜ ಪರಿಷನ್ಮಂದಿರ ಹಿಂಭಾಗದಲ್ಲಿರುವ 4 ಸಾವಿರ ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ 2014 ಜೂನ್‌ 17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಡಿಗಲ್ಲು ಹಾಕಿದ್ದರು. 2016 ಏಪ್ರಿಲ್‌ ಅಂತ್ಯದಲ್ಲಿ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಪುಂಡಲೀಕ ಹಾಲಂಬಿ ಗುದ್ದಲಿಪೂಜೆ ಮಾಡಿದ್ದರು. ಕಸಾಪದ ಶತಮಾನೋತ್ಸವದ ಸ್ಮರಣೆಗಾಗಿ ಸರ್ಕಾರ ಸುಮಾರು 4 ಕೋಟಿ ರೂ.ಗಳನ್ನು ಶತಮಾನೋತ್ಸವ ಭವನಕ್ಕಾಗಿ ಅನುದಾನ ನೀಡಿತ್ತು. 

ಮೈಸೂರಿನ ಸಾಹಿತ್ಯ ಸಮ್ಮೇಳನ ಮುಗಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಿಂದ ಶತಮಾನೋತ್ಸವ ಭವನ ಲೋಕಾರ್ಪಣೆಗೊಳ್ಳಲಿದೆ. ಡಿಸೆಂಬರ್‌ ಮೊದಲ ಅಥವಾ ಎರಡನೇ ವಾರದಲ್ಲಿ ಮುಹೂರ್ತ ನಿಗದಿ ಮಾಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ಡಾ.ಮನುಬಳಿಗಾರ್‌, ಅಧ್ಯಕ್ಷ, ಕಸಾಪ 

Advertisement

Udayavani is now on Telegram. Click here to join our channel and stay updated with the latest news.

Next