Advertisement

ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ಸದಾಶಿವಗಡ ತಲುಪಿದ ರಾಜೇಶ್

03:47 PM Aug 24, 2021 | Team Udayavani |

ಕಾರವಾರ: ಅಫ್ಘಾನಿಸ್ತಾನದಲ್ಲಿ ಉದ್ಯೋಗದಲ್ಲಿದ್ದ ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಸದಾಶಿವಗಡ ಮೂಲದ ಯುವಕ ಸುರಕ್ಷಿತವಾಗಿ ಮನೆಗೆ  ತಲುಪಿದ್ದಾನೆ.

Advertisement

ಸದಾಶಿವಗಡ ತಾರೀವಾಡದ ರಾಜೇಶ್ ಪಡುವಳಕರ ಸುರಕ್ಷಿತವಾಗಿ ಕಾಬೂಲ್‌ ನಿಂದ ಏರ್‌ಲಿಫ್ಟ್ ಮೂಲಕ ದೆಹಲಿಗೆ ಬಂದು, ಅಲ್ಲಿಂದ ಮಂಗಳವಾರ ಬೆಳಿಗ್ಗೆ ಕಾರವಾರಕ್ಕೆ ಮರಳಿದ್ದಾರೆ. ಮನೆಯ ಮಗನ ಸುರಕ್ಷಿತ ವಾಪಸ್ಸಾದ ಕಾರಣದಿಂದ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿ ರಾಜೇಶ್ ಅಮೆರಿಕದ ಇಕೋಲೋಗ್ ಕಂಪೆನಿಯ ವಾಹನದಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಈ ಕಂಪನಿಯಲ್ಲಿ 700ರಷ್ಟು ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಇದು ಅಮೆರಿಕ ಸೇನೆಗೆ ಕ್ಯಾಟರಿಂಗ್ ಸೇರಿದಂತೆ ಇನ್ನಿತರ ಅವಶ್ಯಕತೆಗಳನ್ನು ಪೂರೈಸುತ್ತಿತ್ತು.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿ ನಡೆಸಿ, ಕಾಬೂಲ್‌ ನ್ನು ತನ್ನ ಸುಪರ್ದಿಗೆ ಪಡೆಯುವ ವೇಳೆ ರಾಜೇಶ್ ಅಮೆರಿಕ ಸೇನೆಯ ಆಶ್ರಯದಲ್ಲಿದ್ದ. ಅಮೆರಿಕ ಸೇನೆಯು ಭಾನುವಾರ ಕಾಬೂಲ್‌ನಿಂದ ಕತಾರ್‌ಗೆ ಅವರನ್ನು ಕರೆದೊಯ್ದು, ಅಲ್ಲಿಂದ ರಾಜೇಶ್ ಹಾಗೂ ಇತರೆ ಭಾರತೀಯರನ್ನು ಭಾರತೀಯ ಸೇನೆಯು ತನ್ನ ವಿಮಾನದ ಮೂಲಕ ದೆಹಲಿಗೆ ಕರೆತಂದಿತ್ತು. ಅಲ್ಲಿಂದ ಮುಂಬೈ- ಗೋವಾ ಮಾರ್ಗವಾಗಿ ಮಂಗಳವಾರ ಬೆಳಿಗ್ಗೆ ರಾಜೇಶ್ ಕಾರವಾರಕ್ಕೆ ತಲುಪಿದ್ದಾರೆ.

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಅಲ್ಲಿನ ಪರಿಸ್ಥಿತಿಯ ಬಗ್ಗೆ ಟಿವಿಗಳಲ್ಲಿ ಕಂಡು ರಾಜೇಶ್‌ನ ಕುಟುಂಬ ಆತಂಕಗೊಂಡಿತ್ತು. ಆದರೀಗ ಮನೆಯ ಮಗ ಸುರಕ್ಷಿತ ವಾಪಸ್ಸಾದ ಬಳಿಕ ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಇದನ್ನೂ ಓದಿ:ಕಾಬೂಲ್ ನಿಂದ ಉಕ್ರೇನ್ ವಿಮಾನವನ್ನು ಅಪಹರಿಸಿದ ಉಗ್ರರು: ಇರಾನ್ ನತ್ತ ಹಾರಾಟ

ಮಾಧ್ಯಮಗಳ ಜೊತೆ ಮಾತನಾಡಿದ ರಾಜೇಶ್, “ನನ್ನೊಂದಿಗೆ ನೇಪಾಳ, ಉಗಾಂಡ, ಶ್ರೀಲಂಕಾದ ಯುವಕರು ಸಹ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಕಾಬೂಲ್‌ ನಲ್ಲಿ ನಾವೆಲ್ಲರೂ ಕೆಲಸದಲ್ಲಿದ್ದ ವೇಳೆ ಆಗಸ್ಟ್ 14ರಂದು ಅಮೆರಿಕಾ ಸೇನೆ ನಮಗೆ ಸೂಚನೆ ನೀಡಿದ್ದರು. ಇಲ್ಲಿ ಸದ್ಯದ ಪರಿಸ್ಥಿತಿ ಸರಿಯಿಲ್ಲ ಎಂದಿದ್ದರು.  ತಾಲಿಬಾನಿಗಳು ಆಗಲೇ ಎಲ್ಲಾ ಪ್ರದೇಶಗಳನ್ನು ವಶಕ್ಕೆ ಪಡೆದಿದ್ದರು. ಆದರೆ ಕಾಬೂಲ್ ಮಾತ್ರ ಉಳಿದುಕೊಂಡಿತ್ತು. ಅಮೆರಿಕಾ ಸೇನೆಗೆ ಅಷ್ಟು ಬೇಗ ಕಾಬೂಲ್‌ ನ್ನು ವಶಪಡಿಸಿಕೊಳ್ಳುವ ಬಗ್ಗೆ ಊಹೆಯೂ ಇರಲಿಲ್ಲ. ಆದರೆ ಕೇವಲ ಒಂದು ದಿನದಲ್ಲೇ ಕಾಬೂಲನ್ನು ತಾಲಿಬಾನಿಗಳು ತಮ್ಮ ಸುಪರ್ದಿಗೆ ಪಡೆದುಕೊಂಡರು,” ಎಂದು ತಿಳಿಸಿದರು.

ನಮ್ಮ ಕಂಪನಿಯವರು‌ ಸಹ ಕಂಪನಿ ಬಂದ್ ಮಾಡುತ್ತೇವೆ, ನೀವೆಲ್ಲ ಇಲ್ಲಿಂದ ಹೊರಡಬೇಕು ಎಂದರು. ಇಲ್ಲಿಯ ಪರಿಸ್ಥಿತಿ ಸರಿಯಿಲ್ಲ ಎಂದು ತಿಳಿಸಿದರು. ಈ ಬಗ್ಗೆ ಇಂಡಿಯನ್ ರಾಯಭಾರಿಗೂ ಅವರು ಭಾರತೀಯರನ್ನು ಕರೆದೊಯ್ಯುವಂತೆ ತಿಳಿಸಿದ್ದರು. ಆದರೆ ಆ ಸಂದರ್ಭದಲ್ಲಿ ಏರ್‌ಪೋರ್ಟ್‌ ಗಳಲ್ಲಿ ಜನಜಂಗುಳಿ ಉಂಟಾಗಿತ್ತು. ವಿಮಾನಗಳು ಇಳಿಯಲೂ ಸಾಧ್ಯವಾಗದಷ್ಟು ಜನರು ಸೇರಿದ್ದರು. ಹೀಗಾಗಿ ನಮಗೆ ಎಲ್ಲಿಯೂ ಹೋಗಲಾಗದ ಪರಿಸ್ಥಿತಿ ಇದ್ದಾಗ ಅಮೆರಿಕ ಸೇನೆ ನೆರವಿಗೆ ಬಂದು, ನಮ್ಮನ್ನು ಕತಾರ್‌ ಗೆ ಕರೆದೊಯ್ದರು. ಅಲ್ಲಿಂದ ಭಾರತ ತಲುಪಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next