Advertisement

Karwar; ಅಂಬಾರಕೊಡ್ಲದ ಜೀವನಾಡಿ ಕವಿ ವಿಷ್ಣು ನಾಯ್ಕ ಇನ್ನಿಲ್ಲ

12:30 PM Feb 18, 2024 | Team Udayavani |

ಕಾರವಾರ: ಅಂಕೋಲಾದ ಅಂಬಾರಕೊಡ್ಲದ ಪರಿಮಳದ ಕವಿ ಲೇಖಕ ವಿಷ್ಣು ನಾಯ್ಕ ಶನಿವಾರ ರಾತ್ರಿ ಅಲ್ಪಕಾಲದ ಅಸ್ವಸ್ಥತೆಯಿಂದ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.

Advertisement

ಲೇಖಕ, ಪ್ರಕಾಶಕ, ಕವಿಯಾಗಿದ್ದ ಅವರು ನಾಡಿನ 170 ಕ್ಕೂ ಹೆಚ್ಚು ಲೇಖಕರ ಕತೆ, ಕವಿತೆ, ವಿಮರ್ಶೆ, ನಾಟಕ, ಕಾದಂಬರಿಗಳನ್ನು ಪ್ರಕಟಿಸಿದ್ದರು.

ಶಿಕ್ಷಕರಾಗಿ ಜೀವನ ಪ್ರಾರಂಭಿಸಿದ್ದ ಅವರು, ದಾಂಡೇಲಿ ಜನತಾ ವಿದ್ಯಾಲಯದಲ್ಲಿ ಹೈಸ್ಕೂಲ್ ಶಿಕ್ಷಕರಾಗಿ ಆರಂಭದಲ್ಲಿ ಕೆಲಸ ಮಾಡಿದ್ದರು. ನಂತರ ಅಂಕೋಲಾದಲ್ಲಿ ಪಿಯು ಕಾಲೇಜು ಉಪನ್ಯಾಸಕರಾಗಿದ್ದ ಅವರು ನಿವೃತ್ತಿಯ ನಂತರದಲ್ಲಿ ಕೆನರಾ ವೆಲ್ಫೆರ್‌ ಟ್ರಸ್ಟ್ ನ ಟ್ರಸ್ಟಿಗಳಾಗಿ ಸೇವೆ ಸಲ್ಲಿಸುತ್ತಿದ್ದರು.

ಅಂಕೋಲೆಯ ಅಂಬಾರಕೊಡ್ಲದ ಬುದವಂತಿ ಮತ್ತು ನಾಗಪ್ಪ ನಾಯ್ಕ ದಂಪತಿಗಳ ಮಗನಾಗಿ ಹುಟ್ಟಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು. ನೋವು ಪ್ರೀತಿಯ ಪ್ರಶ್ನೆ, ನನ್ನ ಅಂಬಾರ ಕೊಡ್ಲ ಮುಂತಾದ ಕವನ ಸಂಕಲನಗಳನ್ನು, ಬೀದಿ ನಾಟಕಗಳನ್ನು, ಹಾಲಕ್ಕಿಗಳ ಕುರಿತು ಕಾದಂಬರಿಯನ್ನು ಬರೆದಿದ್ದರು.

ಗೌರೀಶ ಕಾಯ್ಕಿಣಿಯವರ ವೈಚಾರಿಕ ಲೇಖನಗಳ ಸಹಿತ ಸಮಗ್ರ ಸಂಪುಟಗಳನ್ನು ಹತ್ತು ಸಂಚಿಕೆಗಳಲ್ಲಿ ಪ್ರಕಟಿಸಿದ್ದರು. ಕಾವ್ಯ, ನಾಟಕ, ಕಥೆ, ಕಾದಂಬರಿ, ಜಾನಪದ, ವಿಮರ್ಶೆ, ಶಿಕ್ಷಣ, ಪತ್ರಿಕೋದ್ಯಮ, ರಂಗಭೂಮಿ, ಚಳುವಳಿ, ಪ್ರಕಾಶನ ಹೀಗೆ ಬಹುಮುಖ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಮುಂಗಾರು ಪತ್ರಿಕೆಗೆ ವರದಿಗಾರರಾಗಿದ್ದ ಅವರು ಸಕಾಲಿಕ ಎಂಬ ವಾರ ಪತ್ರಿಕೆಯನ್ನು ಎರಡು ವರ್ಷ ನಡೆಸಿದ್ದರು.

Advertisement

ರಾಜ್ಯೋತ್ಸವ ಪ್ರಶಸ್ತಿ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಅವರಿಗೆ ಸಂದಿದ್ದವು. ಅಂಕೋಲಾ ಅವರ ಕಾರ್ಯಕ್ಷೇತ್ರವಾಗಿತ್ತು. ದಿನಕರ ದೇಸಾಯಿಯವರ ಒಡನಾಡಿಗಳಲ್ಲಿ ವಿಷ್ಣು ನಾಯ್ಕ ಪ್ರಮುಖರು‌. ಶಿಕ್ಷಣ ಸಂಘಟನೆಯಲ್ಲಿ ಕೆಲಸ ಮಾಡಿದರು. ಬೀದಿ ನಾಟಕಗಳ ಮೂಲಕ ಜನ ಜಾಗ್ರತೆ ಮೂಡಿಸಿದ್ದರು.

ವಿಷ್ಣು ನಾಯ್ಕ ಅವರ ಪತ್ನಿ ಕವಿತಾ ನಾಯ್ಕ ಐದು ವರ್ಷಗಳ ಹಿಂದೆ ನಿಧನರಾಗಿದ್ದರು. ವಿಷ್ಣು ನಾಯ್ಕ ಈರ್ವರು ಪುತ್ರಿಯರು, ಅಳಿಯಂದಿರು, ಇಬ್ಬರು  ಸಹೋದರರನ್ನು ಅಗಲಿದ್ದಾರೆ‌ . ಸಾಹಿತ್ಯ ಲೋಕದ ಹಲವರು ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಸಂತಾಪ: ಕವಿ ವಿಷ್ಣು ನಾಯ್ಕ ನಿಧನಕ್ಕೆ ಕತೆಗಾರ ರಾಮಕೃಷ್ಣ ಗುಂದಿ, ಲೇಖಕರಾದ ಮೋಹನ ಹಬ್ಬು , ದಾಂಡೇಲಿಯ ಜಯಚಂದ್ರನ್ , ಕೃಷ್ಣ ನಾಯಕ ಹಿಚ್ಕಡ, ಕಾರವಾರದ ನಾಗರಾಜ್ ಹರಪನಹಳ್ಳಿ, ಅಂಕೋಲಾದ ರೇಣುಕಾ ರಮಾನಂದ, ಶಿರಸಿಯ ಶೋಭಾ ನಾಯ್ಕ, ಹಿರೇಕೈ, ರಮಾನಂದ ನಾಯಕ, ಎನ್.ಆರ್ .ರೂಪಶ್ರೀ, ಶ್ರೀಧರ ನಾಯ್ಕ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next