Advertisement

ಕಾರವಾರ ಬಂದರಿಗೆ 16.69 ಕೋಟಿ ಆದಾಯ

02:09 PM Apr 08, 2019 | Team Udayavani |
ಕಾರವಾರ: ಕಾರವಾರದ ಸರ್ವಋತು ವಾಣಿಜ್ಯ ಬಂದರು ಏಪ್ರಿಲ್‌ 2018 ರಿಂದ ಮಾರ್ಚ್‌ 2019 ರವರೆಗೆ ದಾಖಲೆಯ ವಹಿವಾಟು ನಡೆಸಿದ್ದು, ಒಟ್ಟು 16.69 ಕೋಟಿ ಆದಾಯ ಗಳಿಸಿದೆ ಎಂದು ಬಂದರು ಅಧಿಕಾರಿ ಕ್ಯಾಪ್ಟನ್‌ ಸಿ.ಸ್ವಾಮಿ ಹೇಳಿದರು.
56 ನೇ ಮೆರಿಟೈಮ್‌ ಡೇ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಇಲ್ಲಿನ ವಾಣಿಜ್ಯ ಬಂದರು 2017-18 ನೇ ಆರ್ಥಿಕ ವರ್ಷಕ್ಕಿಂತ ಶೇ 43.89ರಷ್ಟು ಪ್ರಗತಿ ಕಂಡಿದೆ. ಬಂದರಿನ ಹಡಗು ಚಲಿಸುವ ಮಾರ್ಗದಲ್ಲಿದ್ದ ಹೂಳನ್ನು ತೆಗೆದ ಪರಿಣಾಮ ಹೆಚ್ಚಿನ ಹಡಗುಗಳು ಬರಲು ಸಾಧ್ಯವಾಯಿತು. ಇದರಿಂದಾಗಿ ಆದಾಯದಲ್ಲಿ ಏರಿಕೆ ಕಂಡಿದೆ ಎಂದು ಕ್ಯಾಪ್ಟನ್‌ ಸ್ವಾಮಿ ಹೇಳಿದರು. ಏಪ್ರಿಲ್‌ 2018 ರಿಂದ ಮಾರ್ಚ್‌ 2019 ರವರೆಗೆ ಸರಕು ಸಾಗಣೆಯ 157 ಹಡಗುಗಳು ಕಳೆದ ಕಾರವಾರ ಬಂದರಿಗೆ ಬಂದಿವೆ. ಕಳೆದ ಬಾರಿ 133 ಬಂದಿದ್ದವು. ಈ ಬಾರಿ ಶೇ 15.2ರಷ್ಟು ಏರಿಕೆಯಾಗಿದೆ. ಇದರಿಂದಾಗಿ ಕಸ್ಟಮ್ಸ್‌ ಇಲಾಖೆ 283.60 ಕೋಟಿ ಆದಾಯ ಗಳಿಸಿದೆ. ಇಲಾಖೆ ಬರೋಬ್ಬರಿ 152 ಕೋಟಿ ಆದಾಯವನ್ನು ಕೇವಲ ಡಾಂಬರು ಆಮದು ಚಟುವಟಿಕೆಗಳಿಂದಲೇ ಪಡೆದಿದೆ. 2.99 ಕೋಟಿ ಸೇವಾ ತೆರಿಗೆಯೂ ಪಾವತಿಯಾಗಿದೆ ಎಂದರು.
ಕಾರವಾರ ವಾಣಿಜ್ಯ ಬಂದರನ್ನು ಕೇಂದ್ರ ಸರ್ಕಾರವು ಹಡಗು ಸಂಚಾರ ನಿರ್ವಹಣಾ ವ್ಯವಸ್ಥೆ ಅಳವಡಿಸಲು ಆಯ್ಕೆ ಮಾಡಿದೆ. ಇದಕ್ಕೆ ತಾಂತ್ರಿಕ ಮತ್ತು ಹಣಕಾಸು ಸೌಲಭ್ಯಕ್ಕಾಗಿ 11.08 ಕೋಟಿ ನಿಗದಿ ಮಾಡಿದೆ. ಇದರಿಂದ ಬಂದರಿನಲ್ಲಿ ಭದ್ರತೆ ಹೆಚ್ಚಲಿದೆ. ಈ ಆರ್ಥಿಕ ವರ್ಷದಲ್ಲಿ ಇದರ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಕೇಂದ್ರ ಸರ್ಕಾರವು ನಮ್ಮ ಬಂದರಿಗೆ ತೈಲ ಮಾಲಿನ್ಯ ನಿಯಂತ್ರಣದ ಪರಿಕರಗಳನ್ನೂ ನೀಡಲಿದೆ. ಇದಕ್ಕಾಗಿ 1.25 ಕೋಟಿ ನೀಡಿದೆ. ಇದರೊಂದಿಗೆ ರಾಜ್ಯ ಸರ್ಕಾರವೂ 2.5 ಕೋಟಿ ಮೊತ್ತದ ಪರಿಕರಗಳನ್ನು ನೀಡಿದೆ. ಅಲ್ಲದೇ ರಾಜ್ಯ ಸರ್ಕಾರವು ಬಂದರಿಗೆ ಖಾಸಗಿ ಸಶಸ್ತ್ರ ಭದ್ರತಾ ಸಿಬ್ಬಂದಿ ನಿಯೋಜನೆ ಅನುಮತಿ ನೀಡಿದೆ. ಅವರ ವೇತನಕ್ಕಾಗಿ ವರ್ಷಕ್ಕೆ 60 ಲಕ್ಷ ನಿಗದಿ ಮಾಡಿದೆ ಎಂದರು.
ಬಂದರು ಬಳಕೆದಾರರಿಗೆ ರಾತ್ರಿ ಮಾರ್ಗದರ್ಶನ ಮೂಲಭೂತ ಸೌಲಭ್ಯಗಳನ್ನು ಸುಮಾರು 1 ಕೋಟಿ ವೆಚ್ಚದಲ್ಲಿ ತರಲು ಅನುಮತಿ ಸಿಕ್ಕಿದೆ. ಇದರ ಟೆಂಡರ್‌ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಸುಮಾರು 20 ಕೋಟಿ ವೆಚ್ಚದಲ್ಲಿ ಅಗ್ನಿ ಶಾಮಕ ಪರಿಕರಗಳನ್ನು ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಕಾರವಾರ ಮತ್ತು ಬೇಲೇಕೇರಿ ಬಂದರುಗಳಲ್ಲಿ ಹೆಚ್ಚು ದೂರದವರೆಗೆ ದೃಶ್ಯಗಳನ್ನು ಸೆರೆಹಿಡಿಯುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದರು.
ಬಂದರು ಅಭಿವೃದ್ಧಿ ಮತ್ತು ಒಳನಾಡು ಜಲಸಾರಿಗೆ ಅಭಿವೃದ್ಧಿ ಸಲುವಾಗಿ ಕರ್ನಾಟಕ ಮೆರಿಟೈಮ್‌ ಬೋರ್ಡ್‌ ಈಚೆಗೆ
ರಚನೆಯಾಗಿದೆ. ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೇಮಕವಾಗಿದ್ದು, ಕಾರವಾರದಲ್ಲಿ ಕಚೇರಿಯಿರಲಿದೆ.
ಇದರಿಂದ ಬಂದರು ಚಟುವಟಿಕೆಗಳಿಗೆ ಸಾಕಷ್ಟು ಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾರವಾರ ಬಂದರು ಚಟುವಟಿಕೆ: 7,56,434 ಮೆಟ್ರಿಕ್‌ ಟನ್‌ ಆಮದು ಮಾಡಿಕೊಂಡ ಸರಕಾಗಿದೆ. ರಫ್ತು ಮಾಡಿದ ಸರಕು 1,83,853 ಮೆಟ್ರಿಕ್‌ ಟನ್‌. ಒಟ್ಟು ನಿರ್ವಹಿಸಿದ ಸರಕು 9,40,287 ಮೆಟ್ರಿಕ್‌ ಟನ್‌ಗಳಾಗಿದೆ. 16,69,42,000 ರೂ. ಗಳಿಸಿದ ಆದಾಯ ಎಂದರು.
1919ರಲ್ಲಿ ಮುಂಬೈನಿಂದ ಲಂಡನ್‌ ಗೆ ಸಾಗಿದ ಮೊದಲ ಹಡಗು ಎಸ್‌.ಎಸ್‌. ಲಾಯಲ್ಟಿಯ ನೆನಪಿಗಾಗಿ ಈ ದಿನವನ್ನು
ಆಚರಿಸಲಾಗುತ್ತದೆ ಎಂದು ಕೋಸ್ಟ್‌ ಗಾರ್ಡ್‌ ಕಮಾಂಡಿಂಗ್‌ ಆಫೀಸರ್‌ ಕಮಾಂಡೆಂಟ್‌ ಎ.ಜೆ. ನಂದ ಹೇಳಿದರು. ಅಧಿಕಾರಿ ಕಶ್ಯಪ್‌, ಅಲ್ವಾರೆಸ್‌ ಮತ್ತು ಥಾಮಸ್‌ ಸಂಸ್ಥೆಯ ವ್ಯವಸ್ಥಾಪಕ ಪಾಲುದಾರರಾದ ಹೆಲೆನ್‌ ಅಲ್ವಾರೆಸ್‌ ಭಾಗವಹಿಸಿದ್ದರು. ಬಂದರು ಅಧಿಕಾರಿ ಕ್ಯಾ.ಅರುಣ್‌ ಗಾಂವ್ಕರ್‌ ಸ್ವಾಗತಿಸಿದರು. ಸುರೇಶ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next