Advertisement

ಕಾರವಾರ: ಬೂದು ನೀರು ನಿರ್ವಹಣೆಗೆ ಶಾಶ್ವತ ಪರಿಹಾರ

05:51 PM Apr 01, 2023 | Team Udayavani |

ಕಾರವಾರ: ಇಂದೂರು ಗ್ರಾಮ ಪಂಚಾಯತ್‌ನ ಕೊಪ್ಪ ಗ್ರಾಮದಲ್ಲಿ ಬೂದು ನೀರಿನ (ಕೊಳಚೆ) ನಿರ್ವಹಣೆಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಸ್ವತ್ಛ ಭಾರತ್‌ ಮಿಷನ್‌ ಯೋಜನೆಯಡಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ದ್ರವ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಗೊಂಡಿದೆ.

Advertisement

ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಗ್ರಾಮೀಣ ಪ್ರದೇಶಗಳಲ್ಲಿ ನರೇಗಾದಡಿ ಬಚ್ಚಲುಗುಂಡಿ ನಿರ್ಮಾಣ, ಪೌಷ್ಠಿಕ ಕೈತೋಟ ಹಾಗೂ ಸ್ವತ್ಛ ಭಾರತ್‌ ಮೀಷನ್‌ ದಡಿ ಶೌಚಾಲಯದಂಥ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದರೂ ಸಹ, ಅಧಿಕ ಮನೆಗಳಿರುವ ಗ್ರಾಮಗಳಲ್ಲಿ ಚರಂಡಿ ನೀರಿನ ಸಮಸ್ಯೆಗೆ ಪರಿಹಾರ ಹುಡುಕಲು ಬೂದು ನೀರಿನ ನಿರ್ವಹಣಾ ಘಟಕ ನಿರ್ಮಿಸಿ ಶಾಶ್ವತ ಪರಿಹಾರಕ್ಕೆ ಮುಂದಾಗಿದೆ. ಇನ್ನು ಈ ನೀರಿನಿಂದ ಮರುಬಳಕೆ ಸಾಧ್ಯವಾಗಿದ್ದು ರೈತರ
ಅನುಕೂಲಕ್ಕೆ ಸಾಕ್ಷಿಯಾಗಿದೆ.

ಜಿಲ್ಲೆಯಲ್ಲಿ ಬೂದು ನೀರಿನ ನಿರ್ವಹಣಾ ಘಟಕಕ್ಕೆ ಆಯ್ಕೆಯಾದ ಕೊಪ್ಪ ಗ್ರಾಮದಲ್ಲಿ ಸರಿಸುಮಾರು 185 ಮನೆಗಳಿದ್ದು, 1150 ಜನಸಂಖ್ಯೆ ಹೊಂದಿದೆ. ಇನ್ನು ಇಲ್ಲಿನ ಚರಂಡಿ ನೀರು ರೈತರ ಹೊಲದ ಮೂಲಕ ಕೆರೆಯನ್ನು ಸೇರುತಿತ್ತು. ಇನ್ನು ಈ ಸಮಸ್ಯೆಯಿಂದ ಸುತ್ತಲಿನ ರೈತರ ಹೊಲಗದ್ದೆಗಳಿಗೂ ಸಹಿತ ಸಂಕಷ್ಟ ಎದುರಾಗಿತ್ತು. ಇದೀಗ ವೈಜ್ಞಾನಿಕ ಪ್ರಕ್ರಿಯೆಯಿಂದಾಗಿ ದ್ರವ ತ್ಯಾಜ್ಯ ಸಂಸ್ಕರಣಾ ಘಟಕದ ನಿರ್ಮಾಣವು ಪರಿಹಾರ ಸೂಚಿಸಿದೆ.

ಘಟಕ ನಿರ್ಮಾಣದ ಆಯ್ಕೆ: ಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ಬೂದು ನೀರು ನಿರ್ವಹಣೆಗಾಗಿ ಸರ್ವೇ ಕೈಗೊಂಡಾಗ ಸಮಸ್ಯೆಯಿರುವ ಒಂದು ಸ್ಥಳವನ್ನು ಗುರುತಿಸಲಾಯಿತು. ಸದರಿ ಜಾಗವು ಫಿಲಿಪ್‌ ಥಾಮಸ್‌ ಪಾರೆಲ್‌ ರವರ ಖಾಸಗಿ ತೋಟದ ಮೂಲಕ ಕೆರೆಯನ್ನು ಸೇರುವುದರಿಂದ ತೋಟದ ಜಾಗದಲ್ಲೇ ಚರಂಡಿ ನೀರು ಸಂಸ್ಕರಿಸುವ ವಿಧಾನ ನಿರ್ಮಾಣ ಮಾಡಿ, ಗ್ರಾಮದ ಕೊಳಚೆ ನೀರು ಸಂಸ್ಕರಿಸಲು ಸೂಕ್ತವೆಂದು ತೀರ್ಮಾನಿಸಲಾಯಿತು. ತೋಟದ ಮಾಲಕ ಪಿಲೀಪ್‌ ಥಾಮಸ್‌ ಪಾರೆಲ್‌ ಗೆ ಗ್ರಾಮದ ಸಮಸ್ಯೆ ಬಗ್ಗೆ ತಿಳಿಸಿ ಅವರ ಒಪ್ಪಿಗೆ ಪಡೆಯಲಾಯಿತು.

ಬೂದು ನೀರಿನ ನಿರ್ವಹಣೆ ಉಪಯೋಗಗಳು: ನೀರಿನ ಇಂಗುವಿಕೆಯಿಂದ ಅಂತರ್ಜಲ ಮಟ್ಟ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಸುತ್ತಲಿನ ರೈತರ ಹೊಲ ಸುರಕ್ಷತೆ ಜತೆಗೆ ಅದೇ ನೀರಿನ ಪುನರ್‌ ಬಳಕೆ ಹೊಲಗಳಿಗೆ ಅನುಕೂಲವಾಗಿದೆ. ಗ್ರಾಮದ ಸ್ವಚ್ಛ ಹಾಗೂ ಸುಂದರ ಆರೋಗ್ಯಯುತ ಪರಿಸರ ನಿರ್ಮಾಣ. ನೀರಿನ ಶುದ್ಧೀಕರಣದಿಂದ ಸುತ್ತಲಿನ ಮಣ್ಣಿನ ಫಲವತ್ತತೆ ಕಾಪಾಡಲು ಸಹಾಯಕವಾಗಲಿದೆ.

Advertisement

ಚರಂಡಿಯಲ್ಲಿ ಸಂಸ್ಕರಿಸುವ ವಿಧಾನ ನಿರ್ಮಾಣದಿಂದ ಚರಂಡಿಯಲ್ಲಿ ಹರಿಯುವ ನೀರು ವ್ಯರ್ಥವಾಗದೆ ನಮ್ಮ ತೋಟದಲ್ಲಿ ಇಂಗುವುದರಿಂದ 6 ಎಕರೆ ತೋಟಕ್ಕೆ ಹಾಗೂ ಅಕ್ಕ ಪಕ್ಕದ 5 ಎಕರೆ ಅಡಿಕೆ ತೋಟಕ್ಕೆ ಅನುಕೂಲವಾಗಿದೆ. ಕೊಳಚೆ ಮುಕ್ತ ಗ್ರಾಮ ಮಾಡಲು ಅನುವು ಮಾಡಿಕೊಡಲಾಗಿದೆ.

ಜಿಲ್ಲೆಯಲ್ಲಿ ಇವರೆಗೂ ಸ್ಥಳ ಲಭ್ಯತೆ ಇರುವ 9 ಕಡೆಗಳಲ್ಲಿ ಸಮುದಾಯ ಹಂತದ ಬೂದು ನೀರು ನಿರ್ವಹಣಾ ಘಟಕವನ್ನು ಕೈಗೆತ್ತಿಗೊಂಡಿದ್ದು ಕಾಮಗಾರಿಯನ್ನು ಅನುಷ್ಠಾನ ಮಾಡಲಾಗುತ್ತಿದೆ. ಈ ಮೂಲಕ ಗ್ರಾಮ ಪಂಚಾಯಿತಿಗಳನ್ನು ಕೊಳಚೆ ಮುಕ್ತ ಗ್ರಾಮಗಳನ್ನಾಗಿಸಲು ಸಾರ್ವಜನಿಕರು ಕೈಜೊಡಿಸಬೇಕಿದೆ.
ಈಶ್ವರ ಕಾಂದೂ, ಸಿಇಒ, ಜಿಪಂ, ಉತ್ತರ ಕನ್ನಡ

Advertisement

Udayavani is now on Telegram. Click here to join our channel and stay updated with the latest news.

Next