ಕಾರವಾರ: ಭಾರತೀಯ ಕರಾವಳಿ ರಕ್ಷಣಾ ಪಡೆ ತನ್ನ ಸ್ಥಾಪನಾ ದಿನದ ನೆನಪಿಗಾಗಿ ಶನಿವಾರ ಕಾರವಾರ ದಿಂದ 35 ನಾಟಿಕಲ್ ಮೈಲು ದೂರದ ಅರಬ್ಬೀ ಸಮುದ್ರದಲ್ಲಿ ತನ್ನ ಕಾರ್ಯ ವೈಖರಿ, ವಿವಿಧ ಕಾರ್ಯಾಚರಣೆ ಬಗೆಯನ್ನು ಸಾರ್ವಜನಿಕರು ಹಾಗೂ ಮಾಧ್ಯಮಗಳ ಎದುರು ಪ್ರದರ್ಶಿಸಿತು.
ಕೋಸ್ಟ್ ಗಾರ್ಡನ ವಿಕ್ರಮ ನೌಕೆಯಲ್ಲಿ ಅರಬ್ಬೀ ಸಮಯದಲ್ಲಿ ಒಂದು ತಾಸು ಪಯಣಿಸಿದ ನಂತರ ತನ್ನ ಶಕ್ತಿ ಸಾಮರ್ಥ್ಯವನ್ನು ತಟ ರಕ್ಷಕ ಪಡೆಯ ಮೂರು ನೌಕೆಗಳು ಪ್ರದರ್ಶಿಸಿದವು.
ನೌಕೆ ಸಿ – 448 , ಕೋಸ್ಟ ಗಾರ್ಡ್ ಕಸ್ತೂರಬಾ ಗಾಂಧಿ ಹೆಸರಿನ ಆತ್ಯಾಧುನಿಕ ಸೌಕರ್ಯದ ನೌಕೆ ಹಾಗೂ ಸಾವಿತ್ರಿಬಾಯಿ ಪುಲೆ ಹೆಸರಿನ ನೌಕೆಗಳು ಹೊಂದಿರುವ ತಂತ್ರಜ್ಞಾನ , ಆಧುನಿಕ ಸೌಕರ್ಯಗಳ ಕುರಿತು ತಟ ರಕ್ಷಕ ಅಧಿಕಾರಿಗಳು ಮಾಹಿತಿ ನೀಡಿದರು . ನಂತರ ಆಳ ಸಮುದ್ರದಲ್ಲಿ ಮೀನುಗಾರಿಕಾ ಹಡಗುಗಳು ಪ್ರಕೃತಿ ವಿಕೋಪ, ಆಗ್ನಿ ಅವಘಡಕ್ಕೆ ಸಿಲುಕಿದರೆ ಅವುಗಳ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಲಾಯಿತು.
ಮೀನುಗಾರರು ಸಮುದ್ರ ದಲ್ಲಿ ದೋಣಿ ಮುಳುಗಿ, ಸಮುದ್ರದಲ್ಲಿ ಅವರು ರಕ್ಷಣೆ ಕೋರಿದರೆ ಮೀನುಗಾರರ ರಕ್ಷಣಾ ಬಗೆ ಹಾಗೂ ವಾಣಿಜ್ಯ ಹಡಗುಗಳು ಕಡಲ್ಗಳ್ಳರ ಕೈಗೆ ಸಿಕ್ಕರೆ ಅವನ್ನು ರಕ್ಷಿಸುವ ಬಗೆ ಸಹ ಕೋಸ್ಟಗಾರ್ಡ್ ಸಿಬಂದಿ ತೋರಿಸಿದರು.ನೌಕೆಗಳ ವೇಗ ಹಾಗೂ ನೌಕೆಯಿಂದ ವಿರೋಧಿಗಳನ್ನು ಸೆದೆ ಬಡಿಯಲು ಫೈರಿಂಗ್ ಕ್ರಮವನ್ನು ಪ್ರದರ್ಶಿಸಲಾಯಿತು.
ಸಮುದ್ರ ಪರಿಸರ ರಕ್ಷಣೆ, ಮಾನವ ಜೀವ ರಕ್ಷಣೆ ಹಾಗೂ ಭಾರತೀಯ ಕರಾವಳಿಯನ್ನು ನೌಕಾ ಗಸ್ತಿನ ಮೂಲಕ ನಿಯಂತ್ರಿಸುವ ಹಾಗೂ ಸಮುದ್ರ ತಟದ ಪ್ರತಿ ಚಟುಚಟಿಕೆಯ ಮೇಲೆ ಕಣ್ಣಿಟ್ಟು ಭಾರತೀಯ ನೌಕಾಪಡೆಗೆ ನೆರವಾಗುವ ಕ್ರಮವನ್ನು ಕೋಸ್ಟಗಾರ್ಡ್ ಅಧಿಕಾರಿಗಳು ವಿವರಿಸಿದರು.
ಭಾರತೀಯ ಕೋಸ್ಟಗಾರ್ಡ್ ಪ್ರಸ್ತುತ ಭಾರತೀಯ ಪಶ್ಚಿಮ ಕರಾವಳಿಯ ರಕ್ಷಣೆ ಹಾಗೂ ಪೂರ್ವ ಕರಾವಳಿಯ ಕಾವಲು ಹಾಗೂ ರಕ್ಷಣೆ ಮಾಡುವ ಬಗೆಯನ್ನು ಸಾರ್ವಜನಿಕರಿಗೆ ತೋರಿಸಿತು. ಎರಡು ತಾಸುಗಳ ಕಾಲ ನೌಕೆಯಲ್ಲಿನ ವಿವಿಧ ಶಕ್ತಿ ಸಾಮರ್ಥ್ಯ ಕಣ್ಣಿಗೆ ಕಟ್ಟುವಂತೆ ಕಾರ್ಯಚರಣೆ ಮಾಡಲಾಯಿತು.