Advertisement

ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭೀರ, ಚಿಕಿತ್ಸೆ ಮುಂದುವರಿಕೆ

08:19 AM Jul 30, 2018 | Harsha Rao |

ಚೆನ್ನೈ: ತಮಿಳುನಾಡು ಮಾಜಿ ಸಿಎಂ, ಡಿಎಂಕೆ ವರಿಷ್ಠ ಕರುಣಾನಿಧಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ರವಿವಾರ ಬೆಳಗ್ಗೆ ಸ್ಥಿರವಾಗಿದ್ದ ಆರೋಗ್ಯ ಸ್ಥಿತಿ, ರಾತ್ರಿ ವೇಳೆಗೆ ಬಿಗಡಾಯಿಸಿದ್ದು, ಆಸ್ಪತ್ರೆ ಸುತ್ತ ಸಹಸ್ರಾರು ಅಭಿಮಾನಿಗಳು ಜಮಾಯಿಸಿದ್ದಾರೆ. ಜನರನ್ನು ನಿಭಾಯಿಸುವುದು ಕಷ್ಟವಾದ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆಯೂ ಸಂಭವಿಸಿದೆ. ಆರೋಗ್ಯದಲ್ಲಿ ತೀವ್ರ ಏರುಪೇರಾದ ಹಿನ್ನೆಲೆಯಲ್ಲಿ ರವಿವಾರ ರಾತ್ರಿಯೇ ಚೆನ್ನೈಯ ಕಾವೇರಿ ಆಸ್ಪತ್ರೆಗೆ ಅವರ ಪತ್ನಿ ಹಾಗೂ ಕುಟುಂಬ ಸದಸ್ಯರನ್ನು ಕರೆಸಿಕೊಳ್ಳಲಾಯಿತು. 

Advertisement

ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂಬ ಸುದ್ದಿ ಹಬ್ಬುತ್ತಿದ್ದಂತೆ, ಆಸ್ಪತ್ರೆಯ ಹೊರಗೆ ಸಾವಿರಾರು ಮಂದಿ ಜಮಾಯಿಸ ತೊಡಗಿದರು. ಹೀಗಾಗಿ ಆಸ್ಪತ್ರೆಯ ಹೊರಗೆ ಹಾಗೂ ಕರುಣಾನಿಧಿ ಅವರ ಗೋಪಾಲಪುರಂ ನಿವಾಸದ ಹೊರಗೂ
ಭಾರೀ ಭದ್ರತೆ ಒದಗಿಸಲಾಗಿದೆ. ಪ್ರಮುಖ ಡಿಎಂಕೆ ನಾಯಕರು ಕೂಡ ಆಸ್ಪತ್ರೆಯತ್ತ ಧಾವಿಸತೊಡಗಿದ್ದು,
ಮುಖ್ಯಮಂತ್ರಿ ಪಳನಿಸ್ವಾಮಿ ಅವರೂ ಸೇಲಂನಿಂದ ಚೆನ್ನೈಗೆ ವಾಪಸಾದರು. ಇದಕ್ಕೂ ಮುನ್ನ, ಕರುಣಾನಿಧಿ ಅವರು ಆಸ್ಪತ್ರೆಗೆ ದಾಖಲಾದ ಬಳಿಕದ ಮೊದಲ ಫೋಟೋವನ್ನು ಡಿಎಂಕೆ ಬಿಡುಗಡೆ ಮಾಡಿತ್ತು. ಫೋಟೋದಲ್ಲಿ
ವೆಂಟಿಲೇಟರ್‌ ಇಲ್ಲದೇ ಕರುಣಾನಿಧಿ ಮಲಗಿರುವುದನ್ನು ನೋಡಿ ಅಭಿಮಾನಿಗಳು ಸ್ವಲ್ಪಮಟ್ಟಿಗೆ ನಿರಾಳರಾದರು.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೂ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದಾರೆ.
ಆಸ್ಪತ್ರೆ ಆಡಳಿತ ಮಂಡಳಿ ರಾತ್ರಿಯೇ ಬುಲೆಟಿನ್‌ ಹೊರಡಿಸಿ, ಕರುಣಾನಿಧಿ ಅವರ ಆರೋಗ್ಯ ಸ್ಥಿರವಾಗಿದೆ. ಚಿಕಿತ್ಸೆಗೆ
ಸ್ಪಂದಿಸುತ್ತಿದ್ದಾರೆ ಎಂದು ಮಾಹಿತಿ ನೀಡಿತು. ಆದರೂ ಅಭಿಮಾನಿಗಳು ಸ್ಥಳದಿಂದ ಕದಡಿರಲಿಲ್ಲ.

ಲಘು ಲಾಠಿಚಾರ್ಜ್‌
ಕರುಣಾನಿಧಿ ಅವರ ಆರೋಗ್ಯ ಸ್ಥಿತಿ ಗಂಭೀರ ಎನ್ನುವ ಸುದ್ದಿ ಹರಿದಾಡಿದ ಹಿನ್ನೆಲೆಯಲ್ಲಿ ರಾತ್ರಿ 10.30ರ ಸುಮಾರಿಗೆ ಕಾವೇರಿ ಆಸ್ಪತ್ರೆ ಸುತ್ತಲೂ ಸಹಸ್ರಾರು ಅಭಿಮಾನಿಗಳು ಸೇರಿದ್ದರು. ನಾಯಕನ ಆರೋಗ್ಯ ಸ್ಥಿತಿ ತಿಳಿದುಕೊಳ್ಳಲು ಆಸ್ಪತ್ರೆ ಬಳಿ ಒಂದು ಹಂತದಲ್ಲಿ ನೂಕುನುಗ್ಗಲೂ ನಡೆಯಿತು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ
ನಿಭಾಯಿಸುವುದು ಕಷ್ಟವಾದ ಕಾರಣ ಗುಂಪು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ ಘಟನೆಯೂ ನಡೆಯಿತು. ಇಷ್ಟಾದರೂ ಅಭಿಮಾನಿಗಳ ಗುಂಪು ತಡರಾತ್ರಿಯ ತನಕ ಸ್ಥಳದಿಂದ ಕಾಲ್ಕಿಳಲಿಲ್ಲ. ಇನ್ನು ಕರುಣಾನಿಧಿ ಅವರ ನಿವಾಸದ ಮುಂದೂ ಸಹಸ್ರಾರು ಅಭಿಮಾನಿಗಳು ಸೇರಿದ್ದಾರೆ. ಎರಡೂ ಕಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next