Advertisement

ನವರಾತ್ರಿ ಸಂಭ್ರಮಕ್ಕೆ ಕರುನಾಡು ಸಜ್ಜು

10:57 PM Sep 28, 2019 | Lakshmi GovindaRaju |

ರಾಜ್ಯಾದ್ಯಂತ ಇಂದಿನಿಂದ ನವರಾತ್ರಿ ಆಚರಣೆಯ ಸಂಭ್ರಮ. ಬೆಳಗ್ಗೆ 9.39 ರಿಂದ 10.25ರೊಳಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸರಸ್ವತಿ ಸಮ್ಮಾನ್‌ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಅವರು ದೇವಿಗೆ ಪೂಜೆ ಸಲ್ಲಿಸುವ ಮೂಲಕ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.

Advertisement

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವರು, ಸಂಸದರು, ಶಾಸಕರು ಉಪಸ್ಥಿತರಿರಲಿದ್ದಾರೆ. ಇದೇ ವೇಳೆ, ಶೃಂಗೇರಿ, ಕೊಲ್ಲೂರು, ಶಿರಸಿ, ಬನಶಂಕರಿ ಸೇರಿ ರಾಜ್ಯದಲ್ಲಿನ ಶಕ್ತಿ ದೇವತೆಯ ದೇವಾಲಯಗಳಲ್ಲಿ ದೇವಿಯ ಆರಾಧನೆ, ವಿಶೇಷ ಪೂಜೆ, ಪಾರಾಯಣಗಳು, ವಿವಿಧ ಧಾರ್ಮಿಕ ಕಾರ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಡಿಕೇರಿ ದಸರಾ, ಮಂಗಳೂರು ದಸರಾಗಳಿಗೂ ಇಂದಿನಿಂದ ಚಾಲನೆ ದೊರೆಯಲಿದೆ. ಜತೆಗೆ, ಭಕ್ತರು ಮನೆ, ಮನೆಗಳಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಶಕ್ತಿಮಾತೆಯ ಕೃಪಾಕಟಾಕ್ಷ ಕೋರಲಿದ್ದಾರೆ.

ಅರಮನೆ ನಗರಿಯಲ್ಲೀಗ ಸಡಗರ
ಮೈಸೂರು: ಹತ್ತು ದಿನಗಳ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9.39ಕ್ಕೆ ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸರಸ್ವತಿ ಸಮ್ಮಾನ ಪುರಸ್ಕೃತ ಹಿರಿಯ ಸಾಹಿತಿ ಎಸ್‌.ಎಲ್‌.ಭೈರಪ್ಪ ಅವರು, ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂ ರಪ್ಪ, ಕೇಂದ್ರ ಸಚಿವರಾದ ಡಿ.ವಿ. ಸದಾ ನಂದಗೌಡ, ಪ್ರಹ್ಲಾದ ಜೋಶಿ, ಸುರೇಶ್‌ ಅಂಗಡಿ, ಡಿಸಿಎಂಗಳಾದ ಗೋವಿಂದ ಎಂ. ಕಾರಜೋಳ, ಡಾ.ಸಿ.ಎನ್‌.ಅಶ್ವತ್ಥ್ ನಾರಾ ಯಣ್‌, ಲಕ್ಷ್ಮಣ್‌ ಸವದಿ, ಜಿಲ್ಲಾ ಉಸ್ತು ವಾರಿ ಸಚಿವ ವಿ.ಸೋಮಣ್ಣ, ಸಿ.ಟಿ.ರವಿ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇತರ ಗಣ್ಯರು ಉಪಸ್ಥಿತ ರಿರಲಿದ್ದಾರೆ. ಇದೇ ವೇಳೆ, ದಸರಾ ಕುಸ್ತಿ ಪಂದ್ಯಾವಳಿ, ದಸರಾ ವಸ್ತು ಪ್ರದರ್ಶನ, ದಸರಾ ಚಲನಚಿತ್ರೋತ್ಸವ, ಸಾಹಸ ಕ್ರೀಡೋತ್ಸವ, ಆಹಾರ ಮೇಳ, ಫ‌ಲಪುಷ್ಪ ಪ್ರದರ್ಶನ, ಪುಸ್ತಕ ಮಳಿಗೆಗಳ ಉದ್ಘಾಟನೆ ಕೂಡ ನಡೆಯಲಿದೆ.

ಯದುವೀರ್‌ ಅವರಿಂದ ಖಾಸಗಿ ದರ್ಬಾರ್‌: ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಅರಮನೆ ಆವರಣದಲ್ಲಿ ಬನ್ನಿ ಪೂಜೆ ನೆರವೇರಿಸಿ, ಬೆಳಗ್ಗೆ 9.45ಕ್ಕೆ ರತ್ನಖಚಿತ ಸಿಂಹಾಸನವನ್ನೇರಿ ಖಾಸಗಿ ದರ್ಬಾರ್‌ ನಡೆಸಲಿದ್ದಾರೆ.

Advertisement

ಸಾಂಸ್ಕೃತಿಕ ವೈಭವದ ಮೆರುಗು: ಅರಮನೆ ಆವರಣದಲ್ಲಿ ಸಂಜೆ 6 ಗಂಟೆಗೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಲಿ ದ್ದಾರೆ. ಬಳಿಕ, ಮೈಸೂರಿನ ವಿದುಷಿ ರಾಧಿಕಾ ನಂದಕುಮಾರ್‌ ಅವರಿಂದ ಶ್ರೀಮನ್ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ ಕೃತಿ ಆಧಾರಿತ ನೃತ್ಯರೂಪಕ, 8ಕ್ಕೆ ಮುಂಬೈನ ಪಂಡಿತ್‌ ಪಂಕಜ್‌ ಉದಾಸ್‌ ಅವರಿಂದ ಗಜಲ್‌ ಗಾಯನ ನಡೆಯಲಿದೆ. ಜತೆಗೆ, ಜಗನ್ಮೋಹನ ಅರಮನೆ, ಕಲಾಮಂದಿರ ಸೇರಿದಂತೆ ಇತರೆಡೆಯೂ ಸಾಂಸ್ಕೃತಿಕ ಕಾರ್ಯ ಕ್ರಮಗಳು ಏರ್ಪಾಡಾಗಿವೆ.

ಇಂದಿನಿಂದ ಮಂಗಳೂರು ದಸರಾ
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಭಾನುವಾರ ದಿಂದ “ಮಂಗಳೂರು ದಸರಾ’ ಹಾಗೂ ನವರಾತ್ರಿ ಮಹೋತ್ಸವಗಳು ಶ್ರದ್ಧಾಭಕ್ತಿಯಿಂದ ನಡೆಯಲಿವೆ. ಭಾನುವಾರ ಬೆಳಗ್ಗೆ 8.30ಕ್ಕೆ ಗುರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು, 11.20ಕ್ಕೆ ನವದುರ್ಗೆಯರು ಹಾಗೂ ಶಾರದಾ ಪ್ರತಿಷ್ಠೆ ನಡೆ ಯಲಿದೆ. 30ರಂದು ದುರ್ಗಾ ಹೋಮ, ಅ.1ರಂದು ಬೆಳಗ್ಗೆ ಆರ್ಯ ದುರ್ಗಾ ಹೋಮ, 2ರಂದು ಭಗವತಿ ದುರ್ಗಾ ಹೋಮ, 3ರಂದು ಕುಮಾರಿ ದುರ್ಗಾ ಹೋಮ, 4ರಂದು ಅಂಬಿಕಾ ದುರ್ಗಾ ಹೋಮ, 5ರಂದು ಮಹಿಷ ಮರ್ದಿನಿ ದುರ್ಗಾ ಹೋಮ, 6ರಂದು ಚಂಡಿಕಾ ಹೋಮ, 7ರಂದು ಸರಸ್ವತಿ ದುರ್ಗಾ ಹೋಮ, 8ರಂದು ವಾಗೀಶ್ವರಿ ದುರ್ಗಾ ಹೋಮಗಳು ನಡೆಯಲಿವೆ. 8ರಂದು ಸಂ.4 ಗಂಟೆಗೆ ದಸರಾ ಶೋಭಾಯಾತ್ರೆ ಆರಂಭ ವಾಗಲಿದೆ. 9ರಂದು ಬೆ.4 ಗಂಟೆಗೆ ಪೂಜೆ ಬಲಿ, ಮಂಟಪ ಬಲಿ, ಮಂಟಪ ಪೂಜೆ ನಡೆದು ಶಾರದಾ ವಿಸರ್ಜನೆ, ಅವಭೃತ ಸ್ನಾನ ನಡೆಯಲಿದೆ.

ಕಟೀಲಿನಲ್ಲಿ ನವರಾತ್ರಿ ಸಂಭ್ರಮ
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರದಿಂದ ಅ.7ರ ವರೆಗೆ ನವರಾತ್ರಿ ಪೂಜಾ ಮಹೋತ್ಸವ ನಡೆಯಲಿದೆ. ಅ.3ರಂದು ಲಲಿತಾ ಪಂಚಮಿ, 5ರಂದು ಮೂಲಾ ನಕ್ಷತ್ರ, 6 ರಂದು ದುರ್ಗಾಷ್ಟಮಿ, 7 ರಂದು ಮಹಾನವಮಿ, 8 ರಂದು ವಿಜಯ ದಶಮಿ, ಮಧ್ವಜಯಂತಿ ವಿಶೇಷ ದಿನಗಳಾಗಿವೆ. ಪ್ರತಿ ದಿನ ಸಂಜೆ 5.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ. 29ರಂದು ಭರತ ನಾಟ್ಯ ಕಾರ್ಯಕ್ರಮ, ಸೆ.30ರಂದು ಹಿಂದುಸ್ಥಾನಿ ಶಾಸ್ತ್ರೀಯ ಗಾಯನ, ಅ. 1ರಂದು ಗಾನ ಜ್ಞಾನ, ಅ.2ರಂದು ಭಕ್ತಿ ಸಂಗೀತ, ಅ.3ರಂದು ಪಂಚ ವೀಣಾ ವಾದನ, ಅ.4ರಂದು ಭರತನಾಟ್ಯ, ಅ.5ರಂದು ಯಕ್ಷಗಾನ ಪ್ರದರ್ಶನ, ಅ.6ರಂದು ಬಡಗುತಿಟ್ಟು ಯಕ್ಷಗಾನ ಶ್ರೀ ರಾಮಾನುಗ್ರಹ, ಅ.7 ರಂದು ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಪ್ರತಿ ದಿನ ದೇಗುಲ ದಲ್ಲಿ ಬೆಳಗ್ಗೆ 9ರಿಂದ ವಿವಿಧ ಭಜನಾ ತಂಡಗಳಿಂದ ಭಜನೆ, 7ರಿಂದ ಉಪನ್ಯಾಸ, 7.30 ರಿಂದ 10 ಗಂಟೆಯವರೆಗೆ ಯಕ್ಷಗಾನ ಬಯಲಾಟ ನಡೆಯಲಿದೆ.

ಕರಗೋತ್ಸವದೊಂದಿಗೆ “ಮಡಿಕೇರಿ ದಸರಾ’ಗೆ ಚಾಲನೆ
ಮಡಿಕೇರಿ: ಐತಿಹಾಸಿಕ ದಸರಾ ಮಹೋತ್ಸವಕ್ಕೆ ಮಡಿಕೇರಿ ಸಜ್ಜಾಗುತ್ತಿದೆ. ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವದ ಮೂಲಕ ಮಡಿಕೇರಿ ದಸರಾಗೆ ಭಾನುವಾರ ಚಾಲನೆ ದೊರೆಯಲಿದೆ. ಸೋಮವಾರದಂದು ದೇವಿಯ ಪೂಜೆಯೊಂದಿಗೆ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಸಂಜೆ 6ಕ್ಕೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಅ. 2ರಂದು ಮಕ್ಕಳ ದಸರಾ, ಅ.3ರಂದು ಜನಪದ ಉತ್ಸವ, ಅ.5ರಂದು ಯುವ ದಸರಾ ಪ್ರಯುಕ್ತ ನಗರದ ಬನ್ನಿ ಮಂಟಪದಿಂದ ಬೈಕ್‌ ಸ್ಟಂಟ್‌, ವಿಂಟೇಜ್‌ ವಾಹನಗಳ ಪ್ರದರ್ಶನ, ಅ.8ರಂದು ದಶಮಂಟಪಗಳ ವರ್ಣರಂಜಿತ ಶೋಭಾಯಾತ್ರೆ ನಡೆಯಲಿದೆ. ಈ ವರ್ಷ ಪ್ಲಾಸ್ಟಿಕ್‌ ಮುಕ್ತ ದಸರಾ ಆಚರಣೆಗೆ ಆದ್ಯತೆ ನೀಡಲಾಗುತ್ತಿದ್ದು, ಈ ಬಗ್ಗೆ ವರ್ತಕರಲ್ಲಿ ಸ್ವತ್ಛತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಕೊಲ್ಲೂರಲ್ಲಿ ನವರಾತ್ರಿ ಉತ್ಸವ
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಭಾನುವಾರದಿಂದ ಅ.8ರ ತನಕ ನವರಾತ್ರಿ ಉತ್ಸವ ನಡೆಯಲಿದೆ. ಅ.8ರಂದು ಬೆಳಗಿನ ಜಾವದಿಂದ ಸರಸ್ವತಿ ಮಂಟಪದಲ್ಲಿ ಆರಂಭಗೊಳ್ಳುವ ವಿದ್ಯಾರಂಭಕ್ಕೆ ದೇಶ, ವಿದೇಶಗಳಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಮಕ್ಕಳ ನಾಲಗೆಯ ಮೇಲೆ ಚಿನ್ನದುಂಗುರದಿಂದ ಓಂಕಾರ ಬರೆಸುವುದಲ್ಲದೆ, ಅಕ್ಕಿಯಲ್ಲಿ ಅಕ್ಷರಾಭ್ಯಾಸ ನಡೆಸುವ ಪದ್ಧತಿ ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಕೊಲ್ಲೂರಿನಲ್ಲಿ ವಿದ್ಯಾರಂಭ ಮಾಡಿದ ಮಕ್ಕಳು ಮೇಧಾವಿಗಳಾಗುವರು ಎಂಬುದು ನಂಬಿಕೆ. ಆ ದಿನ ಮಕ್ಕಳಿಗೆ ನವಾನ್ನ ಪ್ರಾಶನ ಕೂಡ ಮಾಡಲಾಗುತ್ತದೆ. ಅ.7ರ ಮಹಾನವಮಿಯಂದು ಬೆಳಗ್ಗೆ 11.30ಕ್ಕೆ ಚಂಡಿಕಾ ಯಾಗ ಹಾಗೂ ಮಧ್ಯಾಹ್ನ ರಥೋತ್ಸವದಲ್ಲಿ ಎಸೆಯುವ ನಾಣ್ಯಗಳನ್ನು ಸಂಗ್ರಹಿಸಲು ಸಾವಿರಾರು ಭಕ್ತರು ಮುಗಿ ಬೀಳುತ್ತಾರೆ.

ಮಂಗಳಾದೇವಿ ನವರಾತ್ರಿ ಉತ್ಸವಕ್ಕಿಂದು ಮುಹೂರ್ತ
ಮಂಗಳೂರು: ಮಹತೋಭಾರ ಮಂಗಳಾದೇವಿ ದೇವಸ್ಥಾನದಲ್ಲಿ ಭಾನುವಾರದಿಂದ ಅ.9ರವರೆಗೆ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ನವರಾತ್ರಿ ಮಹೋತ್ಸವ ಜರುಗಲಿದೆ. ಭಾನುವಾರ ಬೆಳಗ್ಗೆ 9ಗಂಟೆಗೆ ಗಣಪತಿ ಪ್ರಾರ್ಥನೆ ಮತ್ತು ನವರಾತ್ರಿ ಉತ್ಸವದ ಉದ್ಘಾಟನೆ, ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಅ.2ರಂದು ಶ್ರೀ ಲಲಿತಾ ಪಂಚಮಿ, ಅ.4ರಂದು ಮೂಲ ನಕ್ಷತ್ರ, ರಾತ್ರಿ ಉತ್ಸವಾರಂಭ, ಅ.7ರಂದು ಮಹಾನವಮಿ, ಚಂಡಿಕಾ ಹೋಮ, ರಾತ್ರಿ ದೊಡ್ಡ ರಂಗಪೂಜೆ, ಸಣ್ಣ ರಥೋತ್ಸವ, ಅ.8ರಂದು ವಿಜಯ ದಶಮಿ (ವಿದ್ಯಾರಂಭ, ತುಲಾಭಾರ), ಮಧ್ಯಾಹ್ನ ರಥಾರೋಹಣ, ರಾತ್ರಿ 7.30ಕ್ಕೆ ರಥೋತ್ಸವ, ಅ.9ರಂದು ಅವಭೃತ ಮಂಗಳ ಸ್ನಾನ, ಅ.10ರಂದು ಸಂಪ್ರೋಕ್ಷಣೆ, ಸಂಜೆ 6.30ಕ್ಕೆ ಸಾರ್ವಜನಿಕ ಸತ್ಯನಾರಾಯಣ ಪೂಜೆ ಜರುಗಲಿದೆ. ಪ್ರತಿ ದಿನ ಸಂಜೆ ಭಜನೆ, ನೃತ್ಯ ವೈಭವ, ಯಕ್ಷಗಾನ ಬಯಲಾಟ, ಭರತನಾಟ್ಯ ಕಾರ್ಯಕ್ರಮಗಳು ನಡೆಯಲಿವೆ.

ಬಪ್ಪನಾಡಲ್ಲಿ ಚಂಡಿಕಾಯಾಗ
ಮೂಲ್ಕಿ: 9 ಮಾಗಣೆಯ 32 ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿರುವ ಮೂಲ್ಕಿಯ ಸೀಮೆಯೊಡತಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿಯ ಒಂಭತ್ತು ದಿನಗಳಲ್ಲದೆ 10ನೇ ದಿನವಾದ ವಿಜಯ ದಶಮಿಯಂದು ಸೇರಿ ಪ್ರತಿನಿತ್ಯವೂ ಚಂಡಿಕಾ ಯಾಗ ಮತ್ತು ನಿತ್ಯವೂ ವಿಶೇಷ ಆರಾಧನೆಗಳು ನಡೆಯುತ್ತವೆ. ಪ್ರತಿನಿತ್ಯ ನಡೆಯುವ ಚಂಡಿಕಾ ಯಾಗವು ಭಕ್ತರ ಹರಕೆ ರೂಪದ್ದಾದರೆ, ವಿಜಯ ದಶಮಿಯಂದು ನಡೆಯುವ ಚಂಡಿಕಾ ಯಾಗವು ದೇವಸ್ಥಾನದ ಭಂಡಾರದಿಂದ ಸೀಮೆಯ ಭಕ್ತರು ಹವಿಸ್ಸುಗಳನ್ನು ಅರ್ಪಿಸುವ ಮೂಲಕ ಸಾರ್ವಜನಿಕವಾಗಿ ವಿಜೃಂಭಣೆಯಿಂದ ನಡೆಯುತ್ತದೆ. ನಿತ್ಯವೂ ಅನ್ನದಾನ, ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ದೇವರಿಗೆ ಮಹಾ ರಂಗಪೂಜೆ ಇಲ್ಲಿಯ ವಿಶೇಷ. ಐದನೇ ದಿನವಾದ ಲಲಿತ ಪಂಚಮಿಯಂದು ಕ್ಷೇತ್ರದಲ್ಲಿ ಸಹಸ್ರಾರು ಸುಮಂಗಲೆಯರು ದೇವಿಗೆ ವಿಶೇಷ ಸೇವೆ ಸಲ್ಲಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next