ಬೆಂಗಳೂರು: ಕರ್ನಾಟಕ ಕ್ರಿಕೆಟ್ ತಂಡದ ಹಂಗಾಮಿ ನಾಯಕ ಕರುಣ್ ನಾಯರ್ ಸದ್ಯದಲ್ಲೇ ವಿವಾಹವಾಗಲಿದ್ದಾರೆ. ಆದ್ದರಿಂದ ಸೌರಾಷ್ಟ್ರ ವಿರುದ್ಧ ಜ.11ರಿಂದ ಆರಂಭವಾಗುವ ರಣಜಿ ಪಂದ್ಯಕ್ಕೆ ಅವರು ಲಭ್ಯರಿರುವುದಿಲ್ಲ. ಅವರ ಬದಲಿಗೆ ಶ್ರೇಯಸ್ ಗೋಪಾಲ್ ತಂಡವನ್ನು ಮುನ್ನಡೆಸಲಿದ್ದಾರೆ.
ಇನ್ನು ರಾಜ್ಯ ತಂಡದಿಂದ ಅಭಿಷೇಕ್ ರೆಡ್ಡಿಯನ್ನು ಕೈಬಿಡಲಾಗಿದೆ. ದೈಹಿಕ ಸಕ್ಷಮತೆ ಸಾಧಿಸಿರುವ ಕೆ.ವಿ. ಸಿದ್ಧಾರ್ಥ್, ಪವನ್ ದೇಶಪಾಂಡೆ ತಂಡಕ್ಕೆ ಮರಳಿದ್ದಾರೆ.
ಕರುಣ್ ನಾಯರ್‌ತಮ್ಮ ದೀರ್ಘಕಾಲದ ಗೆಳತಿ ಸನಯ ಟಕರಿವಾಲಾರನ್ನು ವರಿಸಲಿದ್ದಾರೆ. ಇಬ್ಬರ ನಡುವೆ ಕಳೆದ ವರ್ಷ ಜುಲೈನಲ್ಲಿ ನಿಶ್ಚಿತಾರ್ಥವಾಗಿತ್ತು. ಈಗ ಇಬ್ಬರೂ ಮದುವೆಗೆ ದಿನಾಂಕ ನಿಗದಿಯಾಗಿದೆ. ನಿರ್ದಿಷ್ಟವಾಗಿ ಯಾವಾಗ ದಿನ ವಿವಾಹವಾಗುತ್ತದೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.
ಖಾಯಂ ನಾಯಕ ಮನೀಷ್ ಪಾಂಡೆ ಭಾರತ ತಂಡದ ಪರ ಸೀಮಿತ ಓವರ್‌ಗಳ ಪಂದ್ಯದಲ್ಲಿ ಆಡುತ್ತಿರುವುದರಿಂದ ಲಭ್ಯರಿರುವುದಿಲ್ಲ. ಕೆ.ಎಲ್. ರಾಹುಲ್ ಮತ್ತೆ ರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಅವರ ಸೇವೆಯೂ ಲಭ್ಯವಾಗುವುದಿಲ್ಲ.
ಉಳಿದಂತೆ ತಂಡದಲ್ಲಿ ಬದಲಾವಣೆಯೇನಿಲ್ಲ. ಕಳೆದ ಪಂದ್ಯದಲ್ಲಿ ಮಾಯಾಂಕ್ ಅಗರ್ವಾಲ್ ಬದಲಿಗೆ ಸ್ಥಾನ ಪಡೆದಿದ್ದ ರವಿಕುಮಾರ್ ಸಮರ್ಥ್ ಭರ್ಜರಿ ಲಯ ಪ್ರದರ್ಶಿಸಿ, ಸ್ಥಾನ ಗಟ್ಟಿ ಮಾಡಿಕೊಂಡಿದ್ದಾರೆ.