ಹೊಸದಿಲ್ಲಿ/ಬೆಂಗಳೂರು: ಎಗ್ಗಿಲ್ಲದೇ ಸಾಗುವ ಕಾರು, ಬಸ್ಸುಗಳು, ರಸ್ತೆ ನಮ್ಮದೇ ಎಂದು ಚಲಿಸುವ ಆಟೋರಿಕ್ಷಾಗಳು, ಮಧ್ಯೆ ಮಧ್ಯೆ ನುಸುಳಿ ಮುನ್ನುಗ್ಗುವ ಬೈಕ್‌ಗಳು, ನಡುವೆ ರಸ್ತೆ ದಾಟುತ್ತಿರುವ ಜನರು… ಉದ್ಯಾನನಗರಿಯ ಧಾವಂತದ ಬದುಕಿಗೆ ಇವೆಲ್ಲವುಗಳ ಜತೆಗೆ ಚಾಲಕರಹಿತ ಕಾರುಗಳೂ ಸೇರಿಕೊಳ್ಳಲಿವೆಯೇ?
ದೇಶದಲ್ಲಿ ಇದೇ ಮೊದಲ ಬಾರಿಗೆ ಟಾಟಾ ಗ್ರೂಪ್‌ನ ಟಾಟಾ ಎಲೆಕ್ಸಿ ಸಂಸ್ಥೆಯು ಇಂಥದ್ದೊಂದು ಸಾಧನೆಗೆ ಮುಂದಾಗಿದೆ. ಚಾಲಕನೇ ಇಲ್ಲದ ಸ್ವಯಂಚಾಲಿತ ಕಾರನ್ನು ಪರೀಕ್ಷೆಗೊಳಪಡಿಸಲು ಈ ಸಂಸ್ಥೆಯು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಕೋರಿದೆ. ಅನುಮತಿ ಸಿಕ್ಕಿದರೆ ಭಾರತದ ರಸ್ತೆಗಳಲ್ಲಿ ಸ್ವಯಂಚಾಲಿತ ಕಾರುಗಳನ್ನು ಪರಿಚಯಿಸಿದ ಕೀರ್ತಿ ಟಾಟಾಗೆ ಸಲ್ಲುತ್ತದೆ.
ಈ ಸಂಸ್ಥೆಯ ಪ್ರಧಾನ ಕಚೇರಿಯೂ ಬೆಂಗ ಳೂರಿನಲ್ಲೇ ಇರಲಿದ್ದು, ಇದು ತಯಾರಿಸುವ ಚಾಲಕರಹಿತ ಕಾರಿನೊಳಗೆ ಕೆಮರಾಗಳು, ಸೆನ್ಸರ್‌ಗಳು, ವಾಹನಗಳ ನಡುವಿನ ಸಂವಹನ ವ್ಯವಸ್ಥೆ ಮತ್ತಿತರ ಮೂಲಸೌಕರ್ಯಗಳು ಇರುತ್ತವೆ. ಗೂಗಲ್, ಊಬರ್‌ನಂಥ ಜಾಗತಿಕ ಕಂಪೆನಿಗಳೂ ದೇಶದಲ್ಲಿ ಚಾಲಕನಿಲ್ಲದ ಕಾರು ಪರೀಕ್ಷೆ ನಡೆಸಲು ಅವಕಾಶ ಪಡೆದುಕೊಳ್ಳಲು ಹವಣಿಸುತ್ತಿವೆ. ಅಮೆರಿಕ ಮತ್ತಿತರ ದೇಶ ಗಳಲ್ಲಿ ಚಾಲಕ ರಹಿತ ಕಾರು ಪರೀಕ್ಷೆಯು ಪ್ರಾಯೋಗಿಕ ಹಂತದಲ್ಲಿದೆ.
ಡ್ರೈವರ್‌ಲೆಸ್ ಕಾರುಗಳ ಪರೀಕ್ಷೆ: ಇದೇ ವೇಳೆ, ಭಾರತದಲ್ಲಿ ಚಾಲಕರಹಿತ ಕಾರುಗಳ ಪರೀಕ್ಷೆಗೆ ಅನುಮತಿ ನೀಡುವ ವಿಚಾರವನ್ನು ಸಂಸತ್‌ನಲ್ಲಿ ಈಗಾಗಲೇ ಮಂಡನೆಯಾಗಿರುವ ಮೋಟಾರು ವಾಹನಗಳ ತಿದ್ದುಪಡಿ ಮಸೂದೆ 2016ರಲ್ಲಿ ಪ್ರಸ್ತಾವಿಸಲಾಗಿದೆ. ಹಂತ ಹಂತವಾಗಿ ಈ ಬಗ್ಗೆ ನಿಯಮಗಳನ್ನು ಜಾರಿಗೆ ತರಲು ಸರಕಾರ ಮುಂದಾಗಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಸದ್ಯ ಸಂಸತ್‌ನ ಸ್ಥಾಯಿ ಸಮಿತಿಯ ಪರಿಶೀಲನೆಯಲ್ಲಿರುವ ಮಸೂದೆಗೆ ಕೇಂದ್ರ ಸರಕಾರದಿಂದ ಅಂಗೀಕಾರ ದೊರೆತರೆ ಭಾರತದ ಕಾರು ತಯಾರಕ ಕಂಪೆನಿಗಳೂ ಜಾಗತಿಕ ಕಂಪೆನಿಗಳ ಜತೆಗೆ ಸ್ಪರ್ಧಿಸಲು ಅನುವಾಗುತ್ತದೆ. ಪ್ರಯಾಣಿಕರ ಮತ್ತು ವಾಣಿಜ್ಯಿಕ ವಾಹನಗಳ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸುರಕ್ಷತೆ ಮತ್ತು ಹೊಸತನ ಸಾಧಿಸಲು, ಸಂಪೂರ್ಣ ಸ್ವಯಂಚಾಲಿತ, ಅರೆ ಸ್ವಯಂಚಾಲಿತ ವಾಹನಗಳ ಪರೀಕ್ಷೆಗೂ ಅನುಕೂಲವಾಗುತ್ತದೆ.
ಇದುವರೆಗೆ ತಿದ್ದುಪಡಿ ಕಾಯ್ದೆಯಲ್ಲಿ ಪರವಾನಿಗೆ ರಹಿತ ಚಾಲನೆ, ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ, ಅಜಾಗರೂಕತೆಯಿಂದ ಚಲಾಯಿಸಿದರೆ ವಿಧಿಸುವ ಪರಿಷ್ಕೃತ ದಂಡದ ಮೊತ್ತ ಮತ್ತು ಇತರ ಬದಲಾಗಲಿರುವ ಕಾನೂನು ಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯುತ್ತಿತ್ತು. ಆದರೆ, ಚಾಲಕರಹಿತ ಕಾರಿನ ಪ್ರಸ್ತಾಪದ ಕುರಿತ ವಿಚಾರ ಈಗಷ್ಟೇ ಬೆಳಕಿಗೆ ಬಂದಿದೆ.
ಊಬರ್ ವಿರುದ್ಧ ಗೂಗಲ್ ದೂರು
ಏತನ್ಮಧ್ಯೆ, ತನ್ನ ಸ್ವಯಂಚಾಲಿತ ಕಾರಿನ ತಂತ್ರಜ್ಞಾನವನ್ನು ಊಬರ್ ಕಂಪೆನಿಯು ಕದ್ದಿದೆ ಎಂದು ಗೂಗಲ್ ಆರೋಪಿಸಿದೆ. ದ್ರೋಹ, ಹೈಟೆಕ್ ಗೂಢಚಾರಿಕೆ ಹಾಗೂ ಅತಿಯಾಸೆಯ ಆರೋಪವನ್ನು ಹೊರಿಸಿ ಗೂಗಲ್ ಈಗ ಕೋರ್ಟ್ ಮೆಟ್ಟಿಲೇರಿದೆ. ಚಾಲಕರಹಿತ ಕಾರುಗಳು ಸುತ್ತಮುತ್ತ ಏನಿವೆ ಎಂದು ನೋಡಿಕೊಂಡು ಸುರಕ್ಷಿತವಾಗಿ ಸಂಚ ರಿಸಲು ಅನುಕೂಲವಾಗುವ ಸೆನ್ಸರ್‌ಗಳು ಹಾಗೂ ಇನ್ನಿತರ ವಿನ್ಯಾಸಗಳನ್ನು ಊಬರ್ ಕಳವು ಮಾಡಿದ್ದು, ತನ್ನದೇ ಆದ ಹೊಸ ಸ್ವಯಂಚಾಲಿತ ಕಾರು ತಯಾರಿಕೆಗೆ ಮುಂದಾಗಿದೆ ಎಂದು ಗೂಗಲ್ ದೂರಿನಲ್ಲಿ ತಿಳಿಸಿದೆ.