Advertisement

ಎಸ್ಕೇಪ್‌ ಆಗಿದ್ದ ಕಾರ್ತಿಕ್‌ ಮತ್ತೆ ಪೊಲೀಸರ ಬಲೆಗೆ

11:13 AM Jan 07, 2018 | Team Udayavani |

ಬೆಂಗಳೂರು: ವಿಚಾರಣೆ ವೇಳೆ ಎರಡು ಬಾರಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ಕಾರ್ತಿಕ್‌ ಅಲಿಯಾಸ್‌ ಎಸ್ಕೇಪ್‌ ಕಾರ್ತಿಕ್‌ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೇರಳದ ಪಾಲ್ಕೊಡ್‌ನ‌ಲ್ಲಿ ಸಹಚರರ ಜತೆ ತಲೆಮರೆಸಿಕೊಂಡಿದ್ದ ಕಾರ್ತಿಕ್‌(28)ನನ್ನು ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಇತ್ತೀಚೆಗೆ ಕೊತ್ತನೂರು ಠಾಣೆ ವ್ಯಾಪ್ತಿಯ ಮನೆಯೊಂದರ ಬೀಗ ಮುರಿದು ನಾಪತ್ತೆಯಾಗಿದ್ದ. ಸ್ಥಳದಲ್ಲಿ ಪತ್ತೆಯಾದ ಬೆರಳಚ್ಚಿನ ಆಧಾರದ ಮೇಲೆ ಕಾರ್ಯಾಚರಣೆಗಿಳಿದಾಗ ಕೊತ್ತನೂರು ಪೊಲೀಸರು ಚೆನ್ನೈ ಪೊಲೀಸರ ಸಹಾಯದೊಂದಿಗೆ ಕಾರ್ತಿಕ್‌ನನ್ನು ಬಂಧಿಸಿದ್ದಾರೆ. ಬೆಂಗಳೂರು ನಗರ, ಗ್ರಾಮಾಂತರ, ಹಾಸನ, ಮೈಸೂರು ಸೇರಿದಂತೆ ಈತನ ವಿರುದ್ಧ ಒಟ್ಟು 70 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕೊತ್ತನೂರು ಠಾಣೆಯ 5, ಹಾಸನದ 2, ಮೈಸೂರಿನ ಒಂದು ಕಳವು ಪ್ರಕರಣ ಸೇರಿದಂತೆ ಒಟ್ಟು 8 ಪ್ರಕರಣಗಳು ಪತ್ತೆಯಾಗಿವೆ. ಜತೆಗೆ ಹತ್ತು ಇತರೆ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ವಾರೆಂಟ್‌ ಜಾರಿಯಾಗಿದ್ದು, ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಈತನಿಂದ 30 ಲಕ್ಷ ರೂ. ಮೌಲ್ಯದ ಒಂದು ಕೆ.ಜಿ. ಚಿನ್ನದ ಒಡವೆ, ಹವಳ, ರೂಬಿ ಒಡವೆಗಳು ಹಾಗೂ ಮೂರು
ಮೊಬೈಲ್‌ಗ‌ಳನ್ನು ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಈತನಿಂದ ಕಳವು ವಸ್ತುಗಳನ್ನು ಅಡಮಾನ ಇಟ್ಟುಕೊಳ್ಳುತ್ತಿದ್ದ ಅಟ್ಟಿಕಾ ಗೋಲ್ಡ್‌ ಪ್ರೈವೇಟ್‌ ಲಿಮಿಟೆಡ್‌ ಮಾಲೀಕ ಬೊಮ್ಮನಹಳ್ಳಿ ಬಾಬು, ನಿರ್ದೇಶಕ ಉರ್ಮಿಳಾ ಸತ್ಯನಾರಾಯಣ್‌, ಶಿವಾಜಿನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಶಾಖೆಯ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

“ಎಸ್ಕೇಪ್‌’ ಕಾರ್ತಿಕ್‌ ಆದ: ಕಳವು ಮಾಡಿ ನೆರೆ ರಾಜ್ಯಗಳು ಹಾಗೂ ಜಿಲ್ಲೆಗಳಲ್ಲಿ ತಲೆಮರೆಸಿಕೊಳ್ಳತ್ತಿದ್ದ ಹೆಣ್ಣೂರು ನಿವಾಸಿ ಕಾರ್ತಿಕ್‌ 6ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಾನೆ. 2005ರಲ್ಲಿ ಹೆಣ್ಣೂರಿನ ಮನೆಯೊಂದಕ್ಕೆ ಕಿಟಕಿಯ ಮೂಲಕ ನುಗ್ಗಿ 10 ಲಕ್ಷ ರೂ. ನಗದು ಕಳವು ಮಾಡಿದ್ದ. 2007ರಲ್ಲಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದು, ಜೈಲು ಸೇರಿದ್ದ. ಈ ವೇಳೆ ನಿತ್ಯ ಜೈಲಿಗೆ ಊಟ ತರುವ ಇಸ್ಕಾನ್‌ ಸಂಸ್ಥೆಯ ವಾಹನದ ಕೆಳಗೆ ಚಾರ್ಸಿ ಬಳಿ ಅವಿತುಕೊಂಡು ಜೈಲಿನಿಂದ ಪರಾರಿಯಾಗಿದ್ದ. 45 ದಿನಗಳ ಬಳಿಕ ಸಿಸಿಬಿ ಪೊಲೀಸರು ಮತ್ತೆ ಬಂಧಿಸಿದ್ದರು.ಅಂದಿನಿಂದ ಕಾರ್ತಿಕ್‌ “ಎಸ್ಕೇಪ್‌ ಕಾರ್ತಿಕ್‌’ ಆಗಿ ಕುಖ್ಯಾತಿಗಳಿಸಿದ್ದ. ಎರಡು ವರ್ಷದ ಬಳಿಕ ಬಿಡುಗಡೆಯಾಗಿದ್ದ.

2010ರಲ್ಲಿ ಜೀವನ ಭೀಮಾನಗರ ಪೊಲೀಸರು ಕಳವು ಪ್ರಕರಣದ ವಿಚಾರಣೆ ವೇಳೆ ಶೌಚಾಲಯ ಹೋಗುವುದಾಗಿ
ಹೇಳಿ ಠಾಣೆಯ ಶೌಚಾಲಯದ ಕಿಟಕಿ ಗಾಜುಗಳನ್ನು ಒಡೆದು, ಸ್ಯಾನಿಟರಿ ಪೈಪ್‌ ಮೂಲಕ ಇಳಿದು ಪರಾರಿಯಾಗಿದ್ದ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಅದೇ ದಿನವೇ ಬಂಧಿಸಿದ್ದರು. 2013ರಲ್ಲಿ ಬಾಣಸವಾಡಿ ಪೊಲೀಸರು ವಿಚಾರಣೆ ನಡೆಸುವಾಗ ಕಾರ್ತಿಕ್‌ ಠಾಣೆಯಿಂದಲೇ ಪರಾರಿಯಾಗಿದ್ದ. ನಂತರ ಕೆಲ ದಿನಗಳಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ವರ್ಷದಲ್ಲಿ ಎರಡು ಮೂರು ಬಾರಿ ಜೈಲಿಗೆ ಸೇರುತ್ತಿದ್ದ ಕಾರ್ತಿಕ್‌ ಜಾಮೀನಿನ ಮೇಲೆ ಹೊರಬರುತ್ತಿದ್ದ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈಶಾನ್ಯ ವಿಭಾಗದ ಡಿಸಿಪಿ ಎಸ್‌ ಗಿರೀಶ್‌, ಎಸಿಪಿ ಎಂ.ಎಚ್‌. ನಾಗ್ತಿ, ಪಿಐ ಎಚ್‌. ಹರಿಯಪ್ಪ ಇತರರು ಇದ್ದರು.

ಬೈಬಲ್‌ ತರಬೇತಿಗೆ ಹೋಗಿದ್ದ !
ಆರೋಪಿ ಕಾರ್ತಿಕ್‌ ಕ್ರಿಶ್ಚಿಯನ್‌ ಸಮುದಾಯದವನಾಗಿದ್ದು, ಕೆಲ ತಿಂಗಳಿನಿಂದ ಪಶ್ಚಿಮ ಬಂಗಾಳದ ಪ್ರಸಿದ್ಧ ಚರ್ಚ್‌ವೊಂದರಲ್ಲಿ ಬೈಬಲ್‌ ಕುರಿತ ತರಬೇತಿ ಪಡೆದ ಬಗ್ಗೆ ಕಾರ್ತಿಕ್‌ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಆದರೆ, ಪಶ್ಚಿಮ ಬಂಗಾಳದಲ್ಲಿಯೂ ಮನೆ ಕಳವು ಮಾಡಿರುವ ಬಗ್ಗೆ ಅನುಮಾನವಿದ್ದು, ಅಲ್ಲಿನ ಪೊಲೀಸರನ್ನು ಸಂಪರ್ಕಿಸಲಾಗಿದೆ. ಹಾಗೆಯೇ ಮೈಸೂರು, ಹಾಸನ ಜಿಲ್ಲೆ ಹಾಗೂ ನಗರದ ಇತರೆ ಠಾಣೆ ಪೊಲೀಸರು ಆರೋಪಿಯನ್ನು ಬಾಡಿ ವಾರೆಂಟ್‌ ಮೂಲಕ ವಶಕ್ಕೆ ಪಡೆದು ವಿಚಾರಣೆ ನಡೆಸುವಂತೆ ಸೂಚಿಸಲಾಗಿದೆ ಎಂದು ಸೀಮಂತ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ

Advertisement

ಕಳ್ಳತನದ ದುಡ್ಡಿನಿಂದ ಮೋಜಿನ ಜೀವನ ಈ ಮಧ್ಯೆ ಆರೋಪಿ ಸಾರಾಯಿಪಾಳ್ಯದ ರಾಯಿಲಾ ಎಂಬಾಕೆಯನ್ನು
ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಕಳ್ಳತನದಿಂದ ಬರುತ್ತಿದ್ದ ಹಣದಲ್ಲಿ ಸಹಚರರೊಂದಿಗೆ ಗೋವಾ, ಊಟಿಯಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ. ಜತೆಗೆ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳದ ಕೆಲ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಹೋಗುತ್ತಿದ್ದ. ಈತ ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರಲಿಲ್ಲ. ವಿಚಾರಣೆ ವೇಳೆ ಕಳವು ವಸ್ತುಗಳನ್ನು ಹಿಂದಿರುಗಿಸುತ್ತೇನೆ. ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆ. ದಯವಿಟ್ಟು ಹಲ್ಲೆ ನಡೆಸದಂತೆ ಮನವಿ ಮಾಡುತ್ತಿದ್ದ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಟು ಕೇರಳ
ಕಾರ್ತಿಕ್‌ನ ಬೆನ್ನತ್ತಿದ್ದ ಪೊಲೀಸರು ಮೊದಲಿಗೆ ಕಾರ್ತಿಕ್‌ನ ಸಹಚರನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಪಶ್ಚಿಮ ಬಂಗಾಳದಲ್ಲಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮಾಸ್ಟರ್‌ ಪ್ಲ್ರಾನ್‌ ಮಾಡಿದ ಕೊತ್ತನೂರು ಪೊಲೀಸರು, ವಶಕ್ಕೆ ಪಡೆದ ಸಹಚರನಿಂದ ಕರೆ ಮಾಡಿಸಿ, ಬೆಂಗಳೂರು, ಮೈಸೂರು ಸಿಸಿಬಿ ಪೊಲೀಸರು ನಿನ್ನ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೀಗಾಗಿ ಕೇರಳದ ಪಾಲ್ಕೊಡ್‌ಗೆ ಬರುವಂತೆ ಹೇಳಿಸಿದ್ದರು. ಅದರಂತೆ ಆರೋಪಿ ಕಾರ್ತಿಕ್‌ ಕೇರಳದ ಪಾಲ್ಕೊಡ್‌ಗೆ ಬಂದಾಗ ಸುತ್ತವರಿದ ಪೊಲೀಸರ ವಿಶೇಷ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next