ಬಾಗಲಕೋಟೆ: ಈತ ಅಪ್ಪಟ ರೈತನ ಮಗ. ಕೃಷಿಯೇ ಇವರ ಕುಟುಂಬದ ಮೂಲ ವೃತ್ತಿ. ಜತೆಗೆ ಹಳ್ಳಿಯ ಹೈದ. ಸತತ ಓದು, ಪರಿಶ್ರಮದಿಂದ ತೋಟಗಾರಿಕೆ ವಿವಿಯ ನಾಲ್ಕು ಚಿನ್ನದ ಪದಕ ಪಡೆದ ಸಾಧಕ. ಇದೀಗ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಆಶಾವಾದಿ. ಏನೇ ಕಷ್ಟ ಬಂದರೂ ಜಿಲ್ಲಾಧಿಕಾರಿ ಆಗಬೇಕೆಂಬ ಗುರಿ ಆತನದ್ದು.
ಈತನ ಹೆಸರು ಕಾರ್ತಿಕ ಪಾಟೀಲ. ಹಾವೇರಿ ಜಿಲ್ಲೆಯ ರಾಣಿಬೆಣ್ಣೂರ ತಾಲೂಕಿನ ಹಲಗೇರಿಯ ಪ್ರತಿಭಾವಂತ ವಿದ್ಯಾರ್ಥಿ. ಹಲಗೇರಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದ ಈ ಕಾರ್ತಿಕ, ಎಸ್ಸೆಸ್ಸೆಲ್ಸಿಯಲ್ಲಿ ಶೇ.89 ಅಂಕ ಪಡೆದಿದ್ದ. ಶಿಕಾರಿಪುರದ ಅಕ್ಷರ ಕಾಲೇಜಿನಲ್ಲಿ ಪಿಯುಸಿ ಕಲಿತ ಈತ, ಶೇ.94ರಷ್ಟು ಅಂಕ ಪಡೆದು ತೋಟಗಾರಿಕೆ ವಿವಿಯ ಅಧೀನದ ಅರಬಾವಿಯ ರಾಣಿ ಚೆನ್ನಮ್ಮ ತೋಟಗಾರಿಕೆ ಕಾಲೇಜಿನಲ್ಲಿ ಬಿಎಸ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿ ಒಟ್ಟು ನಾಲ್ಕು ಚಿನ್ನದ ಪದಕ ಪಡೆದಿದ್ದಾನೆ. ತಂದೆ ಪ್ರಕಾಶ ಯು. ಪಾಟೀಲ, ಹಲಗೇರಿಯಲ್ಲಿ ಕೃಷಿಕರಾಗಿದ್ದು, 10 ಎಕರೆ ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ. ತಾಯಿ ಬಾಗೇಶ್ವರಿ ಕೂಡ, ತಂದೆಯೊಂದಿಗೆ ಕೃಷಿಗೆ ಸಹಾಯ ಮಾಡುತ್ತ, ಗೃಹಿಣಿಯಾಗಿದ್ದಾರೆ.
ಐಎಎಸ್ ಮಾಡೇ ಮಾಡ್ತೇನೆ: ಹಳ್ಳಿಯಲ್ಲಿ ಬೆಳೆದ ಈತ ಐಎಎಸ್ ಮಾಡಬೇಕೆಂಬ ಗುರಿ ಹೊಂದಿದ್ದಾನೆ. ಅದಕ್ಕೆ ತಕ್ಕಂತೆ ಪೂರ್ವ ತಯಾರಿ ಕೂಡ ನಡೆಸಿದ್ದಾನೆ. ಐಪಿಎಸ್ ಅಧಿಕಾರಿ ರವಿ ಚನ್ನಣವರ ಅವರಂತಹ ಅಧಿಕಾರಿಗಳೇ ನನಗೆ ಪ್ರೇರಣೆ. ಎಷ್ಟೇ ಕಷ್ಟವಾದರೂ ಯುಪಿಎಸ್‌ಸಿ ಪರೀಕ್ಷೆ ಬರೆದು, ಐಎಎಸ್ ಪಾಸಾಗಿ ಜಿಲ್ಲಾಧಿಕಾರಿಯಾಗಬೇಕು. ಆ ಮೂಲಕ ಒಂದು ಇಡೀ ಜಿಲ್ಲೆಯ ಜನರ ಸೇವೆ ಮಾಡಬೇಕು. ಶ್ರೇಷ್ಟ ಮಾನವನಾಗಿ, ದೇಶಕ್ಕೆ ಒಳ್ಳೆಯ ಪ್ರಜೆಯಾಗಿ, ಮನೆಗೆ ಉತ್ತಮ ಮಗನಾಗಿ, ನನ್ನದೇ ಆದ ವೈಯಕ್ತಿಕ ಸಾಧನೆಯೊಂದಿಗೆ ಬದುಕಬೇಕು ಎಂಬುದು ನನ್ನ ಗುರಿ ಎಂದು ಕಾರ್ತಿಕ ಪಾಟೀಲ ಹೇಳಿಕೊಂಡರು.
ಬಿಎಸ್ಸಿ ತೋಟಗಾರಿಕೆ ಪದವಿ ಬಳಿಕ, ಈಗ ಒಂದು ವರ್ಷದಿಂದ ಬೆಂಗಳೂರಿನಲ್ಲಿ ಬಾಡಿಗೆ ಕೋಣೆ ಮಾಡಿಕೊಂಡು ಯುಪಿಎಸ್‌ಸಿ ಪರೀಕ್ಷೆಯ ತರಬೇತಿ ಪಡೆಯುತ್ತಿದ್ದಾನೆ. ಸಾಕಷ್ಟು ಕಷ್ಟಗಳ ಮಧ್ಯೆಯೂ ಜಿಲ್ಲಾಧಿಕಾರಿ ಆಗಬೇಕೆಂಬ ದೃಢ ನಿರ್ಧಾರದೊಂದಿಗೆ ಮುನ್ನಡೆಯುತ್ತಿರುವುದಾಗಿ ಕಾರ್ತಿಕ ತಿಳಿಸಿದರು.
ನಾನು ರೈತ ಕುಟುಂಬದವನು. ಬಿಎಸ್ಸಿಯಲ್ಲಿ ರ್‍ಯಾಂಕ್ ಬಂದಿದ್ದಕ್ಕೆ 4 ಚಿನ್ನದ ಪದಕ ಪಡೆದಿರುವುದು ಖುಷಿ ತಂದಿದೆ. ಆದರೆ, ನನ್ನ ಖುಷಿ ಇದಲ್ಲ. ನಾನು ಯುಪಿಎಸ್‌ಸಿ ಪರೀಕ್ಷೆ ಪಾಸಾಗಿ ಜಿಲ್ಲಾಧಿಕಾರಿಯಾಗಬೇಕೆಂಬ ಕನಸಿದೆ. ಆಗ ನನಗೆ ಪೂರ್ಣ ಖುಷಿ ತರಲಿದೆ. ಅದಕ್ಕಾಗಿ ತಯಾರಿ ನಡೆಸಿದ್ದೇನೆ. ಎಲ್ಲರೊಂದಿಗೆ ಬೆರೆತು, ಸಮಾಜದ ಪ್ರತಿ ಸ್ಥರದ ಜನರಿಗೂ ಸಹಾಯ ಮಾಡಬೇಕೆಂಬ ಆಶೆ. ಅದು ಜಿಲ್ಲಾಧಿಕಾರಿ ಸ್ಥಾನದಿಂದ ಸಾಧ್ಯವಿದೆ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇನೆ.
ಕಾರ್ತಿಕ ಪ್ರಕಾಶ ಪಾಟೀಲ
ನಾಲ್ಕು ಚಿನ್ನದ ಪದಕ ಪಡೆದ ವಿದ್ಯಾರ್ಥಿ.