ಬೀದರ: ಶೈಕ್ಷಣಿಕವಾಗಿ ಪ್ರಗತಿಯ ಹೆಜ್ಜೆಯನ್ನಿಡುತ್ತಿರುವ ಗಡಿ ನಾಡು ಬೀದರನ ವಿದ್ಯಾರ್ಥಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ಅಖೀಲ ಭಾರತಮಟ್ಟದಲ್ಲಿ 9ನೇ ರ್‍ಯಾಂಕ್ ಹಾಗೂರಾಜ್ಯಕ್ಕೆ ಮೊದಲ ಸ್ಥಾನ ಪಡೆಯುವ ಮೂಲಕ ಜಿಲ್ಲೆಯ ಗರಿಮೆ ಹೆಚ್ಚಿಸಿದ್ದಾನೆ.
ಇಲ್ಲಿಯ ಶಾಹೀನ್ ಪದವಿ ಪೂರ್ವವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ ರೆಡ್ಡಿ ಅಮೋಘ ಸಾಧನೆ ಮಾಡಿರುವ ಪ್ರತಿಭಾನ್ವಿತ ವಿದ್ಯಾರ್ಥಿ. ಎಸ್ಸೆಸ್ಸೆಲ್ಸಿಯಲ್ಲಿಶೇ.94 ಹಾಗೂ ದ್ವಿತೀಯ ಪಿಯುಸಿ (ವಿಜ್ಞಾನ)ಯಲ್ಲಿ ಶೇ.95 ಅಂಕ ಪಡೆದಿದ್ದ ಕಾರ್ತಿಕ, ಸಿಇಟಿ ಮತ್ತು ನೀಟ್‌ನಲ್ಲೂ ಉತ್ತಮ ಫಲಿತಾಂಶದ ಮೂಲಕ ಗಮನ ಸೆಳೆಸಿದ್ದಾನೆ. ಸಿಇಟಿ (ಪಶು ವೈದ್ಯಕೀಯ) ಪರೀಕ್ಷೆಯಲ್ಲಿ 9ನೇ ರ್‍ಯಾಂಕ್ ಪಡೆದಿದ್ದರೆ ಈಗ ನೀಟ್ ನಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು 720ಕ್ಕೆ 710 ಅಂಕ ಗಳಿಸಿದ್ದಾನೆ.
ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ರೆಡ್ಡಿ ಹಾಗೂಚಿಟ್ಟಾವಾಡಿಯ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆಯ ಶಿಕ್ಷಕಿ ಕಲ್ಪನಾ ಅವರ ಪುತ್ರನಾಗಿರುವ ಕಾರ್ತಿಕ, ನಗರದ ಜಾಯ್ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಮತ್ತು ಶಾಹೀನ್ ಕಾಲೇಜಿನಲ್ಲಿ ಪಿಯು ಅಭ್ಯಾಸ ಮಾಡಿದ್ದಾನೆ.ವಿದ್ಯಾರ್ಥಿಯ ಎರಡು ವರ್ಷಗಳ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿದೆ.ಕಠಿಣ ಪರಿಶ್ರಮ, ನಿರಂತರಅಭ್ಯಾಸವೇ ನನ್ನ ಸಾಧನೆಯ ಗುಟ್ಟು.ಅಂದಿನ ಪಾಠವನ್ನು ಅದೇ ದಿನ ಓದಿ ಮುಗಿಸುತ್ತಿದ್ದೆ. ನಿತ್ಯ 8ರಿಂದ 10 ತಾಸು ನನ್ನ ಅಭ್ಯಾಸ ಇರುತ್ತಿತ್ತು. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು ಮೊಬೈಲ್‌ನಲ್ಲಿ ನೀಟ್ ಬಗೆಗಿನ ಗೊಂದಲ ನಿವಾರಿಸಿದರು.
ನೀಟ್‌ನ ಆಲ್ ಇಂಡಿಯಾದಲ್ಲಿ 50ರೊಳಗೆ ರ್‍ಯಾಂಕ್ ಬರುವ ನಿರೀಕ್ಷೆ ಇತ್ತು. ಆದರೆ 10ರೊಳಗೆ ರ್‍ಯಾಂಕ್ ಬಂದಿರುವುದು ಖುಷಿ ತಂದಿದೆ. ನನ್ನ ಈ ಸಾಧನೆಗೆ ಕಾಲೇಜು ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಮತ್ತು ಪಾಲಕರ ಆತ್ಮಬಲದ ಪ್ರೇರೇಪಣೆಯೇ ಕಾರಣ ಎನ್ನುತ್ತಾನೆ ಕಾರ್ತಿಕ ರೆಡ್ಡಿ.ಎರಡು ದಶಕಗಳಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಬೀದರ ಜಿಲ್ಲೆ ಚಿತ್ರಣ ಸಾಕಷ್ಟು ಬದಲಾಗಿದ್ದು, ಹಿಂದುಳಿದ ಹಣೆಪಟ್ಟಿ ಕಳಚುತ್ತಿದೆ. ಇದಕ್ಕೆ ಇಲ್ಲಿನ ಪ್ರತಿಭಾನ್ವಿತರು ಯುಪಿಎಸ್ಸಿ ಪರೀಕ್ಷೆ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡುತ್ತಿರುವುದೇ ಸಾಕ್ಷಿ.
ಲಾರಿ ಚಾಲಕನ ಮಗನಿಗೆ ಮೂರನೇ ಸ್ಥಾನ : ಮನೆಯಲ್ಲಿ ಹೊದ್ದು ಮಲಗಿದ ಬಡತನ. ಲಾರಿ ಚಾಲನೆಯಿಂದ ಕುಟುಂಬಕ್ಕೆ ಆಧಾರವಾಗಿದ್ದ ತಂದೆಯೂ ಪಾರ್ಶ್ವವಾಯು ಪೀಡಿತ. ಕಡು ಬಡತನವನ್ನೇ ಮೆಟ್ಟಿ ನಿಂತು ದ್ವಿತೀಯ ಪಿಯುಸಿ ಮತ್ತು ಕೆ- ಸಿಇಟಿಯಲ್ಲಿ ಸಾಧನೆ ಮಾಡಿದ್ದ ಬೀದರಶಾಹೀನ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಅರ್ಬಾಜ್ ಅಹಮ್ಮದ್ ಸಲಿಮುದ್ದೀನ್ ಈಗ ನೀಟ್‌ನಲ್ಲೂ ರಾಜ್ಯಕ್ಕೆ 3ನೇ ರ್‍ಯಾಂಕ್ ಪಡೆಯುವ ಮೂಲಕ ಗಮನಸೆಳೆದಿದ್ದಾನೆ. ಬಸವಕಲ್ಯಾಣದ ಪ್ರತಿಭಾವಂತ ವಿದ್ಯಾರ್ಥಿ 700 ಅಂಕಗಳೊಂದಿಗೆ ಅಖೀಲ ಭಾರತ ಮಟ್ಟದಲ್ಲಿ 85ನೇ ರ್‍ಯಾಂಕ್ ಪಡೆದಿದ್ದಾನೆ. ಪಶು ವೈದ್ಯಕೀಯ ವಿಭಾಗ 6, ಬಿ ಫಾರ್ಮಾ- ಡಿ ಫಾರ್ಮಾ ವಿಭಾಗದಲ್ಲಿ 9ನೇ ರ್‍ಯಾಂಕ್ ಮತ್ತು ಬಿಎಸ್‌ಸಿ (ಕೃಷಿ)ಯಲ್ಲಿ 53ನೇ ರ್‍ಯಾಂಕ್ ಪಡೆದಿರುವ ಅರ್ಬಾಜ್ ಸರ್ಕಾರದ ಶಿಷ್ಯವೇತನ, ಶಾಹೀನ್ ಸಂಸ್ಥೆಯ ಸಹಾಯದಿಂದಲೇ ಶೈಕ್ಷಣಿಕ ಸಾಧನೆಯಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸಿದ್ದಾನೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ.97 ಅಂಕ ಪಡೆದಿದ್ದ ಅರ್ಬಾಜ್‌ಗೆ ಶಾಹೀನ್ ಸಂಸ್ಥೆ ಪಿಯುಸಿಗೆ ಉಚಿತ ಶಿಕ್ಷಣ ನೀಡಿದೆ. ಅದರ ಲಾಭ ಪಡೆದ ವಿದ್ಯಾರ್ಥಿ ದ್ವಿತೀಯ ಪಿಯುಸಿಯಲ್ಲಿ ಶೇ.95.5ರಷ್ಟು ಒಟ್ಟಾರೆ ಅಂಕ ಪಡೆದಿದ್ದ. ಲಾರಿ ಚಾಲಕರಾಗಿದ್ದ ತಂದೆ ಅಲ್ಪ ಆದಾಯದಲ್ಲೇ ಮಕ್ಕಳಿಗೆ ಉನ್ನತ ಶಿಕ್ಷಣ ಕಲ್ಪಿಸಿದ್ದಾರೆ. ಆದರೆ, ಪಾರ್ಶ್ವವಾಯು ಹಿನ್ನೆಲೆಯಲ್ಲಿ ಅವರ ಆದಾಯವೇ ನಿಂತಿದೆ. ಆದರೂ, ಬಡತನದ ಮಧ್ಯೆಯೂ ಸ್ಕಾಲರ್‌ಶಿಪ್‌ನ ಸಹಾಯದಿಂದಲೇ ತಮ್ಮ ಶಿಕ್ಷಣ ಪಡೆದಿದ್ದಾನೆ. ವೈದ್ಯಕೀಯ ವಿಭಾಗದಲ್ಲಿ ಉತ್ತಮ ರ್‍ಯಾಂಕ್ ಗಳಿಸಿರುವ ಅರ್ಬಾಜ್ ಮುಂದೆ ವೈದ್ಯನಾಗಿ ಸೇವೆ ಸಲ್ಲಿಸುವ ಆಶಯ ಹೊಂದಿದ್ದಾನೆ.
ನೀಟ್‌ನಲ್ಲಿ “ಶಾಹೀನ್’ ಹೊಸ ವಿಕ್ರಮ :
ಬೀದರ: ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತಾಮತ್ತು ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ಇಲ್ಲಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ ರೆಡ್ಡಿ 710 ಅಂಕಗಳೊಂದಿಗೆ 9ನೇ ರ್‍ಯಾಂಕ್ ಮತ್ತು ಅರ್ಬಾಜ್ ಅಹಮ್ಮದ್ 700 ಅಂಕಗಳೊಂದಿಗೆ 85 ನೇ ರ್‍ಯಾಂಕ್ ಪಡೆದು ಅಮೋಘ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ತಿಳಿಸಿದ್ದಾರೆ.
ನೀಟ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳು ರಾಜ್ಯದಲ್ಲೇ ಹೊಸ ವಿಕ್ರಮ ಸಾ ಧಿಸಿದ್ದಾರೆ. ಪ್ರಸಕ್ತ ವರ್ಷ ಕಾಲೇಜಿನ ಸುಮಾರು 400 ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆಯಲಿದ್ದಾರೆ. ರಾಜ್ಯದ ಒಟ್ಟು ವೈದ್ಯಕೀಯ ಸೀಟುಗಳಲ್ಲಿ ಕಾಲೇಜು ಶೇ. 10 ರಷ್ಟು ಸೀಟುಗಳನ್ನು ಗಳಿಸುವ ನಿರೀಕ್ಷೆ ಇದೆ. ಕಳೆದವರ್ಷ ಕಾಲೇಜು ಶೇ 8.32 ರಷ್ಟು ಸ್ಥಾನಗಳನ್ನು ಪಡೆದಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ. ಕಾಲೇಜು 2016 ರಲ್ಲಿ ಸರ್ಕಾರಿ ಕೋಟಾದಡಿ 152, 2017 ರಲ್ಲಿ 201, 2018 ರಲ್ಲಿ 304 ಹಾಗೂ 2019 ರಲ್ಲಿ 327 ಸ್ಥಾನಗಳನ್ನು ಪಡೆದಿದೆ. ನೀಟ್ ನಲ್ಲಿ 2016 ರಲ್ಲಿ ವಚನಶ್ರೀ ಪಾಟೀಲ 332ನೇ ರ್‍ಯಾಂಕ್ ಹಾಗೂ 2018 ರಲ್ಲಿ ವಿನೀತ್ ಮೇಗೂರ್ 342ನೇ ರ್‍ಯಾಂಕ್ ಗಳಿಸಿ ಸಾಧನೆ ತೋರಿದ್ದರು ಎಂದು ತಿಳಿಸಿದ್ದಾರೆ.
ಏಕಾಗ್ರತೆ, ಶಿಸ್ತು ಸೇರಿದಂತೆ ಕಾಲೇಜಿನಲ್ಲಿ ಇರುವ ಉತ್ತಮ ಶೈಕ್ಷಣಿಕ ವಾತಾವರಣ, ಆಡಳಿತ ಮಂಡಳಿ, ಉಪನ್ಯಾಸಕರ ಮಾರ್ಗದರ್ಶನ, ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಪಾಲಕರ ಸಹಕಾರದಿಂದಾಗಿ ನೀಟ್ ನಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಸಾಧಕ ವಿದ್ಯಾರ್ಥಿಗಳಲ್ಲಿ ಹಾಸ್ಟೆಲ್ ನಲ್ಲಿ ವಾಸವಾಗಿದ್ದ ವಿದ್ಯಾರ್ಥಿಗಳು ಅ ಧಿಕಸಂಖ್ಯೆಯಲ್ಲಿದ್ದಾರೆ ಎಂದು ಹೇಳಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಬೀದರ್‌ನ ಹಿಂದುಳಿದ ಹಣೆಪಟ್ಟಿ ಕಳಚಿದೆ. ನೀಟ್‌ನಲ್ಲಿ ಉತ್ತಮ ರ್‍ಯಾಂಕ್, ಕೆಸಿಇಟಿಯಲ್ಲಿ ಒಂದಂಕಿಯ ರ್‍ಯಾಂಕ್‌ಗಳು ಬರುತ್ತಿರುವ ಕಾರಣ ಬೀದರನ ಘನತೆ ಹೆಚ್ಚಿದೆ. ಹಿಂದೆ ವೈದ್ಯರ ಮಕ್ಕಳೇ ವೈದ್ಯರಾಗುವ ಕಾಲ ಇತ್ತು. ಇದೀಗ ಬಡವರ ಮಕ್ಕಳೂ ವೈದ್ಯರಾಗುತ್ತಿದ್ದಾರೆ. ಗುಣಮಟ್ಟದ ಶಿಕ್ಷಣದಿಂದಾಗಿ ಈ ಬದಲಾವಣೆ ಸಾಧ್ಯವಾಗಿದೆ ಎಂದು ಡಾ. ಖದೀರ್ ಅಭಿಪ್ರಾಯಪಟ್ಟಿದ್ದಾರೆ.
–ಶಶಿಕಾಂತ ಬಂಬುಳಗೆ