Advertisement

ಗೊಂದಲದ ನಡುವೆಯೇ ಕರ್ತಾರ್ಪುರಕ್ಕಿಂದು ಚಾಲನೆ

09:48 AM Nov 10, 2019 | Hari Prasad |

ಹೊಸದಿಲ್ಲಿ: ಕರ್ತಾರ್ಪುರ ಕಾರಿಡಾರ್‌ ವಿಚಾರದಲ್ಲಿ ದಿನಕ್ಕೊಂದು ಹೇಳಿಕೆ ನೀಡಿ ಗೊಂದಲ ಮೂಡಿಸುತ್ತಲೇ ಬಂದಿರುವ ಪಾಕಿಸ್ಥಾನ ಈಗ ಯಾತ್ರಿಕರಿಗೆ 20 ಅಮೆರಿಕನ್‌ ಡಾಲರ್‌ ಶುಲ್ಕ ವಿಧಿಸುವ ಮೂಲಕ ತನ್ನ ಕುತಂತ್ರ ಬುದ್ಧಿ ತೋರಿಸಿದೆ.

Advertisement

ಶನಿವಾರ ಕರ್ತಾರ್ಪುರ ಕಾರಿಡಾರ್‌ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದ್ದು, ಉದ್ಘಾಟನೆ ದಿನ ಭಾರತದಿಂದ ಗುರುದ್ವಾರ ದರ್ಬಾರ್‌ ಸಾಹಿಬ್‌ಗ ಆಗಮಿಸುವ ಯಾತ್ರಿಕರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಕಳೆದ ವಾರವಷ್ಟೇ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಘೋಷಿಸಿದ್ದರು.

ಆದರೆ, ಇನ್ನೇನು ಉದ್ಘಾಟನೆಗೆ ಒಂದು ದಿನ ಮಾತ್ರ ಬಾಕಿ ಇರುವಂತೆಯೇ, ಅಂದರೆ ಶುಕ್ರವಾರ ನೆರೆರಾಷ್ಟ್ರ ಉಲ್ಟಾ ಹೊಡೆದಿದೆ. ಶನಿವಾರ ಆಗಮಿಸುವ ಯಾತ್ರಿಕರು ಕೂಡ 20 ಡಾಲರ್‌ ಶುಲ್ಕ ಪಾವತಿಸುವುದು ಕಡ್ಡಾಯ ಎಂದು ಘೋಷಿಸಿದೆ. ಇದೇ ವೇಳೆ, ಭಾರತದಿಂದ ಪಾಕ್‌ಗೆ ತೆರಳಲಿರುವ 550 ಸದಸ್ಯರ ಅಧಿಕೃತ ನಿಯೋಗ ಕೂಡ ಈ ಶುಲ್ಕ ಪಾವತಿಸಬೇಕೇ, ಬೇಡವೇ ಎಂಬ ಬಗ್ಗೆ ಪಾಕಿಸ್ಥಾನ ಇನ್ನೂ ಸ್ಪಷ್ಟಪಡಿಸಿಲ್ಲ.

ಇಂದು ಎರಡೂ ಕಡೆ ಉದ್ಘಾಟನೆ: ಶನಿವಾರ ಭಾರತ ಮತ್ತು ಪಾಕಿಸ್ಥಾನದಲ್ಲಿ ಕರ್ತಾರ್ಪುರ ಕಾರಿಡಾರ್‌ ಉದ್ಘಾಟನೆ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಕರ್ತಾರ್ಪುರದ ದರ್ಬಾರ್‌ ಸಾಹಿಬ್‌ನಲ್ಲಿ ಪಾಕ್‌ ಸರಕಾರ ಕಾರ್ಯಕ್ರಮ ಆಯೋಜಿಸಿದ್ದು, ಪ್ರಧಾನಿ ಇಮ್ರಾನ್‌ ಖಾನ್‌ ಉದ್ಘಾಟನೆ ನೆರವೇರಿಸಲಿದ್ದಾರೆ.

ಇತ್ತ ಪಂಜಾಬ್‌ನ ಗುರುದಾಸ್ಪುರದಲ್ಲಿನ ಡೇರಾ ಬಾಬಾ ನಾನಕ್‌ನಲ್ಲಿ ಕರ್ತಾರ್ಪುರ ಚೆಕ್‌ಪೋಸ್ಟ್‌ಗೆ ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಚಾಲನೆ ನೀಡಲಿದ್ದಾರೆ. ಇದಕ್ಕೂ ಮುನ್ನ ಮೋದಿಯವರು ಸುಲ್ತಾನ್‌ಪುರ ಲೋಧಿ ಯಲ್ಲಿ ಬೇರ್‌ ಸಾಹಿಬ್‌ ಗುರುದ್ವಾರಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಡೇರಾ ಬಾಬಾ ನಾನಕ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ.

Advertisement

ಕಾತರ… ಸಂಭ್ರಮ…
ಪಾಸ್‌ಪೋರ್ಟ್‌ ಬೇಕೇ, ಬೇಡವೇ, ಶುಲ್ಕ ಇದೆಯೇ, ಇಲ್ಲವೇ…. ಎಂಬಿತ್ಯಾದಿ ಪಾಕ್‌ ನಿರ್ಮಿತ ಗೊಂದಲಗಳ ನಡುವೆಯೂ ಐತಿಹಾಸಿಕ ಕರ್ತಾರ್ಪುರ ಕಾರಿಡಾರ್‌ ಸಂಚಾರಕ್ಕೆ ಮುಕ್ತವಾಗಲಿ ಎಂಬ ನಿರೀಕ್ಷೆಯಿಂದ ಸಾವಿರಾರು ಸಿಕ್ಖ್ ಯಾತ್ರಿಕರು ಕಾಯುತ್ತಿದ್ದು, ಗುರುದ್ವಾರ ದರ್ಬಾರ್‌ ಸಾಹಿಬ್‌ ಅನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

ಗುರು ನಾನಕ್‌ಜೀ ಅವರ 550ನೇ ಜನ್ಮದಿನಾಚರಣೆಯ ಸಂಭ್ರಮವೂ ಮನೆಮಾಡಿದ್ದು, ಭಾರತ ಸೇರಿದಂತೆ ವಿವಿಧ ದೇಶ ಗಳಿಂದ ಸಿಕ್ಖರು ನನ್‌ಕಾನಾ ಸಾಹಿಬ್‌ನತ್ತ ಪ್ರಯಾಣ ಬೆಳೆಸಿದ್ದಾರೆ. ವೀಸಾರಹಿತವಾಗಿ ದರ್ಬಾರ್‌ಸಾಹಿಬ್‌ಗ ಭೇಟಿ ನೀಡುವ ಸುವರ್ಣಾವಕಾಶ ಇದೇ ಮೊದಲ ಬಾರಿಗೆ ಭಾರತೀಯ ಸಿಖ್ಖರಿಗೆ ದೊರೆತಿರುವುದು, ಅವರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಕರ್ತಾರ್ಪುರದಲ್ಲಿ ‘ಇಂಡಿಯನ್‌ ಬಾಂಬ್‌’: ಪ್ರಚೋದನೆ ಯತ್ನ!


ಖಲಿಸ್ತಾನ ಪ್ರತ್ಯೇಕತಾವಾದಿಗಳ ಫೋಟೋಗಳು ಕಾಣುವಂಥ ವೀಡಿಯೋವನ್ನು ಬಿಡುಗಡೆ ಮಾಡಿ ವಿವಾದಕ್ಕೆ ಸಿಲುಕಿದ್ದ ಪಾಕಿಸ್ಥಾನ, ಈಗ ಮತ್ತೂಂದು ಉದ್ಧಟತನ ಪ್ರದರ್ಶಿಸಿದೆ. ಕರ್ತಾರ್ಪುರದ ಗುರುದ್ವಾರದ ಬಳಿ ಪಾಕ್‌ ಸರಕಾರವು ಅನಗತ್ಯವಾಗಿ ‘ಭಾರತದ ಬಾಂಬ್‌’ವೊಂದನ್ನು ಪ್ರದರ್ಶನಕ್ಕಿಡುವ ಮೂಲಕ ತನ್ನ ಕುತ್ಸಿತ ಬುದ್ಧಿಯನ್ನು ತೋರಿಸಿದೆ. ‘1971ರ ಯುದ್ಧದ ವೇಳೆ ಭಾರತೀಯ ವಾಯುಪಡೆಯು ಈ ಗುರುದ್ವಾರದ ಮೇಲೆ ಹಾಕಿರುವ ಬಾಂಬ್‌ ಇದು’ ಎಂದೂ ಅಲ್ಲಿ ಬರೆಯಲಾಗಿದೆ.

ಒಂದು ಸಣ್ಣ ಸ್ತಂಭದ ಮೇಲೆ ಗಾಜಿನ ಚೌಕಟ್ಟಿನೊಳಗೆ ಈ ಬಾಂಬ್‌ ಅನ್ನು ಇಡಲಾಗಿದೆ. ಸ್ತಂಭವನ್ನು ಸಿಖ್‌ ಧರ್ಮದ ಸಂಕೇತವಾದ ‘ಖಂಡಾ’ದಲ್ಲಿ ಅಲಂಕರಿಸಲಾಗಿದೆ. ಅದರ ಪಕ್ಕದಲ್ಲೇ ಒಂದು ಫ‌ಲಕ ಸ್ಥಾಪಿಸಲಾಗಿದ್ದು, ಅದರಲ್ಲಿ ‘ಮಿರಾಕಲ್‌ ಆಫ್ ವಾಹೇಗುರೂಜಿ’ (ವಾಹೇಗುರೂಜಿಯವರ ಪವಾಡ) ಎಂದು ಬರೆಯಲಾಗಿದೆ.

ಅಲ್ಲದೆ, 1971ರಲ್ಲಿ ಗುರುದ್ವಾರವನ್ನು ಧ್ವಂಸಗೊಳಿಸುವ ಉದ್ದೇಶದಿಂದ ಭಾರತದ ವಾಯುಪಡೆ ಈ ಬಾಂಬ್‌ ಅನ್ನು ಹಾಕಿತ್ತು. ಆದರೆ, ಅಲ್ಲಾಹನ ಕೃಪೆಯಿಂದ ಆ ಬಾಂಬ್‌ ಬಾವಿಯೊಂದಕ್ಕೆ ಬಿದ್ದ ಕಾರಣ, ಧ್ವಂಸ ಪ್ರಯತ್ನ ವಿಫ‌ಲವಾಯಿತು ಎಂದೂ ವಿವರಿಸಲಾಗಿದೆ. ಈ ಮೂಲಕ ಪಾಕಿಸ್ಥಾನವು ಜನರನ್ನು ಭಾರತದ ವಿರುದ್ಧ ಎತ್ತಿಕಟ್ಟುವ ಯತ್ನಕ್ಕೆ ಕೈಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next