ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ಥಾನದ ಜಂಟಿ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಕರ್ತಾಪುರ ಕಾರಿಡಾರ್ ರಸ್ತೆಯ ಉದ್ಘಾಟನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಬದಲಾಗಿ ಮಾಜೀ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಲು ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ಥಾನ ಸರಕಾರ ನಿರ್ಧರಿಸಿದೆ.
ಈ ವಿಚಾರವನ್ನು ಪಾಕಿಸ್ಥಾನದ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಷಿ ಅವರು ಖಚಿತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ಆಹ್ವಾನವನ್ನು ಮನಮೋಹನ್ ಸಿಂಗ್ ಅವರಿಗೆ ಕಳುಹಿಸಿಕೊಡುವ ಪ್ರಕ್ರಿಯೆಯನ್ನು ಶೀಘ್ರದಲ್ಲಿಯೇ ಪೂರೈಸಲಾಗುವುದು ಎಂದೂ ಖುರೇಷಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಮನಮೋಹನ್ ಸಿಂಗ್ ಅವರು ಧಾರ್ಮಿಕ ಮನೋಭಾವದ ವ್ಯಕ್ತಿಯಾಗಿದ್ದಾರೆ ಮಾತ್ರವಲ್ಲದೇ ಅವರ ಕುರಿತಾಗಿ ಪಾಕಿಸ್ಥಾನೀಯರಿಗೆ ಅಪಾರ ಗೌರವವೂ ಇದೆ ಹಾಗಾಗಿ ಸಿಖ್ಖರ ಪವಿತ್ರ ಯಾತ್ರೆಗೆ ಸಂಪರ್ಕ ಕಲ್ಪಿಸುವ ಈ ಕಾರಿಡಾರ್ ಉದ್ಘಾಟನೆಗೆ ಸಿಂಗ್ ಅವರನ್ನೇ ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಇಮ್ರಾನ್ ಖಾನ್ ಸರಕಾರದ ತೀರ್ಮಾನವನ್ನು ಖುರೇಷಿ ಅವರು ಸಮರ್ಥಿಸಿಕೊಂಡರು.
ಸಿಖ್ ಸಮುದಾಯದ ಗುರುಗಳಾಗಿರುವ ಗುರು ನಾನಕ್ ದೇವ್ ಅವರು ತಮ್ಮ ಜೀವನದ ಅಂತಿಮ ದಿನಗಳನ್ನು ಕಳೆದಿದ್ದ ದರ್ಬಾರ್ ಸಾಹೀಬ್ ಮತ್ತು ಪಂಜಾಬ್ ನ ಗುರ್ದಾಸ್ ಪುರದಲ್ಲಿರುವ ದೇರಾ ಬಾಬಾ ನಾನಕ್ ಮಂದಿರದೊಂದಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಕರ್ತಾಪುರ ಕಾರಿಡಾರನ್ನು ಎರಡೂ ರಾಷ್ಟ್ರಗಳು ಜಂಟಿಯಾಗಿ ನಿರ್ಮಿಸುತ್ತಿವೆ.
ಕರ್ತಾಪುರಕ್ಕೆ ಮಾತ್ರ ಭೇಟಿ ನೀಡುವಂತೆ ಪಾಕಿಸ್ಥಾನವು ಭಾರತದ ಸಿಖ್ಖ್ ಸಮುದಾಯಕ್ಕೆ ವೀಸಾ ಮುಕ್ತ ಅನುಮತಿಯನ್ನು ನೀಡುತ್ತಿದೆ. ಇದು ಪಾಕಿಸ್ಥಾನದ ನೊರೊವಾಲ್ ಜಿಲ್ಲೆಯಲ್ಲಿ ರಾವಿ ನದಿಯ ತಟದಲ್ಲಿದೆ.