ಕುರುಗೋಡು: ನಂಬಿದ ಕಂದಮ್ಮಗಳಿಗೆ ಕರಿಕಂಬಳಿ ನೆರಳಾದೀತಲೇ ಪರಾಕ್… ಇದು ತಾಲೂಕು ಸಮೀಪದ ಯರಿಂಗಳಿಗಿ ಗ್ರಾಮದ ಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ಣಿಕೋತ್ಸವದ ಕಾರ್ಣಿಕ ನುಡಿ.
ದಸರಾಹಬ್ಬದ ಅಂಗವಾಗಿ ನಡೆದ ಕಾರ್ಣಿಕೋತ್ಸವದಲ್ಲಿ ಏಳು ದಿನಗಳ ಕಾಲ ಉಪವಾಸ ವ್ರತ ಆಚರಿಸಿದ್ದ ನವೀನ್ ಬಡಿಗೇರ್ ಭವಿಷ್ಯವಾಣಿ ನುಡಿದರು.
ಕಾರಣಿಕ ವಾಣಿ ದೇವರನ್ನು ನಂಬಿ ಬಿತ್ತಿದ ಬೆಳೆಯ ರಕ್ಷಣೆಯಾಗುತ್ತದೆ ಎಂಬ ಅರ್ಥ ನೀಡುತ್ತದೆ ಎಂದು ಜನ ವಿಶ್ಲೇಷಿಸಿದ್ದಾರೆ.
ಯರಿಂಗಳಿಗಿ ಗ್ರಾಮ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಜನ ಕಾರ್ಣಿಕೋತ್ಸವಕ್ಕೆ ಸಾಕ್ಷಿಯಾದರು. ಇದಲ್ಲದೇ ದೇವಸ್ಥಾನದಲ್ಲಿ ಸರಪಳಿ ಸೇವೆ ಜರುಗಿತು. ನವೀನ್ ಬಡಿಗೇರ್, ವಿಠ್ಠೋಬಪ್ಪ, ಕಾರ್ತಿಕ್ ಮತ್ತು ರಾಜು ಸ್ವಾಮಿ ಇವರು ಕಬ್ಬಿಣದ ಸರಪಳಿ ಎಳೆದು ತುಂಡುಮಾಡುವ ಮೂಲಕ ನೆರೆದ ಜನರನ್ನು ಮೂಕವಿಸ್ಮಿತರನ್ನಾಗಿ ಮಾಡಿದರು.
ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಳಪ್ಪ ಆಚಾರಿ ಎನ್ನುವವರು ಮೊದಲು ಸರಪಳಿ ಪವಾಡ ಮತ್ತು ಕಾರ್ಣಿಕ ನುಡಿಯುತ್ತಿದ್ದರು. ಅವರು ಲಿಂಗೈಕ್ಯರಾದ ನಂತರ ಕಳೆದ ಮೂರು ವರ್ಷಗಳಿಂದ ಅವರ ಮಗ ನವೀನ್ ಬಡಿಗೇರ್ ಕಾರ್ಣಿಕ ನುಡಿಯುತ್ತಿದ್ದಾರೆ.
ಕಾರ್ಣಿಕೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳು ಜರುಗಿದವು. ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಮೈಲಾರ ಲಿಂಗೇಶ್ವರ ಸ್ವಾಮಿಯ ದರ್ಶನ ಪಡೆದು ಹೂ, ಹಣ್ಣು, ಕಾಯಿ ಸಮರ್ಪಿಸಿದರು.
ಕಾರ್ಣಿಕೋತ್ಸವದ ಅಂಗವಾಗಿ ಬಿಲ್ಲು ಮೆರವಣಿಗೆ ಮತ್ತು ಗಂಗಿಸ್ಥಳ ಪೂಜೆ ಮತ್ತು ಪಲ್ಲಕ್ಕಿ ಉತ್ಸವ ನಡೆಯಿತು.