Advertisement

ಎಚ್‌ಡಿಕೆ ಅನಾರೋಗ್ಯ , ವಿಕ್ರಂ ಆಸ್ಪತ್ರೆಗೆ ದಾಖಲು

03:45 AM Mar 05, 2017 | Team Udayavani |

ಬೆಂಗಳೂರು:ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಅನಾರೋಗ್ಯ ನಿಮಿತ್ತ ನಗರದ ವಿಕ್ರಂ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ವಾರ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.

Advertisement

ಕಳೆದ ವಾರ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ, ಮೊಳಕಾಲ್ಮೂರು, ಮಲೆಬೆನ್ನೂರು ಭಾಗದಲ್ಲಿ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಉರಿ ಬಿಸಿಲಿನಲ್ಲಿ ಓಡಾಟ ಹಾಗೂ ಸ್ವಾಗತಕ್ಕಾಗಿ ಕಾರ್ಯಕರ್ತರು ಸಿಡಿಸಿದ ಪಟಾಕಿ ಹೊಗೆಯಿಂದ ಕೆಮ್ಮು ಹಾಗೂ ಜ್ವರದಿಂದ ಅವರು ಬಳಲುತ್ತಿದ್ದಾರೆ.
ಶುಕ್ರವಾರ ಮೈಸೂರು ಪ್ರವಾಸ ಸಂದರ್ಭದಲ್ಲಿ ಅನಾರೋಗ್ಯ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ಬೆಂಗಳೂರಿಗೆ ಆಗಮಿಸಿ ವಿಕ್ರಂ ಆಸ್ಪತ್ರೆಯಲ್ಲಿ ದಾಖಲಾದರು.ವಿಕ್ರಂ ಆಸ್ಪತ್ರೆ ವೈದ್ಯ ಡಾ. ಸತೀಶ್‌, ಕುಮಾರಸ್ವಾಮಿ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

ಮೊದಲ ದಿನ ಆರೋಗ್ಯದಲ್ಲಿ ಸ್ವಲ್ಪ ಏರು ಪೇರಾಗಿತ್ತು.  ಎಕ್ಸರೇ ಮತ್ತು ರಕ್ತ ಪರೀಕ್ಷೆ ನಡೆಸಲಾಗಿತ್ತು. ಶನಿವಾರ ನಡೆಸಿದ ತಪಾಸಣೆ ಸಂದರ್ಭದಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಭಾನುವಾರ ಅಥವಾ ಸೋಮವಾರ ಆಸ್ಪತ್ರೆಯಿಂದ ಮನೆಗೆ ಮರಳಬಹುದು ಎಂದು ಹೇಳಿದ್ದಾರೆ.

ಆತಂಕ ಬೇಕಿಲ್ಲ
ಎಚ್‌.ಡಿ.ಕುಮಾರಸ್ವಾಮಿಯವರು ನಿರಂತರ ಪ್ರವಾಸದಿಂದ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಪಕ್ಷದ ಕಾರ್ಯಕರ್ತರು ಆತಂಕಪಡಬೇಕಿಲ್ಲ. ವಿಶ್ರಾಂತಿ ಅಗತ್ಯ ಇರುವುದರಿಂದ ಕಾರ್ಯಕ್ರಮಗಳಿಗೆ ಬರುವಂತೆ ಒತ್ತಡ ಹಾಕಬಾರದು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ಮುಂದೂಡಿಕೆ
ಈ ಮಧ್ಯೆ ಮಾರ್ಚ್‌ 15 ರಂದು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಜೆಡಿಎಸ್‌ ಸಮಾವೇಶ ಮುಂದೂಡಲಾಗಿದೆ. ಅಂದು ರಾಜ್ಯ ಬಜೆಟ್‌ ಇರುವುದರ ಜತೆಗೆ ಕುಮಾರಸ್ವಾಮಿಯವರ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಸಮಾವೇಶ ಮುಂದೂಡಲಾಗಿದೆ. ಅಂದು ಜೆಡಿಎಸ್‌ನ ನೂತನ ಕಟ್ಟಡ ಉದ್ಘಾಟನೆ ನಡೆಯಲಿದ್ದು ಕುಮಾರಸ್ವಾಮಿ ಆರೋಗ್ಯ ಚೇತರಿಕೆಯಾದ ನಂತರ ಸಮಾವೇಶ ನಡೆಸಲಾಗುವುದು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next