ಬೆಳಗಾವಿ: ಗರಡಿ ಮನೆ ಸಂಸ್ಕೃತಿ ಇನ್ನೇನು ಅವನತಿ ಹಂತಕ್ಕೆ ತಲುಪುತ್ತಿದೆ ಎನ್ನುವಷ್ಟರಲ್ಲಿಯೇ ರಾಜ್ಯ ಸರಕಾರ ಜಂಗೀ ಕುಸ್ತಿ ಪೈಲ್ವಾನರನ್ನು ಗುರುತಿಸಿ ಮುಖ್ಯವಾಹಿನಿಗೆ ತರಲು ಉದ್ದೇಶಿಸಿದ್ದು, ದೇಶ-ವಿದೇಶ ಹಾಗೂ ಕರ್ನಾಟಕದಿಂದ ಆಗಮಿಸುವ ಜಗಜಟ್ಟಿಗಳು ಮಣ್ಣಿನ ಕಣದಲ್ಲಿ ತೊಡೆ ತಟ್ಟಲು ಸಿದ್ಧರಾಗಿದ್ದಾರೆ.
ಪ್ರಥಮ ಬಾರಿಗೆ ರಾಜ್ಯ ಮಟ್ಟದ ಪುರುಷ ಹಾಗೂ ಮಹಿಳೆಯರ ಕರ್ನಾಟಕ ಕುಸ್ತಿ ಹಬ್ಬ ಫೆ. 7ರಿಂದ 10ರವರೆಗೆ ನಡೆಯಲಿದ್ದು, ಜಿಲ್ಲಾ ಕ್ರೀಡಾಂಗಣದಲ್ಲಿ ನಾಲ್ಕು ದಿನಗಳ ಕುಸ್ತಿ ಉತ್ಸವ ರಂಗು ಪಡೆದುಕೊಳ್ಳಲಿದೆ. ಬಜೆಟ್‌ನಲ್ಲಿ ಘೋಷಿಸಿದಂತೆ ಸರಕಾರ ಕುಸ್ತಿ ಹಬ್ಬ ನಡೆಸುತ್ತಿದ್ದು, ಈಗಾಗಲೇ ಇದಕ್ಕಾಗಿ 2 ಕೋಟಿ ರೂ. ಬಿಡುಗಡೆ ಮಾಡಿದೆ.
ಮೈದಾನದಲ್ಲಿ 80×40 ಅಡಿ ಅಳತೆ ಹಾಗೂ 3 ಅಡಿ ಎತ್ತರದ ಅಂಕಣ ನಿರ್ಮಿಸಲಾಗಿದೆ. ಬೆಳಗಾವಿ ಪಶ್ಚಿಮ ಭಾಗದ ಅಂಬೇವಾಡಿ, ಸಾಂವಗಾಂವದಿಂದ ದೇಶಿ ಕೆಂಪು ಮಣ್ಣನ್ನು ಅಖಾಡ ನಿರ್ಮಾಣಕ್ಕೆ ಬಳಸಲಾಗಿದೆ. ಪ್ರೇಕ್ಷಕರಿಗೆ ವೀಕ್ಷಿಸಲು 4 ಎಲ್‌ಇಡಿ ಪರದೆ ಹಾಕಲಾಗಿದ್ದು, ನಿತ್ಯ ಸಾವಿರಾರು ಜನ ವೀಕಿಏಸಲಿದ್ದಾರೆ. ಫೆ. 10ರಂದು ಲಕ್ಷಕ್ಕೂ ಹೆಚ್ಚು ಜನ ಬರುವ ನಿರೀಕ್ಷೆ ಇದೆ. ಕುಸ್ತಿ ಎಂದರೆ ಮಹಿಳೆಯರು ದೂರ ಎನ್ನುವ ಮಾತು ಮೀರಿ ಸ್ಪಂದನೆ ಸಿಕ್ಕಿದೆ. 30 ವಿಭಾಗಗಳಲ್ಲಿ ಹೆಣ್ಣು ಮಕ್ಕಳು ಸೆಣಸಾಡಲಿದ್ದು, ಜೊತೆಗೆ ಕುಸ್ತಿ ನೋಡಲು ಬರುವ ಸುಮಾರು 5 ಸಾವಿರ ಮಹಿಳೆಯರಿಗಾಗಿ ಆಸನ ವ್ಯವಸ್ಥೆ ಮಾಡಲಾಗಿದೆ. ಮಹಿಳಾ ಕುಸ್ತಿಪಟುಗಳು ಹಾಗೂ ವೀಕ್ಷಕರು ಕಾರ್ಯಕ್ರಮದ ವಿಶೇಷ. ವಿಜೇತರಿಗೆ ಸೂಕ್ತ ಸಂಭಾವನೆ ನೀಡಿ ಸತ್ಕರಿಸಲಾಗುವುದು. ಹಿಂದ್ ಕೇಸರಿ, ವಿರಾಟ ಭಾರತ ಕೇಸರಿ, ಅಂತಾರಾಷ್ಟ್ರೀಯ ಕುಸ್ತಿ ಪಟುಗಳು ಸೆಣಸಾಡಲಿದ್ದಾರೆ.
ಪೈಲ್ವಾನರ ಝಲಕ್: ಜಾರ್ಜಿಯಾ ದೇಶದ ಅಂತಾರಾಷ್ಟ್ರೀಯ ಕುಸ್ತಿ ಪಟು ಪೈ| ಇಬಾನೈಡಿಸ್ ಟೆಡೊರ್ ವಿರುದ್ಧ ಹರಿಯಾಣಾದ ಭಾರತ್ ಹಿಂದ್ ಕೇಸರಿ ಪೈ| ಮೌಸಮ್ ಖತ್ರಿ, ಜಾರ್ಜಿಯಾದ ಪೈ| ಮಾಮುಕಾ ಕೊಡ್ಜಾರ್ಲಾ ವಿರುದ್ಧ ಪಂಜಾಬ ಕೇಸರಿ ಗೌರವ ಸಿಂಗ್ ಸೆಣಸಾಡಲಿದ್ದಾರೆ. ಪುಣೆಯ ಪೈ| ವಿಸ್ಣು ಕೋಶೆ ವಿರುದ್ಧ ದೆಹಲಿಯ ಪೈ| ರಂಜೀತ್ ಖತ್ರಿ, ಕೊಲ್ಲಾಪುರದ ಪೈ| ಜ್ಞಾನೇಶ್ವರ ಮೌಲ್ವಿ ವಿರುದ್ಧ ಹರಿಯಾಣಾದ ಪೈ| ಪ್ರವೀಣ ಖೋಲಾ, ಉತ್ತರ ಪ್ರದೇಶ ಮಥುರಾದ ಪೈ| ಉಮೇಶ ಚೌಧರಿ ವಿರುದ್ಧ ಪಂಜಾಬನ ಪಟಿಯಾಲಾದ ಪೈ| ಕವಲಜೀತ್, ಪಂಜಾಬ್‌ನ ಪೈ| ಸುಖಚೆನ್ ಸಿಂಗ್ ವಿರುದ್ಧ ಪುಣೆಯ ಹರಿಶ್ಚಂದ್ರ ಬಿರಾದಾರ ಅವರ ಮಗ ಪೈ| ಸಾಗರ ಬಿರಾದಾರ, ಹರಿಯಾಣಾದ ಸುಮಿತಕುಮಾರ ವಿರುದ್ಧ ರಾಣೆಬೆನ್ನೂರಿನ ಕಾರ್ತಿಕ ಕಾಟೆ ಸೆಣಸಾಡಲಿದ್ದಾರೆ.
ಮಹಿಳಾ ಕುಸ್ತಿಪಟುಗಳ ಆಕರ್ಷಣೆ: ಪುರುಷರಿಗಿಂತ ನಾವು ನಾವೇನೂ ಕಡಿಮೆ ಇಲ್ಲ ಎಂಬಂತೆ ಮಹಿಳಾ ಕುಸ್ತಿ ಪಟುಗಳು ಕೂಡ ಕುಸ್ತಿ ಕಣದಲ್ಲಿ ಇಳಿಯಲಿದ್ದಾರೆ. ಅಜರ್‌ಬೈಜಾನ್ ದೇಶದ ಮಹಿಳಾ ಕುಸ್ತಿ ಪಟು ಪೈ| ಜಯ್ಲಾ ನಾಘಿಸೇಡೆ ವಿರುದ್ಧ ಹರಿಯಾಣಾದ ರಿತು ಮಲ್ಲಿಕ್, ಅಜರ್‌ಬೈಜಾನ್ ದೇಶದ ಮಹಿಳಾ ಪೈ| ಅಲಿಯಾನಾ ಕೊಲೆಸ್ನಿಕ್ ವಿರುದ್ಧ ಹರಿಯಾಣಾದ ಪೈ| ಪಿಂಕಿ ವಿರುದ್ಧ ಹಣಾಹಣಿ ನಡೆಯಲಿದೆ. ಮಹಾರಾಷ್ಟ್ರದ ಪೈ| ರೇಷ್ಮಾ ಮಾನೆ ವಿರುದ್ಧ ಮಧ್ಯಪ್ರದೇಶದ ಪೈ| ಅಪೂರ್ವ ವೈಷ್ಣವ ಹಾಗೂ ಮಧ್ಯಪ್ರದೇಶದ ಪೈ| ರಾಣಿ ರಾಣಾ, ಗ್ವಾಲಿಯರ್ ವಿರುದ್ಧ ಮಹಾರಾಷ್ಟ್ರದ ಪೈ| ಸ್ವಾತಿ ಶಿಂಧೆ ಸೆಣಸಾಡಲಿದ್ದಾರೆ.
ಪಾಕಿಸ್ತಾನದ ಕುಸ್ತಿಪಟುಗಳಿಗೆ ಕೊಕ್
ಕುಸ್ತಿ ಹಬ್ಬಕ್ಕಾಗಿ ಪಾಕಿಸ್ತಾನದ ಇಬ್ಬರು ಕುಸ್ತಿಪಟುಗಳನ್ನು ಆಹ್ವಾನಿಸಲು ಉದ್ದೇಶಿಸಲಾಗಿತ್ತು. ಅಲ್ಲಿಂದ ಕುಸ್ತಿಪಟುಗಳನ್ನು ಬೆಳಗಾವಿಗೆ ಕರೆಯಿಸಿದಾಗ ಏನಾದರೂ ಅಹಿತಕರ ಘಟನೆ ಅಥವಾ ಶಾಂತಿಭಂಗ ಉಂಟಾಗುವ ಸಾಧ್ಯತೆ ಇರುವುದರಿಂದ ಕೈ ಬಿಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪಾಕಿಸ್ತಾನದ ಬದಲಾಗಿ ಜಾರ್ಜಿಯಾ ದೇಶದ ಆಟಗಾರರನ್ನು ಕರೆಯಿಸಲಾಗಿದೆ ಎಂದು ರಾಜ್ಯ ಭಾರತೀಯ ಶೈಲಿ ಕುಸ್ತಿ ಸಂಘದ ಅಧ್ಯಕ್ಷ ರತನಕುಮಾರ ಮಠಪತಿ ತಿಳಿಸಿದರು.
ಅಖಾಡ ಸಿದ್ಧ
ಕುಸ್ತಿ ಹಬ್ಬಕ್ಕಾಗಿ ಬಹುತೇಕ ಸಿದ್ಧತೆ ಪೂರ್ಣಗೊಂಡಿದೆ. ಅಖಾಡ ಸಿದ್ಧಗೊಂಡಿದ್ದು, ಸ್ಪರ್ಧಾಳುಗಳು ಫೆ. 6ರಿಂದ ಆಗಮಿಸಲಿದ್ದು, ಫೆ. 7ಕ್ಕೆ ಬೆಳಗ್ಗೆಯಿಂದ ನೋಂದಣಿ ಆರಂಭವಾಗಲಿದೆ. 100 ಜನ ತೀರ್ಪುಗಾರರು ಆಗಮಿಸಲಿದ್ದಾರೆ. ಕೊನೆಯ ದಿನ ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ.
• ಸಿ.ಬಿ. ರಂಗಯ್ಯ,
ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಭೈರೋಬಾ ಕಾಂಬಳೆ