ಕಟಕ್: ಸಯ್ಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಸರಣಿಯಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿರುವ ಕರ್ನಾಟಕ, ಸೋಮವಾರದ “ಡಿ’ ವಿಭಾಗದ ಮುಖಾಮುಖೀಯಲ್ಲಿ ಮಿಜೋರಾಂ ವಿರುದ್ಧ 137 ರನ್ನುಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಮನೀಷ್ ಪಾಂಡೆ ಬಳಗ ಆಡಿದ ಎಲ್ಲ 4 ಪಂದ್ಯಗಳಲ್ಲೂ ಜಯ ಕಂಡಂತಾಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ 4 ವಿಕೆಟಿಗೆ 242 ರನ್ ಪೇರಿಸಿ ಸವಾಲೊಡ್ಡಿತು. ಜವಾಬಿತ್ತ ಮಿಜೋರಾಂ 6 ವಿಕೆಟಿಗೆ 105 ರನ್ ಬಾರಿಸಿ ಶರಣಾಯಿತು. ಇದಕ್ಕೂ ಮೊದಲು ಕರ್ನಾಟಕ ತಂಡ ಅಸ್ಸಾಂ, ಬಂಗಾಲ ಮತ್ತು ಅರುಣಾಚಲ ಪ್ರದೇಶಕ್ಕೆ ಸೋಲುಣಿಸಿತ್ತು.
ಕರ್ನಾಟಕದ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದವರೆಂದರೆ ಆರಂಭಕಾರ ರೋಹಮ್ ಕದಮ್ ಮತ್ತು ವನ್‌ಡೌನ್ ಆಟಗಾರ ಕರುಣ್ ನಾಯರ್. 16ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಕದಮ್ 51 ಎಸೆತಗಳಿಂದ 78 ರನ್ ಹೊಡೆದರು. ಇದರಲ್ಲಿ 6 ಬೌಂಡರಿ, 3 ಸಿಕ್ಸರ್ ಸೇರಿತ್ತು. ಮಾಯಾಂಕ್ ಅಗರ್ವಾಲ್ 20 ರನ್ ಮಾಡಿದರು. ಇವರಿಬ್ಬರ ಮೊದಲ ವಿಕೆಟ್ ಜತೆಯಾಟದಲ್ಲಿ 4.2 ಓವರ್‌ಗಳಿಂದ 52 ರನ್ ಒಟ್ಟುಗೂಡಿತು.
ನಾಯರ್ ಮಿಂಚಿನ ಆಟ
ಕರುಣ್ ನಾಯರ್ 71 ರನ್ ಬಾರಿಸಿ ಗಮನ ಸೆಳೆದರು. ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ನಾಯರ್ ಕೇವಲ 33 ಎಸೆತಗಳಲ್ಲಿ ಈ ಇನ್ನಿಂಗ್ಸ್ ಕಟ್ಟಿದರು. ಸಿಡಿಸಿದ್ದು 5 ಫೋರ್, 5 ಸಿಕ್ಸರ್. ಮನೀಷ್ ಪಾಂಡೆ 13 ಎಸೆತಗಳಲ್ಲಿ 33 ರನ್ (3 ಬೌಂಡರಿ, 1 ಸಿಕ್ಸರ್) ಮತ್ತು ಜಗದೀಶ್ ಸುಚಿತ್ 8 ಎಸೆತಗಳಲ್ಲಿ 26 ರನ್ (3 ಬೌಂಡರಿ, 2 ಸಿಕ್ಸರ್) ಬಾರಿಸಿ ಔಟಾಗದೆ ಉಳಿದರು.
ಮಿಜೋರಾಂ ಉತ್ತಮ ಆರಂಭದ ಮೂಲಕ ಗಮನ ಸೆಳೆಯಿತು. ನಾಯಕ ತರುವಾರ್ ಕೊಹ್ಲಿ (36) ಮತ್ತು ಅಖೀಲ್ ರಜಪೂತ್ (41) 8.4 ಓವರ್‌ಗಳಿಂದ 63 ರನ್ ಹೊಡೆದರು. ಇಲ್ಲಿಂದ ಮುಂದೆ ಮಿಜೋರಾಂ ಆಮೆಗತಿಯಲ್ಲಿ ಆಡತೊಡಗಿತು. ಶ್ರೇಯಸ್ ಗೋಪಾಲ್ ಕೇವಲ 8 ರನ್ ನೀಡಿ 4 ವಿಕೆಟ್ ಕಿತ್ತರು.ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಬುಧವಾರ ಛತ್ತೀಸ್‌ಗಢ ವಿರುದ್ಧ ಆಡಲಿದೆ.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ-4 ವಿಕೆಟಿಗೆ 242 (ಕದಮ್ 78, ನಾಯರ್ 71, ಪಾಂಡೆ ಔಟಾಗದೆ 33, ರಾಲ್ಟೆ 48ಕ್ಕೆ 2). ಮಿಜೋರಾಂ-6 ವಿಕೆಟಿಗೆ 105 (ಅಖೀಲ್ 41, ಟಿ. ಕೊಹ್ಲಿ 36, ಶ್ರೇಯಸ್ ಗೋಪಾಲ್ 8ಕ್ಕೆ 4).