ಚಿತ್ರದುರ್ಗ: ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನದ ವಿಚಾರದಲ್ಲಿ ಅನ್ಯಾಯ ಆಗಿರುವುದು ನಿಜ. ಆದರೆ ಕೇರಳ ಮಾದರಿಯಲ್ಲಿ ಸುಪ್ರೀಂಕೋರ್ಟ್‌ಗೆ ಹೋಗುವ ಬಗ್ಗೆ ಆಲೋಚನೆ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿನ ಭಗೀರಥ ಮಠಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, 15ನೇ ಹಣಕಾಸು ಯೋಜನೆಯಲ್ಲಿ ವಿಶೇಷ ಅನುದಾನವಾಗಿ 11,495 ಕೋ. ರೂ. ಕೊಡಬೇಕಾಗಿತ್ತು. ಅದನ್ನೂ ಕೊಟ್ಟಿಲ್ಲ ಎಂದರು.
ನಾವು 100 ರೂ. ತೆರಿಗೆ ವಸೂಲಿ ಮಾಡಿದರೆ 12-13 ರೂ. ಮಾತ್ರ ನಮಗೆ ಬರುತ್ತಿದೆ. ಉಳಿದೆಲ್ಲವೂ ಕೇಂದ್ರ ಸರಕಾರಕ್ಕೆ ಹೋಗುತ್ತಿದೆ. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ನಮ್ಮ ರಾಜ್ಯದ ತೆರಿಗೆ ವಸೂಲು ಮಾಡಬೇಡಿ ಎನ್ನುತ್ತಿದ್ದರು. ಈಗ ಅದೇ ಮೋದಿಯವರು ನಾವು ಅನುದಾನ ಕೇಳಿದಾಗ ದೇಶ ವಿಭಜನೆ ಮಾಡಲು ಹೊರಟಿದ್ದಾರೆ ಎನ್ನುತ್ತಿದ್ದಾರೆ. ಇದಕ್ಕೆ ಏನೆನ್ನಬೇಕು ಎಂದು ಪ್ರಶ್ನಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ 2022-23ನೇ ಸಾಲಿನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ 5,300 ಕೋ. ರೂ. ಘೋಷಿಸಿದ್ದಾರೆ. ಇದು ಹೇಳಿಕೆ ಅಲ್ಲ, ಬಜೆಟ್. ಆದರೆ ಈವರೆಗೆ ಒಂದೇ ಒಂದು ರೂಪಾಯಿ ಕೂಡ ಕೊಟ್ಟಿಲ್ಲ. ಇವರು ಪ್ರತಿನಿಧಿಸಿರುವುದೂ ಕರ್ನಾಟಕವನ್ನೇ. ಆದರೂ ರಾಜ್ಯಕ್ಕೆ ನ್ಯಾಯ ಕೊಡುತ್ತಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 8 ಸಾವಿರ ಕೋಟಿ ರೂ. ವೆಚ್ಚವಾಗಿದೆ. ನಾವು 6 ಸಾವಿರ ಕೋಟಿ ಕೊಟ್ಟಿದ್ದೇವೆ. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ 5,300 ಕೋಟಿ ರೂ. ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದರೂ ಕೊಟ್ಟಿಲ್ಲ ಎಂದರು.
ಈಶ್ವರಪ್ಪ ವಿರುದ್ಧ ಕಾನೂನು ಕ್ರಮ
ದೇಶ ವಿಭಜನೆ ಬಗ್ಗೆ ಮಾತನಾಡುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎನ್ನುವ ಕೆ.ಎಸ್. ಈಶ್ವರಪ್ಪರಿಗೆ ಕಡಿ, ಬಡಿ, ಕೊಲ್ಲು ಭಾಷೆ ಬಿಟ್ಟು ಬೇರೇನೂ ಗೊತ್ತಿಲ್ಲ. ಆರೆಸ್ಸೆಸ್ಸಿನಲ್ಲಿ ಅವರು ಪಡೆದಿರುವ ತರಬೇತಿ ಇದೇನಾ? ಅವರ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತೇವೆ. ಗುಂಡಿಕ್ಕಿ ಕೊಲ್ಲಿ ಎನ್ನುವುದು ರಾಜಕೀಯ ಪಕ್ಷದವರು ಹೇಳುವ ಮಾತೇ ಎಂದು ಸಿಎಂ ಪ್ರಶ್ನಿಸಿದರು.
ಕಾಂಗ್ರೆಸ್ ಸರಕಾರದಲ್ಲೂ ಅಧಿ ಕಾರಿಗಳು 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿದ್ದಾರೆ. ಅವರಲ್ಲಿ ದಾಖಲೆ ಇದ್ದರೆ ನಾಗಮೋಹನ್ ದಾಸ್ ಆಯೋಗಕ್ಕೆ ದೂರು ನೀಡಲಿ. ಈ ಆಯೋಗವನ್ನು ಇದಕ್ಕಾಗಿಯೇ ರಚಿಸಲಾಗಿದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ