Advertisement

ಐದು ವರ್ಷದಲ್ಲಿ ಕರ್ನಾಟಕ ಸಮೃದ್ಧ ನಾಡು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

03:19 PM Jul 09, 2023 | Team Udayavani |

ಮಣಿಪಾಲ: ಹಳೆ ನೀರು ಹರಿದು, ಹೊಸ ಬೇರು ಚಿಗುರಿ ಉಡುಪಿ ಸಹಿತ ಇಡೀ ರಾಜ್ಯವು ಮುಂದಿನ ವರ್ಷಗಳಲ್ಲಿ ಸಮೃದ್ಧ ನಾಡಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

Advertisement

ಉದಯವಾಣಿ ಪ್ರಧಾನ ಕಚೇರಿಯಲ್ಲಿ “ಉದಯವಾಣಿ’ ವತಿಯಿಂದ ಜಿ. ಪಂ., ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ಶನಿವಾರ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಗಿಡ ನೆಟ್ಟು, ಸಾರ್ವಜನಿಕರಿಗೆ ಸಸಿ ವಿತರಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಉತ್ತಮ ಆಡಳಿತದ ಜತೆಗೆ ಪ್ರಗತಿಯೆಡೆಗೆ ಸಾಗಲಿದ್ದೇವೆ. ರಾಜಕಾರಣ ನಿಂತ ನೀರಲ್ಲ. ಹೊಸತನ ಬರಲಿದೆ. ಹಳೆದು ಕಳಚಿ ಬೀಳಲಿದೆ ಎಂದರು.

ಸರಕಾರದ ಆದೇಶವನ್ನು ಗ್ರಾಮ ಮಟ್ಟದಲ್ಲಿ ಚಾಚೂ ತಪ್ಪದೆ ಪಾಲಿ ಸಬೇಕು. ಸ‌ರಕಾರ ಪ್ರತಿ ವರ್ಷ 5 ಕೋಟಿ ಸಸಿ ನೆಡುವ ಆದೇಶದಂತೆ 5 ವರ್ಷಕ್ಕೆ 25 ಕೋಟಿ ಸಸಿ ನೆಡಲಿದೆ. ಇದು ಕೇವಲ ಆದೇಶವಾಗದೆ ಅನು ಷ್ಠಾನ ವಾಗಬೇಕು ಎಂದರು.

ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಅವಾಂತರ ಪರಿಶೀಲಿಸಿದ್ದೇನೆ. ಮಳೆಯಿಂದ ಒಳ್ಳೆಯದು ಮತ್ತು ಅವಾಂತರ ಎರಡೂ ಇವೆ. ಜೀವನ ಸಾಗಿಸಲು ಮಳೆ ಅತ್ಯವಶ್ಯಕ. 20 ದಿನಗಳ ಹಿಂದೆ ಮಳೆಯಿಲ್ಲದೇ ನೀರಿನ ಸಮಸ್ಯೆ ತೀವ್ರವಾಗಿತ್ತು. ಜಿಲ್ಲೆಯ ಸಮೃದ್ಧಿಗಾಗಿ ಉಡುಪಿಯ ಶ್ರೀಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಬೇಡಿಕೊಂಡಿದ್ದೇನೆ ಎಂದರು.

Advertisement

25 ಕೋಟಿ ಗಿಡ ನೆಡಲು ಆದೇಶ
ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫ‌ರ್ಡ್‌ ಲೋಬೋ ಪ್ರಸ್ತಾವನೆಗೈದು, ಜಿಲ್ಲೆಯಲ್ಲಿ ಶೇ. 28.4ರಷ್ಟು ಅರಣ್ಯವಿದ್ದು ಅದನ್ನು ಶೇ.33ಕ್ಕೆ ಏರಿಸುವ ಆವಶ್ಯಕತೆಯಿದೆ. ರಾಜ್ಯದಲ್ಲಿ ಶೇ. 21ರಷ್ಟು ಅರಣ್ಯವಿದೆ.

ನಗರ ಪ್ರದೇಶಗಳಲ್ಲಿ ಶೇ. 40ರಷ್ಟು ಅರಣ್ಯ ಇರಬೇಕು. ವರ್ಷಕ್ಕೆ 5 ಕೋಟಿಯಿಂತೆ ಮುಂದಿನ 5 ವರ್ಷ ದಲ್ಲಿ 25 ಕೋಟಿ ಗಿಡ ನೆಡಲು ಸರಕಾರ ಆದೇಶ ನೀಡಿದೆ ಎಂದರು.

ಜಿಲ್ಲಾಧಿಕಾರಿ ಕೂರ್ಮಾ ರಾವ್‌, ಜಿ.ಪಂ. ಸಿಇಒ ಪ್ರಸನ್ನ ಎಚ್‌., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಹಾಕೆ ಮಚ್ಚೀಂದ್ರ, ಉಪ ವಿಭಾಗಾಧಿಕಾರಿ ರಶ್ಮಿ, ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್‌ ಯು. ಪೈ, “ತರಂಗ’ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ, ಮಣಿಪಾಲ್‌ ಟೆಕ್ನಾಲಜೀಸ್‌ ಲಿ.ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಗೌತಮ್‌ ಪೈ, ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ., ಆಡಳಿತ ನಿರ್ದೇಶಕ ಮತ್ತು ಸಿಇಒ ವಿನೋದ್‌ ಕುಮಾರ್‌, ಕಾಂಗ್ರೆಸ್‌ ಮುಖಂಡರಾದ ಪ್ರಸಾದ್‌ ರಾಜ್‌ ಕಾಂಚನ್‌, ಮಿಥುನ್‌ ರೈ, ಭದ್ರಾವತಿಯ ಶಿವಕುಮಾರ್‌ ಭಾಗವಹಿಸಿದ್ದರು. ಶಾಸಕ ಯಶ್‌ಪಾಲ್‌ ಸುವರ್ಣ ಅವರು ಆಗಮಿಸಿ ಸಾರ್ವಜ ನಿಕರಿಗೆ ಸಸಿಗಳನ್ನು ವಿತರಿಸಿದರು.

ಸಂಪಾದಕ ಅರವಿಂದ ನಾವಡ ಸ್ವಾಗತಿಸಿ, ಹಿರಿಯ ಸಹಾಯಕ ಸಂಪಾದಕ ಕುಮಾರಸ್ವಾಮಿ ವಂದಿಸಿದರು. ಎಂಎಂಎನ್‌ಎಲ್‌ ಎಚ್‌ಆರ್‌ ಮ್ಯಾನೇಜರ್‌ ಉಷಾರಾಣಿ ಕಾಮತ್‌ ನಿರೂಪಿಸಿದರು.

“ಉದಯವಾಣಿ’ ಬಳಗ ದಿಂದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಅಭಿನಂದಿಸಲಾಯಿತು.

ಗಿಡ ವಿತರಣೆ
ಬೇಲ, ಸಾಗುವಾನಿ, ಹಲಸು, ರಕ್ತಚಂದನ, ಪೇರಳೆ, ನೇರಳೆ, ಸಂಪಿಗೆ, ಬೇವು, ನಿಂಬೆ, ಬಿಲ್ಪಪತ್ರೆ, ಸೀತಾಫ‌ಲ, ದಾಳಿಂಬೆ, ಹುಣಸೆ, ನೆಲ್ಲಿ, ತೇಗ ಸಹಿತ ವಿವಿಧ ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ಪತ್ರಿಕೆಗಳದ್ದು ಶ್ಲಾಘನೀಯ ಕಾರ್ಯ: ಲಕ್ಷ್ಮೀ ಹೆಬ್ಬಾಳ್ಕರ್‌
“ಉದಯವಾಣಿ’ ದಿನ ಪತ್ರಿಕೆ ಕಳೆದ 50ಕ್ಕೂ ಅಧಿಕ ವರ್ಷಗಳಿಂದ ಸ್ವಂತಿಕೆ ಹಾಗೂ ತನ್ನದೇ ಛಾಪು/ ವರ್ಚಸ್ಸಿನಿಂದ ಸಾಗಿ ಬಂದಿದೆ. ವನಮಹೋತ್ಸವ ಕಾರ್ಯಕ್ಕೆ ಕೈ ಜೋಡಿಸುವ ಮೂಲಕ ಪರಿಸರ ಉಳಿಸುವ ದೊಡ್ಡ ಕಾರ್ಯ ಮಾಡುತ್ತಿದೆ. ತರಂಗ ವಾರಪತ್ರಿಕೆ ನಮ್ಮ ಮನೆಗೆ ಖಾಯಂ ಬರುತ್ತಿದೆ. ಹಳ್ಳಿಗಾಡಿನಿಂದ ಬಂದಿರುವ ನಾನು ಕ್ಯಾಬಿನೆಟ್‌ ದರ್ಜೆಯ ಸಚಿವೆಯಾಗಿ, ಪ್ರಜ್ಞಾವಂತರ ಜಿಲ್ಲೆಯ ಉಸ್ತುವಾರಿ ಸಚಿವೆಯಾಗಲು ಪತ್ರಿಕೆಗಳ ಸಹಕಾರ ತುಂಬ ಇದೆ. ರಾಜಕಾರಣಿಗಳು ಎತ್ತರಕ್ಕೆ ಬೆಳೆಯಲು ಪತ್ರಿಕೆ ಕಾರಣ. ನಮ್ಮ ವ್ಯಕ್ತಿತ್ವ ಜನರಿಗೆ ತೋರಿಸುವ ಕಾರ್ಯವನ್ನು ಪತ್ರಿಕೆಗಳು ಮಾಡುತ್ತಿವೆ. ನಾವು ಎಡವಿದಾಗ ಚಾಟಿ ಬೀಸುವುದು ಮತ್ತು ಉತ್ತಮ ಕಾರ್ಯ ಮಾಡಿದಾಗ ಪ್ರೋತ್ಸಾಹಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ. “ಉದಯವಾಣಿ’ಯ ಪರಿಸರ ಸಂರಕ್ಷಣೆಯ ಕಾರ್ಯ ಶ್ಲಾಘನೀಯ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

ಗಿಡಗಳ ಸಂರಕ್ಷಣೆಯಾಗಬೇಕು: ಡಾ| ಸಂಧ್ಯಾ ಎಸ್‌. ಪೈ
ಸರಕಾರ ಹಲವು ವರ್ಷಗಳಿಂದ ವನಮಹೋತ್ಸವ ನಡೆಸಿಕೊಂಡು ಬರುತ್ತಿದೆ. ಒಂದು ವರ್ಷಕ್ಕೆ ಒಂದು ಅಥವಾ ಎರಡು ಲಕ್ಷ ಗಿಡಗಳಂತೆ ನೆಟ್ಟು ಸಂರಕ್ಷಿಸಿದ್ದರೆ ಈಗ ಭಾರತದಲ್ಲಿ ಯಾರಿಗೂ ನಿಲ್ಲಲು ಜಾಗ ಇರುತ್ತಿರಲಿಲ್ಲ. ಅಷ್ಟು ಸಮೃದ್ಧ ಕಾಡುಗಳಿರುತ್ತಿದ್ದವು. ನೆಟ್ಟ ಗಿಡ, ಮರಗಳು ಎಲ್ಲಿ ಹೋದವು ಎಂಬುದೇ ಆಶ್ಚರ್ಯ. ನೆಟ್ಟ ಮರಗಳ ನಿರ್ವಹಣೆ ಅತಿ ಮುಖ್ಯವಾಗಿದೆ. ಮರಗಳ ಸಂರಕ್ಷಣೆ ಮಾಡಬೇಕು. ನೆಟ್ಟ ಗಿಡ, ಮರಗಳನ್ನು ಪೋಷಿಸಿ, ಬೆಳೆಸುವ ಬಗ್ಗೆ ಇಲಾಖೆಯಿಂದ ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು. ವಿವಿಧ ಇಲಾಖೆಗಳು ಸಂಯೋಜನೆಯಿಂದ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯ ಆಗಬೇಕು. ಬೀಜ ಹಾಕುವುದು, ಗಿಡ ನೆಡುವುದು ಮಾತ್ರವಲ್ಲ. ಅದರ ಸಂರಕ್ಷಣೆ ಮಾಡಬೇಕು ಎಂದು “ತರಂಗ’ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next