Advertisement

ಕರ್ನಾಟಕ ದಾಳಿಗೆ ಉದುರಿದ ವಿದರ್ಭ

06:00 AM Nov 13, 2018 | Team Udayavani |

ನಾಗ್ಪುರ: ಪ್ರಸ್ತುತ ರಣಜಿ ಋತುವಿನಲ್ಲಿ ಕರ್ನಾಟಕ ತನ್ನ ಮೊದಲ ಪಂದ್ಯವನ್ನು ಹಾಲಿ ಚಾಂಪಿಯನ್‌ ವಿದರ್ಭ ವಿರುದ್ಧ ಆರಂಭಿಸಿದೆ. ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ವಿದರ್ಭ, ಕರ್ನಾಟಕದ ಬಿಗಿ ಬೌಲಿಂಗ್‌ಗೆ ಸಿಲುಕಿ ಕುಸಿತ ಅನುಭವಿಸಿದೆ. ಮೊದಲ ದಿನದ ಅಂತ್ಯಕ್ಕೆ ವಿದರ್ಭ ಸ್ಕೋರ್‌ 8 ವಿಕೆಟಿಗೆ 245 ರನ್‌.

Advertisement

ವಿದರ್ಭ ದಿನದಾಟವನ್ನು ಆತಂಕದಿಂದಲೇ ಆರಂಭಿಸಿತ್ತು. ಮೊದಲೆರಡು ವಿಕೆಟ್‌ಗಳು ಕೇವಲ 31 ರನ್‌ ಆದಾಗ ಉದುರಿದ್ದವು. ನಾಯಕ ಫೈಜ್‌ ಫ‌ಜಲ್‌ ಕೇವಲ 22 ರನ್‌ ಮಾಡಿ ಔಟಾದರು. ಬಳಿಕ 116 ರನ್‌ ಆಗುವ ವರೆಗೆ ವಿಕೆಟ್‌ ಕಳೆದುಕೊಳ್ಳಲಿಲ್ಲ. ಆಗ 41 ರನ್‌ ಗಳಿಸಿದ್ದ ವಾಸಿಂ ಜಾಫ‌ರ್‌ ವಿಕೆಟ್‌ ಉದುರಿತು. ಇಲ್ಲಿಂದ ಮತ್ತೆ ಸ್ಥಿರತೆ ಕಾಪಾಡಿಕೊಂಡ ವಿದರ್ಭ ಒಂದೊಂದೇ ರನ್‌ ಗಳಿಸುತ್ತ 166ರ ವರೆಗೆ ತಲುಪಿತು. ಆಗ ವಿದರ್ಭಕ್ಕೆ ನಿಜವಾದ ಆಘಾತ ಎದುರಾಯಿತು.ವಿದರ್ಭ ಪರ ಆಡುತ್ತಿರುವ ಕರ್ನಾಟಕದ ಗಣೇಶ್‌ ಸತೀಶ್‌ 57 ರನ್‌ ಗಳಿಸಿ ಔಟಾಗುವುದರೊಂದಿಗೆ ಕುಸಿತ ಆರಂಭವಾಯಿತು. ವಿನಯ್‌ ಪಡೆ ಹಿಡಿತ ಸಾಧಿಸಿತು. 

ವಿದರ್ಭ ಪರ ಹೋರಾಟ ಮಾಡಿದ ಇನ್ನಿಬ್ಬರು ಬ್ಯಾಟ್ಸ್‌ಮನ್‌ಗಳೆಂದರೆ ಅಕ್ಷಯ್‌ ವಾಡ್ಕರ್‌ ಹಾಗೂ ಆಲ್‌ರೌಂಡರ್‌ ಶ್ರೀಕಾಂತ್‌ ವಾಘ…. ವಾಡ್ಕರ್‌ 48 ಎಸೆತ ಎದುರಿಸಿ 3 ಬೌಂಡರಿಗಳೊಂದಿಗೆ 31 ರನ್‌ ಗಳಿಸಿದರೆ, ಶ್ರೀಕಾಂತ್‌ 58 ಎಸೆತ ಎದುರಿಸಿ 6 ಬೌಂಡರಿಗಳೊಂದಿಗೆ 58 ರನ್‌ ಮಾಡಿದರು.

ಮಿಂಚಿದ ಮಿಥುನ್‌, ಸುಚಿತ್‌
ಗಣೇಶ್‌ ಸತೀಶ್‌ ಮತ್ತು ಅಕ್ಷಯ್‌ ವಾಡ್ಕರ್‌ ನೆರವಿನೊಂದಿಗೆ ವಿದರ್ಭ ಉತ್ತಮ ಮೊತ್ತದತ್ತ ಹೆಜ್ಜೆ ಹಾಕುತ್ತಿದ್ದಾಗ ಪರಿಸ್ಥಿತಿಯನ್ನು ಹಿಡಿತಕ್ಕೆ ತಂದಿದ್ದು ಕರ್ನಾಟಕದ ವೇಗದ ಬೌಲರ್‌ ಅಭಿಮನ್ಯು ಮಿಥುನ್‌ ಹಾಗೂ ಸ್ಪಿನ್ನರ್‌ ಜಗದೀಶ್‌ ಸುಚಿತ್‌. ವಿದರ್ಭದ ಆರಂಭಿಕರಾದ ಫೈಜ್‌ ಫ‌ಜಲ್‌ ಮತ್ತು ರಾಮಸ್ವಾಮಿ ಸಂಜಯ್‌ ಅವರನ್ನು ಮಿಥುನ್‌ ಕಡಿಮೆ ಮೊತ್ತಕ್ಕೆ ಪೆವಿಲಿಯನ್‌ಗೆ ಅಟ್ಟಿದರು. ಕಡೆಯ ಹಂತದಲ್ಲಿ ದರ್ಶನ್‌ ನಲ್ಕಂಡೆ ವಿಕೆಟ್‌ ಉರುಳಿಸಿದರು. ಮಿಥುನ್‌ ಸಾಧನೆ 32ಕ್ಕೆ 3.

ಮಧ್ಯಮ ಕ್ರಮಾಂಕದಲ್ಲಿ ನೆಲೆ ಕಂಡುಕೊಳ್ಳಲು ವಿದರ್ಭ ಯತ್ನಿಸುತ್ತಿದ್ದಾಗ ಆಘಾತ ನೀಡಿದವರು ಎಡಗೈ ಆಫ್ಸ್ಪಿನ್ನರ್‌ ಜೆ. ಸುಚಿತ್‌. ಅವರು ಗಣೇಶ್‌ ಸತೀಶ್‌, ಅಕ್ಷಯ್‌ ವಾಡ್ಕರ್‌, ಆದಿತ್ಯ ಸರ್ವಟೆಗೆ ಪೆವಿಲಿಯನ್‌ ಹಾದಿ ತೋರಿಸಿದರು. ಸುಚಿತ್‌ ಗಳಿಕೆ 25ಕ್ಕೆ 3 ವಿಕೆಟ್‌.ಉಳಿದೆರಡು ವಿಕೆಟ್‌ಗಳನ್ನು ಕರ್ನಾಟಕ ಸಾಧ್ಯವಾದಷ್ಟು ಬೇಗ ಉರುಳಿಸಿದರೆ ಮೇಲುಗೈಗೆ ಯತ್ನಿಸಬಹುದು. ಇದರಲ್ಲಿ ವಿಫ‌ಲವಾದರೆ ವಿದರ್ಭ 300ರ ಗಡಿ ಮುಟ್ಟಬಹುದು. ಹಾಗೇನಾದರೂ ಆದರೆ, ಬೌಲಿಂಗ್‌ ಅಂಕಣದಂತೆ ತೋರುತ್ತಿರುವ ನಾಗ್ಪುರದಲ್ಲಿ ಕರ್ನಾಟಕದ ಬ್ಯಾಟಿಂಗ್‌ ಕೂಡ ಒತ್ತಡಕ್ಕೆ ಸಿಲುಕಬಹುದು.

Advertisement

ಸಂಕ್ಷಿಪ್ತ ಸ್ಕೋರ್‌: ವಿದರ್ಭ ಮೊದಲ ಇನ್ನಿಂಗ್ಸ್‌-8 ವಿಕೆಟಿಗೆ 245 (ಜಿ. ಸತೀಶ್‌ 57, ಜಾಫ‌ರ್‌ 41, ವಾಘ… ಔಟಾಗದೆ 37, ವಾಡ್ಕರ್‌ 31, ಸುಚಿತ್‌ 25ಕ್ಕೆ 3, ಮಿಥುನ್‌ 32ಕ್ಕೆ 3, ವಿನಯ್‌ 34ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next