Advertisement

Karnataka: ಘೋಷಣೆಯಾಗದ ವಿಪಕ್ಷ ಸ್ಥಾನ- ಹತಾಶೆಯ ಮಡುವಿಗೆ ಜಾರಿದ ಕೇಸರಿ ಪಡೆ

10:29 PM Jul 08, 2023 | Team Udayavani |

ಬೆಂಗಳೂರು: ಉಭಯ ಸದನದ ವಿಪಕ್ಷ ನಾಯಕ, ಉಪನಾಯಕ, ಮುಖ್ಯ ಸಚೇತಕ ಸ್ಥಾನವನ್ನು “ಬಿಟ್ಟ ಸ್ಥಳ”ದಂತೆ ಪರಿಗಣಿಸಿರುವ ಬಿಜೆಪಿ ವರಿಷ್ಠರ ನಡೆ ಕೇಸರಿ ಪಡೆಯ ನಾಯಕರನ್ನು ಹತಾಶೆಯ ಮಡುವಿಗೆ ದೂಡಿದೆ. ವರಿಷ್ಠರ ನಿರ್ಧಾರವನ್ನು ಪ್ರಶ್ನಿಸಲೂ ಆಗದೇ, ಒಪ್ಪಿಕೊಳ್ಳಲು ಆಗದೆ ರಾಜ್ಯ ನಾಯಕರು ಅನಾಥ ಪ್ರಜ್ಞೆಗೆ ಜಾ ರಿದ್ದಾರೆ.
ರಾಜ್ಯ ವಿಧಾನಮಂಡಲದ ಇತಿಹಾಸದಲ್ಲೇ ಮೊದಲ ಬಾರಿಗೆ ವಿಪಕ್ಷ ನಾಯಕನಿಲ್ಲದೆ ರಾಜ್ಯಪಾಲರ ಭಾಷಣ ಹಾಗೂ ಬಜೆಟ್‌ ಮಂಡನೆ ನಡೆದಿರುವುದು ಉಭಯ ಸದನದಲ್ಲಿ ಬಿಜೆಪಿಯ ನೈತಿಕ ಸ್ಥೈರ್ಯವನ್ನು ಅಡಗಿಸಿದ್ದು, ಯಾರು, ಯಾರಿಗೆ ಉತ್ತರದಾಯಿ ಎಂಬ ಸ್ಥಿತಿ ನಿರ್ಮಾಣವಾಗಿದೆ.

Advertisement

ಮಾತು ಮಾತಿಗೆ “ನಿಮ್ಮಲ್ಲಿ ವಿಪಕ್ಷ ನಾಯಕ ಯಾರು?’ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರಿಂದ ಪ್ರಶ್ನೆ ಎದುರಿಸುವುದು ಬಿಜೆಪಿ ನಾಯಕರಿಗೆ “ಕಾದಸೀಸವನ್ನು ಕಿವಿಯಲ್ಲಿ ಹೊಯ್ದ’ ಅನುಭವ ಸೃಷ್ಟಿಸುತ್ತಿದೆ. ಆದರೆ ವರಿಷ್ಠರು ಮಾತ್ರ ಕರ್ನಾಟಕದ ವಿದ್ಯಮಾನಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.

ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆಗೆ ಸಂಬಂಧಪಟ್ಟಂತೆ ರಾಜ್ಯಕ್ಕೆ ವೀಕ್ಷಕರಾಗಿ ಆಗಮಿಸಿದ್ದ ಕೇಂದ್ರ ಸಚಿವ ಮನ್‌ಸುಖ್‌ ಮಾಂಡವೀಯ ಹಾಗೂ ವಿನೋದ್‌ ತಾಬ್ಡೆ ಅಭಿಪ್ರಾಯ ಸಂಗ್ರಹಿಸಿ ದಿಲ್ಲಿಗೆ ತೆರಳಿ ಕೆಲವು ದಿನ ಕಳೆದಿವೆ. ವೀಕ್ಷಕರು ದಿಲ್ಲಿಗೆ ತೆರಳಿದ ಮರುದಿನವೇ ಘೋಷಣೆಯಾಗಬಹುದು ಎಂಬುದು ರಾಜ್ಯ ಬಿಜೆಪಿ ನಾಯಕರ ನಿರೀಕ್ಷೆಯಾಗಿತ್ತು. ಆದರೆ ವರಿಷ್ಠರು ಶಾಸಕರ ಅಭಿಪ್ರಾಯಕ್ಕೂ ಮಣೆ ಹಾಕಿಲ್ಲ. ಹೀಗಾಗಿ ತಮ್ಮ ಬಜೆಟ್‌ ಪುಸ್ತಕದಲ್ಲಿ ಸಿಎಂ ಸಿದ್ದರಾಮಯ್ಯ ಹಿಂದಿನ ಬಿಜೆಪಿ ಸರಕಾರ ಹಾಗೂ ಕೇಂದ್ರದ ನರೇಂದ್ರ ಮೋದಿ ಸರಕಾರದ ನೀತಿಗ ಳನ್ನು ಕಟು ಶಬ್ದಗಳಿಂದ ಟೀಕಿಸಿದರೂ ಸೊಲ್ಲೆತ್ತಲು ಸಾಧ್ಯವಾಗದ ಸ್ಥಿತಿ ಬಿಜೆಪಿಯದ್ದಾಗಿತ್ತು.
ವರದಿ ನೋಡಿಲ್ಲವೇ?

ಬಿಜೆಪಿ ಮೂಲಗಳು ಎಂದಿನಂತೆ ಶನಿವಾರ ತಡರಾತ್ರಿ ವಿಪಕ್ಷ ನಾಯಕರ ಹೆಸರು ಘೋಷಣೆಯಾಗಬಹುದು ಎಂದು ಹೇಳಲಾಗಿತ್ತು. ಶನಿ ವಾರ ಮಧ್ಯಾಹ್ನವೂ ಬಿಜೆಪಿ ಪಾಳಯದಿಂದ ಇಂಥದ್ಧೇ ಸುದ್ದಿ ಹೊರಬಿದ್ದು, ಮತ್ತೆ “ಇಲ್ಲ ವಂತೆ’ ಎಂಬ ಸ್ಪಷ್ಟೀಕರಣ ಲಭಿಸಿದೆ. ಒಂದು ಮೂಲಗಳ ಪ್ರಕಾರ ವೀಕ್ಷಕರು ಸಲ್ಲಿಸಿದ ವರದಿಯತ್ತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಇನ್ನೂ ಕಣ್ಣು ಹಾಯಿಸಿಲ್ಲ. ವೀಕ್ಷಕರು ತಾವು ಸಂಗ್ರಹಿಸಿದ ಮಾಹಿತಿಯನ್ನು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಸಲ್ಲಿಸಿದ್ದಾರೆ. ಕೆಲವು ರಾಜ್ಯ ಘಟಕಗಳಿಗೆ ಅಧ್ಯಕ್ಷರು, ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯಗಳಿಗೆ ವೀಕ್ಷಕರ ನೇಮಕವಾದರೂ ಕರ್ನಾಟಕದ ವಿದ್ಯಮಾನಗಳಿಗೆ ಮಾತ್ರ ಮೋದಿ-ಶಾ ಜೋಡಿ ಆದ್ಯತೆ ನೀಡಿಲ್ಲ.

ಹಿಂದೆ ಬಿತ್ತು ಮುಂಚೂಣಿ ಹೆಸರು: ಈ ಎಲ್ಲ ಬೆಳವಣಿಗೆಯಿಂದ ವಿಪಕ್ಷ ನಾಯಕ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದ ಹೆಸರುಗಳು ಈಗ ಹಿಂದೆ ಬಿದ್ದಿವೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್‌, ಮಾಜಿ ಸಚಿವರಾದ ವಿ.ಸುನಿಲ್‌ ಕುಮಾರ್‌, ಶಾಸಕ ಅರವಿಂದ ಬೆಲ್ಲದ್‌ ಹೆಸರು ಈ ಸ್ಥಾನಕ್ಕಾಗಿ ಹೆಚ್ಚು ಚರ್ಚೆಯಲ್ಲಿತ್ತು. ಆದರೆ ಈಗಿನ ಮಾಹಿತಿಯಂತೆ ಈ ಹೆಸರುಗಳು ಚರ್ಚೆಯ ಸ್ವರೂಪ ಕಳೆದುಕೊಂಡಿವೆ. ಯಡಿಯೂರಪ್ಪ ದಿಲ್ಲಿ ಪ್ರವಾಸದ ಬಳಿಕ ಮುನ್ನೆಲೆಗೆ ಬಂದ ಆರಗ ಜ್ಞಾನೇಂದ್ರ ಹಾಗೂ ಸುರೇಶ್‌ ಕುಮಾರ್‌ ಹೆಸರು ಅಷ್ಟೇ ಬೇಗ ಸ್ತಬ್ಧವಾಗಿದೆ.

Advertisement

ಡಾ| ಅಶ್ವತ್ಥನಾರಾಯಣಗೆ ಪಟ್ಟ?
ಇದೆಲ್ಲದರ ಮಧ್ಯೆ ವಿಪಕ್ಷ ನಾಯಕ ಸ್ಥಾನಕ್ಕೆ ಮಾಜಿ ಉಪಮುಖ್ಯಮಂತ್ರಿ ಡಾ| ಸಿ.ಎನ್‌.ಅಶ್ವತ್ಥನಾರಾಯಣ ಅವರನ್ನು ಬಿಜೆಪಿ ವರಿಷ್ಠರು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವಿಧಾನ ಪರಿಷತ್‌ನಲ್ಲಿ ಕೋಟ ಶ್ರೀನಿವಾಸ ಪೂಜಾರಿ ವಿಪಕ್ಷ ನಾಯಕನಾಗಿ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ಸಮುದಾಯಕ್ಕೆ ಸೇರಿದವರು ಆಯ್ಕೆಗೊಳ್ಳುವ ಸಾಧ್ಯತೆ ಇದೆ. ಒಂದೊಮ್ಮೆ ಕೇಂದ್ರ ಸಚಿವ ಸಂಪುಟಕ್ಕೆ ಬಿ.ವೈ.ರಾಘವೇಂದ್ರ ಸೇರ್ಪಡೆಗೊಂಡು ಶೋಭಾ ಕರಂದ್ಲಾಜೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡರೆ ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆಗೆ ಹೊಸ ಜಾತಿ ಸಮೀಕರಣ ರೂಪುಗೊಳ್ಳಬಹುದು. ಮೂಲಗಳ ಪ್ರಕಾರ ಕೇಂದ್ರ ಸಂಪುಟ ಪುನಾರಚನೆಯವರೆಗೂ ಈ ಹೊಯ್ದಾಟ ಮುಂದುವರಿಯಬಹುದು.

 ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next