Advertisement

ತುಳು ಅಕಾಡೆಮಿಯಲ್ಲಿ ಸ್ಥಾನ ನೀಡಲು ಒತ್ತಾಯ 

06:55 AM Aug 12, 2017 | Team Udayavani |

ಮಡಿಕೇರಿ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಬಲವನ್ನು 12ರಿಂದ 20ಕ್ಕೆ ಏರಿಕೆ ಮಾಡುವುದರೊಂದಿಗೆ ಕೊಡಗು ಜಿಲ್ಲೆಯ ತುಳು ಭಾಷಿಕರಿಗೂ 5 ಸ್ಥಾನಗಳನ್ನು ಮೀಸಲಿಡಬೇಕೆಂದು ತುಳುವೆರೆ ಜನಪದ ಕೂಟದ ಜಿಲ್ಲಾ ಘಟಕ ಒತ್ತಾಯಿಸಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನಪದ ಕೂಟದ ಜಿಲ್ಲಾ ಸಂಚಾಲಕ ಶ್ರೀಧರ ನೆಲ್ಲಿತ್ತಾಯ, ಕೊಡಗು ಜಿಲ್ಲೆಯಲ್ಲಿ 2 ಲಕ್ಷಕ್ಕು ಅಧಿಕ ಮಂದಿ ತುಳು ಭಾಷಿಕರಿದ್ದು, ಅಕಾಡೆಮಿಯಲ್ಲಿ 5 ಸದಸ್ಯ ಸ್ಥಾನ ನೀಡದಿದ್ದರೂ ಕನಿಷ್ಠ 2 ಸ್ಥಾನವನ್ನಾದರು ನೀಡಬೇಕೆಂದು ಒತ್ತಾಯಿಸಿದರು. ಕಳೆದ ಸಾಲಿನಲ್ಲಿ 10 ಸದಸ್ಯ ಬಲವಿದ್ದ ತುಳು ಸಾಹಿತ್ಯ ಅಕಾಡೆಮಿಗೆ ಈ ಬಾರಿ 2 ಸ್ಥಾನವನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಆದ‌ರೆ, ತುಳು ಭಾಷಿಕರು ರಾಜ್ಯದ ಎಲ್ಲ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸದಸ್ಯ ಬಲವನ್ನು 20ಕ್ಕೆ ಏರಿಕೆ ಮಾಡಬೇಕು. ಕೊಡಗು ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ತುಳು ಮಾತನಾಡುವ 15ಕ್ಕೂ ಹೆಚ್ಚು ಜನಾಂಗಗಳಿರುವುದರಿಂದ ಅಕಾಡೆಮಿಯಲ್ಲಿ ಜಿಲ್ಲೆಯವರಿಗೂ ಸ್ಥಾನ ನೀಡಬೇಕೆಂದು ಶ್ರೀಧರ ನೆಲ್ಲಿತ್ತಾಯ ಒತ್ತಾಯಿಸಿದರು.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸರಕಾರದ ಗಮನ ಸೆಳೆಯಬೇಕೆಂದರು. ಆರು ತಿಂಗಳ ಹಿಂದೆಯೇ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ನೀಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ನಮ್ಮ ಬೇಡಿಕೆಯನ್ನು ಸರಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ ಶ್ರೀಧರ ನೆಲ್ಲಿತ್ತಾಯ ಜನಪದ ಕೂಟದ ವತಿಯಿಂದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಇದಕ್ಕೂ ಸರ್ಕಾರ ಸ್ಪಂದಿಸದಿದ್ದಲ್ಲಿ ಕೊಡಗು ಜಿಲ್ಲೆಗೆ ಸೀಮಿತವಾಗಿ ತುಳು ಅಕಾಡೆಮಿಯನ್ನು ಸ್ಥಾಪಿಸುವುದಾಗಿ ತಿಳಿಸಿದರು.

ಒಂದು ವರ್ಷದ ಹಿಂದೆ ರಚನೆಗೊಂಡ ತುಳುವೆರ ಜನಪದ ಕೂಟದಲ್ಲಿ ಸುಮಾರು 2300 ಸದಸ್ಯರಿದ್ದು, ಸದಸ್ಯತ್ವ ಅಭಿಯಾ ನದ ಮೂಲಕ ಈ ಸಂಖ್ಯೆಯನ್ನು 8 ಸಾವಿರಕ್ಕೆ ಏರಿಸಲಾಗುವುದೆಂದು ವಿಶ್ವಾಸ ವ್ಯಕ್ತಪಡಿಸಿದರು. 13 ಹೋಬಳಿ ಘಟಕ ಹಾಗೂ ಮೂರು ತಾಲೂಕು ಘಟಕಗಳನ್ನು ಈಗಾಗಲೆ ರಚಿಸಲಾಗಿದ್ದು, ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಸರಕಾರದ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಕರ್ನಾಟಕ ನಾಟಕ ಅಕಾಡೆಮಿಗೆ ತುಳು ಭಾಷಿಗರಾದ ಮಂಜು ಕೊಡಗು ಹಾಗೂ ಪ‌ುಸ್ತಕ ಪ್ರಾಧಿಕಾರಕ್ಕೆ ಡಾ| ಕವಿತಾ ರೈ ಅವರನ್ನು ಆಯ್ಕೆ ಮಾಡಿರುವ ಸರಕಾರದ ಕ್ರಮವನ್ನು ಸ್ವಾಗತಿಸುವುದಾಗಿ ಶ್ರೀಧರ ನೆಲ್ಲಿತ್ತಾಯ ಇದೇ ಸಂದರ್ಭ ತಿಳಿಸಿದರು.

Advertisement

ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ಮಾತನಾಡಿ, ಅಕಾಡೆಮಿಗೆ ಜನಪ್ರತಿನಿಧಿಗಳ ಶಿಫಾರಸಿನ ಮೇರೆ ಸದಸ್ಯರನ್ನು ಆಯ್ಕೆ ಮಾಡದೆ, ತುಳು ಭಾಷೆ, ಸಂಸ್ಕೃತಿಯ ಬಗ್ಗೆ ಹೆಚ್ಚು ಕಾಳಜಿ ಹೊಂದಿ ಅದರಲ್ಲಿ ತೊಡಗಿಸಿಕೊಂಡಿರುವವರನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸಿದರು. ತುಳು ಸಾಹಿತ್ಯ ಅಕಾಡೆಮಿಗೆ ಕೇವಲ ದಕ್ಷಿಣ ಕನ್ನಡ ಜಿಲ್ಲೆಯಿಂದ ಮಾತ್ರ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ನೇಮಕ ಮಾಡಿ ಆದೇಶ ಹೊರಡಿಸುವುದು ಸರಿಯಾದ ಕ್ರಮವಲ್ಲವೆಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಶೇಖರ್‌ ಭಂಡಾರಿ, ಉಪಾಧ್ಯಕ್ಷ ಆನಂದ ರಘು, ಬಿ.ಡಿ. ನಾರಾಯಣ ರೈ ಹಾಗೂ ಸಲಹೆಗಾರ ಎಂ.ಬಿ. ನಾಣಯ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next