ಮುಂಬಯಿ: ಕರ್ನಾಟಕ ತುಳುನಾಡ ಸಂಘ ಸಾಂಗ್ಲಿ, ಮೀರಜ್, ಜೈಸಿಂಗ್‌ಪುರ ಮಾಧವನಗರ ಇದರ 30ನೇ ವಾರ್ಷಿಕೋತ್ಸವ ಸಮಾರಂಭವು ಮಾ. 2ರಂದು ಮೀರಜ್ ಸಾಂಗ್ಲಿ ರೋಡ್‌ನಲ್ಲಿರುವ ತುಳುನಾಡ ಸಾಂಸ್ಕೃತಿಕ ಭವನದಲ್ಲಿ ಸಂಘದ ಅಧ್ಯಕ್ಷರಾದ ಉಮೇಶ್ ಆರ್. ಶೆಟ್ಟಿ ಇವರ ನೇತೃತ್ವದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಸಂಘದ ಅಧ್ಯಕ್ಷರಾದ ಉಮೇಶ್ ಆರ್. ಶೆಟ್ಟಿ ಸ್ವಾಗತಿಸಿ ಅತಿಥಿ-ಗಣ್ಯರನ್ನು ಪರಿಚಯಿಸಿದರು. ಪ್ರಧಾನ ಕಾರ್ಯದರ್ಶಿ ಅರ್ಚನಾ ಡಿ. ಶೆಟ್ಟಿ ನಡೆದು ಬಂದ ದಾರಿಯ ಬಗ್ಗೆ ಹಾಗೂ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು. ತುಳು ಸಾಹಿತಿ ಹಾಗೂ ರಂಗಭೂಮಿ ಕಲಾವಿದರಾದ ನಂದಳಿಕೆ ನಾರಾಯಣ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಈ ಸಂದರ್ಭ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ವಿ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಇವರನ್ನು ಪುಣೆಯಲ್ಲಿ ಬಂಟರ ನೇತೃತ್ವದಲ್ಲಿ ನಿರ್ಮಿಸಿ ಸಮಾಜಕ್ಕೋಪ್ಪಿಸಿದ ಶ್ರೇಷ್ಠ ಸಾಧನೆಗಾಗಿ ಸಂಘದ ವತಿಯಿಂದ ಪೆರ್ಮೆದ ತುಳುವೆ ಬಿರುದನ್ನಿತ್ತು ಸಮ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಂಬಯಿಯ ಚಂದ್ರಹಾಸ ಗುರುಸ್ವಾಮಿ ಇವರನ್ನು ಸತ್ಕರಿಸಲಾಯಿತು.
ಸಂಘದ ಕ್ರೀಡಾಕೂಟದಲ್ಲಿ ಭಾಗ ವಹಿಸಿ ಸ್ಪರ್ಧೆಗಳಲ್ಲಿ ವಿಜೇತರಾದ ಸದಸ್ಯರಿಗೆ ಹೊಟೇಲ್ ಆಸಾರ್ ಇಚಲಕರಂಜಿ ಇದರ ಸಂತೋಷ್ ಜಿ. ಶೆಟ್ಟಿ ದಂಪತಿ ಬಹುಮಾನಗಳನ್ನು ವಿತರಿಸಿ ಅಭಿನಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘದ ಸದಸ್ಯರು ನಡೆಸಿಕೊಟ್ಟರು. ಮುಂಬಯಿಯ ಕಲಾವಿದರಿಂದ ಮಣ್ಣಿ ನಾಟಕ ಪ್ರದರ್ಶನಗೊಂಡಿತು. ಸಂಘದ ಕೋಶಾಧಿಕಾರಿ ಉಮೇಶ್ ಕೆ. ಶೆಟ್ಟಿ ವಂದಿಸಿದರು. ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿ ದರು. ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ತುಳುಕನ್ನಡಿಗರು ಉಪಸ್ಥಿತರಿದ್ದರು.