Advertisement

ಕರ್ನಾಟಕ ಸಾರಿಗೆ ಲಿಮ್ಕಾ ದಾಖಲೆಗೆ: ರೇವಣ್ಣ

02:41 PM Mar 11, 2018 | |

ರಾಮನಾಥಪುರ: ಕರ್ನಾಟಕ ಸಾರಿಗೆ ಸಂಸ್ಥೆ ಉತ್ತಮ ಸೇವೆ ಸಲ್ಲಿಸುತ್ತಾ ಲಿಮ್ಕಾ ಸಾಧನೆ ಮಾಡಿದೆ ಎಂದು
ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಹೇಳಿದರು. ರಾಮನಾಥಪುರ ಹೋಬಳಿ ಕೇರಳಾಪುರದಲ್ಲಿ ಶನಿವಾರ 1.57 ಕೋಟಿ ರೂ., ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಬಸ್‌ ನಿಲ್ದಾಣ ಉದ್ಘಾಟಿಸಿ ಮಾತನಾಡಿದರು.

Advertisement

 ಪ್ರಪಂಚದಲ್ಲೇ ಮಾಲ್ದೀವ್‌ ದೇಶ ಮೊದಲ ಸ್ಥಾನದಲ್ಲಿದ್ದರೆ ಓಮನ್‌ ಮತ್ತು ಕರ್ನಾಟಕ ನಂತರದ ಸ್ಥಾನದಲ್ಲಿ ಅತ್ಯುನ್ನತ ಸಾರಿಗೆ ಸೇವೆ ಒದಗಿಸುತ್ತಿದೆ. ಲಾಭವನ್ನಷ್ಟೇ ಪರಿಗಣಿಸದೇ ಗುಣಮಟ್ಟದ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಮಹಿಳಾ ಸಬಲೀಕರಣಕ್ಕೂ ಹೆಚ್ಚು ಆದ್ಯತೆ ನೀಡಲಾ ಗುತ್ತಿದ್ದು ಮಹಿಳೆಯರಿಗೆ ಬಸ್‌ಗಳಲ್ಲಿ ಸೀಟು ನಿಗದಿ ಪಡಿಸಿ, ಅವರ ಮನೆ ಬಳಿಯೇ ಕೋರಿಕೆ ನಿಲುಗಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮಹಿಳೆಯರಿಗೆ ತರಬೇತಿ ನೀಡಿ ಹೆಚ್ಚಿನ ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಹೊಸ ನಿಲ್ದಾಣಕ್ಕೆ ಕಾಂಕ್ರೀಟ್‌, ಕಾಂಪೌಡ್‌ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು. 

ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಹರಕಲು ಸೀರೆ ಮುರುಕಲು ಸೈಕಲ್‌ ನೀಡಿದ್ದರು. ಸಿದ್ದರಾಮಯ್ಯ ಸಿಎಂ ಆದ ನಂತರ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ ಹಸಿವು ಮುಕ್ತ ಕರ್ನಾಟಕ ಮಾಡಿ ಅನೇಕ ಭಾಗ್ಯಗಳನ್ನು ಕರುಣಿಸಿ ಬಡವರ ಪಾಲಿನ ಆಶಾ ಕಿರಣವಾಗಿದ್ದಾರೆ. ಬರುವ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ಗೆ ಅಧಿಕಾರ ಬರಲಿದ್ದು ಕ್ಷೇತ್ರದಲ್ಲಿ
ಸಚಿವ ಎ. ಮಂಜು ಅವರನ್ನು ಮತ್ತೂಮ್ಮೆ ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಅವರ ಕೈ ಬಲಪಡಿಸಬೇಕು
ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ದೇವೇಗೌಡರು ಪ್ರಧಾನಿಯಾಗಿದ್ದಾಗ, ಅವರ ಪುತ್ರ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸಲು ಆಗಲಿಲ್ಲ. ಇದೀಗ ಜೆಡಿಎಸ್‌ ಸರ್ಕಾರ ಬಂದರೆ 53 ಸಾವಿರ
ಕೋಟಿ ರೈತ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿರುವುದು ಹಾಸ್ಯಾಸ್ಪದ. ಜೆಡಿಎಸ್‌ ಅಧಿಕಾರಕ್ಕೆ ಬರುವುದಿಲ್ಲ ಎಂದು ಗೊತ್ತಿರುವ ಕಾರಣಕ್ಕಾಗಿ ಕುಟುಂಬ ರಾಜಕಾರಣಿಗಳು ಹಸಿ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆಂದು ದೂರಿದರು.

Advertisement

 ಸದನದಲ್ಲಿ ಮಂಡನೆಯಾಗದ ಬೆಂಗಳೂರು ಭೂ ಕಬಳಿಕೆ ವರದಿಯನ್ನು ಸ್ವಂತಕ್ಕೆ ಬಳಸಿಕೊಳ್ಳುತ್ತಿರುವ ಮಾಜಿ ಶಾಸಕ ರಾಮಸ್ವಾಮಿ ಮಾತೆತ್ತಿದ್ದರೆ ಹೋರಾಟದಿಂದ ಬಂದವನು ಚಿನ್ನ, ರನ್ನ ಎಂದು ಹೊಗಳಿಕೊಳ್ಳುತ್ತಾ ಅಧಿಕಾರಕ್ಕೆ ಬರುವುದಾಗಿ ಹಗಲು ಕನಸ ಕಾಣುತ್ತಿದ್ದಾರೆ. ರಾಮಸ್ವಾಮಿ ಶಾಸಕರಾಗಿದ್ದ ವೇಳೆ ಅಭಿವೃದ್ಧಿ ಕಾರ್ಯಗಳನ್ನು ಕೇಳಿ
ಮಾಡಿಸಿಕೊಳ್ಳುವ ಶಕ್ತಿ ಪ್ರದರ್ಶಿಸಲಿಲ್ಲ ಎಂದು ಲೇವಡಿ ಮಾಡಿದರು.

ಯಡಿಯೂರಪ್ಪ ಅವರಿಗೆ ಮೋಸ ಮಾಡಿ ಸಿಎಂ ಆದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ವಂಚಿಸಿದ ದೇವೇಗೌಡರ ದ್ವೇಷದ ರಾಜಕಾರಣ ಪ್ರಜ್ಞಾವಂತರ ಮುಂದೆ ನಡೆಯುವುದಿಲ್ಲ. ಕಳೆದ 40 ವರ್ಷಗಳಿಂದ
ಅಧಿಕಾರದಲ್ಲಿದ್ದರೂ ಈ ತಾಲೂಕಿನ ಅಭಿವೃದ್ಧಿ ಕಡೆಗಣಿಸಿದ್ದರು. ಇದೀಗ ತಾನು ಸಚಿವನಾದ 2 ವರ್ಷಗಳಲ್ಲೇ ಸಾಕಷ್ಟು ಅಭಿವೃದ್ಧಿ ಕಂಡಿದೆ. ಬಸ್‌ ನಿಲ್ದಾಣ ಕನಸು ನನಸು ಮಾಡಿದ್ದೇನೆ. ಇಲ್ಲಿಂದ 136 ಮಾರ್ಗಗಳಿಗೆ ಬಸ್‌ ಸಂಚರಿಸಲಿದ್ದು ರಾತ್ರಿ ವೇಳೆ 9 ಬಸ್‌ಗಳು ಸಂಚರಿಸಲಿವೆ. ಕೇರಳಾಪುರ, ರಾಮನಾಥಪುರ, ಬಾಣಾವರ ಮಾರ್ಗವಾಗಿ ರಸ್ತೆ
ಅಭಿವೃದ್ಧಿಗೆ 100 ಕೋಟಿ ರೂ., ಮಂಜೂರಾಗಿದ್ದು ಸದ್ಯದಲ್ಲೇ ಭೂಮಿ ನಡೆಸಲಾಗುವುದು ಎಂದು ತಿಳಿಸಿದರು.

ಜಿಪಂ ಅಧ್ಯಕ್ಷೆ ಶ್ವೇತಾ, ಸದಸ್ಯ ಡಾ.ಮಂಥರ್‌ಗೌಡ, ಮಾಜಿ ಸದಸ್ಯೆ ತಾರಾ ಮಂಜು, ತಾಪಂ ಅಧ್ಯಕ್ಷೆ ವೀಣಾ, ಸದಸ್ಯೆ ರಮಾ, ಗ್ರಾಪಂ ಅಧ್ಯಕ್ಷೆ ಯಶೋಧ, ಹುಡಾ ಅಧ್ಯಕ್ಷ ಕೃಷ್ಣಕುಮಾರ್‌, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶ್ವತ್ಥಕುಮಾರ್‌ ಮತ್ತಿತರರಿದ್ದರು.

ಅಭಿವೃದ್ಧಿ ಸಹಿಸದೆ ಅಪಪ್ರಚಾರ ದೇಶದಲ್ಲಿಯೇ ಚುನಾವಣೆಗೂ ಮುನ್ನ ನೀಡಿದ ಭರವಸೆಗಳನ್ನು ನೀಡಿದ ಮೊದಲ
ಸಿಎಂ ಸಿದ್ದರಾಮಯ್ಯ ಅವರ ಜನಪರ ಸಾಧನೆಗಳನ್ನು ಸಹಿಸಲಾರದೆ ವಿರೋಧ ಪಕ್ಷಗಳ ಮುಖಂಡರು ಸಲ್ಲದ ಅಪ
ಪ್ರಚಾರದಲ್ಲಿ ತೊಡಗಿದ್ದಾರೆ. ಚುನಾವಣೆ ಸಮಯದಲ್ಲಿ ಮತದಾರರ ಮುಂದೆ ಕಣ್ಣೀರು ಹಾಕುವ ದೇವೇಗೌಡರು, ಪ್ರತಿ
ಬಾರಿ ಒಂದೊಂದು ನಾಟಕವಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇವರು ಅಳುವುದು ಮಾಗಡಿ, ರಾಮನಗರ ವರೆಗೂ ವ್ಯಾಪಿಸಿದರೂ ನುಡಿದಂತೆ ನಡೆದ ಸಿದ್ದರಾಮಯ್ಯ ಸರ್ಕಾರಕ್ಕೆ ಜನರ ಆಶೀರ್ವಾದವಿದೆ ಎಂದು ಸಾರಿಗೆ ಸಚಿವ ಎಚ್‌. ಎಂ.ರೇವಣ್ಣ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next