Advertisement

ಕರ್ನಾಟಕಕ್ಕೆ ತೆರೆಯಿತು ಕ್ವಾರ್ಟರ್‌ ಫೈನಲ್‌ ಕದ

10:01 AM Feb 16, 2020 | sudhir |

ಬೆಂಗಳೂರು: ಬೌಲರ್‌ಗಳ ಶಿಸ್ತುಬದ್ಧ ದಾಳಿ, ನಾಯಕ ಕರುಣ್‌ ನಾಯರ್‌ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ಸಾಹಸದಿಂದಾಗಿ ಆತಿ ಥೇಯ ಕರ್ನಾಟಕ ತಂಡ ಬರೋಡ ವನ್ನು 8 ವಿಕೆಟ್‌ಗಳಿಂದ ಮಣಿಸಿ ಕ್ವಾರ್ಟರ್‌ ಫೈನಲ್‌ಗೆ ನೆಗೆದಿದೆ.

Advertisement

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಲೀಗ್‌ ಪಂದ್ಯದ ಒಂದು ದಿನದ ಆಟ ಬಾಕಿ ಇರುವಂತೆಯೇ ಕರ್ನಾಟಕ ವಿಜಯೋತ್ಸವ ಆಚರಿಸಿತು. ಈ ಗೆಲುವಿಗೆ 6 ಅಂಕ ಸಂಪಾದಿಸಿದ ನಾಯರ್‌ ಪಡೆ, ಒಟ್ಟು ಅಂಕವನ್ನು 31ಕ್ಕೆ ಏರಿಸಿಕೊಂಡಿತು. ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ ಎಲೈಟ್‌ ಸಿ ಗುಂಪಿನ ಅಗ್ರಸ್ಥಾನಿ ಜಮ್ಮು-ಕಾಶ್ಮೀರ ತಂಡವನ್ನು ಎದುರಿಸುವ ಸಾಧ್ಯತೆಯಿದೆ.

ದಡ ಸೇರಿಸಿದ ಕರುಣ್‌, ಸಿದ್ಧಾರ್ಥ್
ಗುರುವಾರ 2ನೇ ದಿನದ ಆಟದ ಅಂತ್ಯಕ್ಕೆ ಬರೋಡ 2ನೇ ಇನ್ನಿಂಗ್ಸ್‌ ನಲ್ಲಿ 5 ವಿಕೆಟಿಗೆ 208 ರನ್‌ ಗಳಿಸಿತ್ತು. 3ನೇ ದಿನ ಬ್ಯಾಟಿಂಗ್‌ ಮುಂದುವರಿಸಿ 296ಕ್ಕೆ ಆಲೌಟ್‌ ಆಯಿತು. ಗೆಲುವಿಗೆ 149 ರನ್‌ ಮಾಡಬೇಕಿದ್ದ ಕರ್ನಾಟಕ 2 ವಿಕೆಟ್‌ ನಷ್ಟದಲ್ಲಿ ಗುರಿ ಮುಟ್ಟಿತು.

ಚೇಸಿಂಗ್‌ ವೇಳೆ ಆರಂಭಿಕರಾದ ಆರ್‌. ಸಮರ್ಥ್ (25), ದೇವದತ್ತ ಪಡಿಕ್ಕಲ್‌ (6) 58 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡರು. ಈ ಹಂತದಲ್ಲಿ ನಾಯಕ ಕರುಣ್‌ ನಾಯರ್‌ (ಅಜೇಯ 71 ರನ್‌, 126 ಎಸೆತ, 7 ಬೌಂಡರಿ) ಹಾಗೂ ಕೆ.ವಿ. ಸಿದ್ಧಾರ್ಥ್ (ಅಜೇಯ 29) ತಾಳ್ಮೆಯ ಬ್ಯಾಟಿಂಗ್‌ ನಡೆಸಿದರು. ಮುರಿಯದ 3ನೇ ವಿಕೆಟಿಗೆ 92 ರನ್‌ ಜತೆಯಾಟ ನಿರ್ವಹಿಸಿ ತಂಡವನ್ನು ದಡ ಸೇರಿಸಿದರು. ಉರುಳಿದ ಎರಡೂ ವಿಕೆಟ್‌ ಭಾರ್ಗವ್‌ ಭಟ್‌ ಪಾಲಾಯಿತು.

ಸಂಕ್ಷಿಪ್ತ ಸ್ಕೋರ್‌
ಬರೋಡ-85 ಮತ್ತು 296 (ಪಠಾಣ್‌ 90, ರಜಪೂತ್‌ 52, ಹೂಡಾ 50, ಪಿ. ಕೊಹ್ಲಿ 42, ಪ್ರಸಿದ್ಧ್ ಕೃಷ್ಣ 45ಕ್ಕೆ 4, ಮೋರೆ 68ಕ್ಕೆ 3, ಕೆ. ಗೌತಮ್‌ 99ಕ್ಕೆ 2). ಕರ್ನಾಟಕ-233 ಮತ್ತು 2 ವಿಕೆಟಿಗೆ 150 (ನಾಯರ್‌ ಔಟಾಗದೆ 71, ಸಿದ್ಧಾರ್ಥ್ ಔಟಾಗದೆ 29, ಸಮರ್ಥ್ 25, ಭಾರ್ಗವ್‌ ಭಟ್‌ 62ಕ್ಕೆ 2). ಪಂದ್ಯಶ್ರೇಷ್ಠ: ಕರುಣ್‌ ನಾಯರ್‌.

Advertisement

ಫೆ. 20ರಿಂದ ಕ್ವಾರ್ಟರ್‌ ಫೈನಲ್‌ ಸ್ಪರ್ಧೆ
ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಫೆ. 20ರಿಂದ 24ರ ತನಕ ನಡೆಯಲಿವೆ. ಎಲೈಟ್‌ ಎ ಮತ್ತು ಬಿ ಗುಂಪಿನಿಂದ ಅಗ್ರ 5 ತಂಡಗಳು, ಸಿ ಗುಂಪಿನಿಂದ ಅಗ್ರ 2 ತಂಡಗಳು ಹಾಗೂ ಪ್ಲೇಟ್‌ ಗುಂಪಿನಿಂದ ಅಗ್ರ ತಂಡ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿದೆ. ಸದ್ಯ ಕರ್ನಾಟಕ ಎಲೈಟ್‌ ಎ ಮತ್ತು ಬಿ ಗುಂಪಿನಲ್ಲಿ 31 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಶನಿವಾರದ ಆಟದ ಬಳಿಕ ಗುಜರಾತ್‌ 2ನೇ ಸ್ಥಾನಕ್ಕೆ ಲಗ್ಗೆ ಇಡುವ ಸಂಭವವಿದೆ. ಆಗ ಕರ್ನಾಟಕ 3ನೇ ಸ್ಥಾನ ಪಡೆಯಲಿದ್ದು, ಸಿ ಗುಂಪಿನ ಅಗ್ರಸ್ಥಾನಿ ಜಮ್ಮು ಕಾಶ್ಮೀರವನ್ನು ಎದುರಿಸುವ ಸಾಧ್ಯತೆ ಹೆಚ್ಚಿದೆ.

ಬಂಗಾಲ ಕ್ವಾರ್ಟರ್‌ ಫೈನಲ್‌ ಪ್ರವೇಶ
ಕರ್ನಾಟಕದ ಪಾಲಿಗೆ ಮಹತ್ವದ್ದಾಗಿದ್ದ ಪಂಜಾಬ್‌-ಬಂಗಾಲ ನಡುವಿನ ಅಂತಿಮ ಲೀಗ್‌ ಪಂದ್ಯದಲ್ಲಿ ಬಂಗಾಲ 48 ರನ್ನುಗಳ ಜಯ ಸಾಧಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ಶುಕ್ರವಾರದ ಅಂತ್ಯಕ್ಕೆ ಬಂಗಾಲ 32 ಅಂಕಗಳೊಂದಿಗೆ “ಎ-ಬಿ’ ವಿಭಾಗದ ಅಗ್ರಸ್ಥಾನ ಅಲಂಕರಿಸಿತು. ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ (31 ಅಂಕ). ಅನಂತರ ಗುಜರಾತ್‌ (29), ಸೌರಾಷ್ಟ್ರ (28) ಮತ್ತು ಆಂಧ್ರಪ್ರದೇಶ (27) ಇವೆ. ಶನಿವಾರ ಲೀಗ್‌ ಪಂದ್ಯಗಳ ಅಂತಿಮ ದಿನವಾಗಿದ್ದು, ಕೆಲವು ತಂಡಗಳ ಅಂಕ ಹಾಗೂ ಸ್ಥಾನದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next