ವಿಂಡ್‌ಹೋಕ್ (ನಮೀಬಿಯಾ): ಕರ್ನಾಟಕ ತನ್ನ ನಮೀಬಿಯಾ ಪ್ರವಾಸವನ್ನು ಸರಣಿ ಜಯದೊಂದಿಗೆ ಮುಗಿಸಿದರೂ ಕೊನೆಯ ಪಂದ್ಯದಲ್ಲಿ ಸೋಲಿನ ಸಂಕಟಕ್ಕೆ ಸಿಲುಕಿತು. ಇದರೊಂದಿಗೆ ಸರಣಿ ಗೆಲುವಿನ ಆಂತರ 3-2ಕ್ಕೆ ಇಳಿಯಿತು.
ರವಿವಾರದ 5ನೇ ಹಾಗೂ ಅಂತಿಮ ಪಂದ್ಯವನ್ನು ಆರ್. ಸಮರ್ಥ್ ಪಡೆ 5 ವಿಕೆಟ್‌ಗಳಿಂದ ಕಳೆದುಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ 48.1 ಓವರ್‌ಗಳಲ್ಲಿ 231ಕ್ಕೆ ಕುಸಿದರೆ, ನಮೀಬಿಯಾ 39.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 236 ರನ್ ಬಾರಿಸಿತು.
ಸ್ಟೀಫನ್ ಬಾರ್ಡ್ (59), ಮೈಕಲ್ ವಾನ್ ಲಿಂಜೆನ್ (56) ಅರ್ಧ ಶತಕ ಬಾರಿಸುವ ಜತೆಗೆ 2ನೇ ವಿಕೆಟಿಗೆ 107 ರನ್ ಒಟ್ಟುಗೂಡಿಸಿ ಗೆಲುವನ್ನು ಖಾತ್ರಿಗೊಳಿಸಿದರು. ನಾಯಕ ಗೆರಾರ್ಡ್ ಎರಾಸ್ಮಸ್ ಅಜೇಯ 59 ರನ್ ಕೊಡುಗೆ ಸಲ್ಲಿಸಿದರು. 38 ರನ್ ಮಾಡಿದ ಮೈಕಲ್ ಡು ಪ್ರೀಝ್ ಮತ್ತೋರ್ವ ಪ್ರಮುಖ ಸ್ಕೋರರ್. ಕರ್ನಾಟಕ 8 ಮಂದಿಯನ್ನು ಬೌಲಿಂಗ್ ದಾಳಿಗಿಳಿಸಿ ನಮೀಬಿಯಾವನ್ನು ಉರುಳಿಸಲು ಪ್ರಯತ್ನಿಸಿತಾದರೂ ಯಶಸ್ಸು ಕಾಣಲಿಲ್ಲ.
ಕರ್ನಾಟಕ ಪರ ನಿಕಿನ್ ಜೋಸ್ 61 ರನ್ ಬಾರಿಸಿ ಗಮನ ಸೆಳೆದರು. ಅವರಿಲ್ಲಿ 6ನೇ ಕ್ರಮಾಂಕದಲ್ಲಿ ಆಡಲಿಳಿದಿದ್ದರು. ಕಿಶನ್ ಬೆಡಾರೆ 43, ಅನೀಶ್ವರ್ ಗೌತಮ್ 29, ಕೀಪರ್ ಕೃತಿಕ್ ಕೃಷ್ಣ 25, ಎಲ್.ಆರ್. ಚೇತನ್ 22 ರನ್ ಹೊಡೆದರು.
ಮೊದಲ ಪಂದ್ಯವನ್ನು ಕರ್ನಾಟಕ 9 ವಿಕೆಟ್‌ಗಳಿಂದ ಜಯಿಸಿತ್ತು. ಬಳಿಕ 360 ರನ್ ಪೇರಿಸಿಯೂ 5 ವಿಕೆಟ್ ಸೋಲನುಭವಿಸಿತು. 3ನೇ ಪಂದ್ಯದಲ್ಲಿ ಎಲ್.ಆರ್. ಚೇತನ್ ಮತ್ತು ನಿಕಿನ್ ಜೋಸ್ ಶತಕದಿಂದ 9 ವಿಕೆಟ್ ಅಂತರದ ಜಯ ಸಾಧಿಸಿತು. 4ನೇ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದು ಸರಣಿ ವಶಪಡಿಸಿಕೊಂಡಿತು. ಆದರೆ ಈ ಅಂತರವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿಲ್ಲ.