ಕೆರೂರ: ರಷ್ಯಾ ದೇಶವು ಉಕ್ರೇನ್ ಮೇಲೆ ನಿರಂತರ ಶೆಲ್ ಹಾಗೂ ಬಾಂಬ್ ದಾಳಿ ನಡೆಸುತ್ತಿರುವ ಯುದ್ಧದ ವಾತಾವರಣದಿಂದ ನಮ್ಮಲ್ಲಿ ಭಯ, ಆತಂಕ ಎದುರಾಗಿದೆ. ಇದರಿಂದ ನಮ್ಮ ವೈದ್ಯಕೀಯ ವ್ಯಾಸಂಗದ ಮೇಲೂ ಕಾರ್ಮೋಡ ಕವಿದಿದೆ ಎಂದು ಉಕ್ರೇನ್‌ನಲ್ಲಿರುವ ಪಟ್ಟಣದ ಪ್ರಜ್ವಲ ಘಟ್ಟದ ತಿಳಿಸಿದ್ದಾರೆ.
ಶನಿವಾರ ದೂರವಾಣಿಯ ಮೂಲಕ ಉದಯವಾಣಿಯೊಂದಿಗೆ ಮಾತನಾಡಿದ ಅವರು, ಯಾವಾಗ, ಏನಾಗುವುದೋ ಎಂಬ ಭಯ ಆತಂಕದಲ್ಲಿ ದಿನ ದೂಡುತ್ತಿದ್ದೇವೆ. ಆದರೂ ಸಹ ನಾವಿರುವ ಮನೆಗಳ ನೆಲ ಮಹಡಿಗಳಲ್ಲಿ ಇರುವ ಬಾಂಬ್ ನಿರೋಧಕ ಬಂಕರ್‌ಗಳಲ್ಲಿ ವಾಸವಿದ್ದೇವೆ. ಇಲ್ಲಿನ ಸ್ಥಳೀಯ ಆಡಳಿತ ಸೈರನ್ ಮಾಡಿದರೆ ನಾವಿರುವ ಸ್ಥಳಕ್ಕೂ ಅಪಾಯ ಬಂದಿರುವುದಾಗಿ ಎಚ್ಚರಿಸಲಾಗಿದೆ ಎಂದು ಪ್ರಜ್ವಲ ಆತಂಕ ವ್ಯಕ್ತಪಡಿಸಿದರು.
ಕಳೆದ ನಾಲ್ಕು ವರ್ಷಗಳಿಂದ ವೆನಿಸ್ಟೀಯಾದಲ್ಲಿನ ಉತ್ತಮ ವ್ಯವಸ್ಥೆಯಿಂದ ವೈದ್ಯಕೀಯ ಕಲಿಕೆಯನ್ನು ನಿರಾತಂಕವಾಗಿ ಕಲಿತೆವು.ಆದರೆ, ಈಗ ಏಕಾಏಕಿ ಎದುರಾಗಿರುವ ಯುದ್ಧ ಸನ್ನಿವೇಶಗಳು, ನನ್ನಂತಹ ಭಾರತದ ಸಾವಿರಾರು ವಿದ್ಯಾರ್ಥಿಗಳಲ್ಲಿ ಆತಂಕ, ಭೀತಿ ಮೂಡಿಸಿವೆ. ತಾಯ್ನಾಡಿಗೆ ಮರಳುವೆವೋ ಎಂಬ ಕಾತುರದಲ್ಲಿ ಕಾಲ ದೂಡುತ್ತಿದ್ದೇವೆ ಎಂದರು.
ಇದನ್ನೂ ಓದಿ : ರಷ್ಯಾದೊಂದಿಗೆ ಮಾತುಕತೆಗೆ ಸಿದ್ಧ, ಆದರೆ.. :ಪಟ್ಟು ಬಿಡದ ಉಕ್ರೇನ್ ಅಧ್ಯಕ್ಷ
ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಗೆ ಸದ್ಯ ವಿಮಾನಯಾನಕ್ಕೆ ಅವಕಾಶವಿಲ್ಲ. ನಮ್ಮ ಸರದಿ ಯಾವಾಗ ಬರುವುದೋ ಕಾಯ್ದು ನೋಡಬೇಕು. ಕರ್ನಾಟಕ ಸರ್ಕಾರ (ಬಾಗಲಕೋಟೆ ಜಿಲ್ಲಾಡಳಿತ) ನಮ್ಮನ್ನು ಸಂಪರ್ಕಿಸಿದ್ದು, ಸದ್ಯದಲ್ಲಿಯೇ ನಮ್ಮೆಲ್ಲರನ್ನು ಸುರಕ್ಷಿತವಾಗಿ ಕರೆ ತರುವ ಭರವಸೆ ನೀಡಿದ್ದು ಅದಕ್ಕಾಗಿ ಕಾಯುತ್ತಿದ್ದೇವೆ ಎಂದು ಪ್ರಜ್ವಲ ತಿಳಿಸಿದರು.
ತಂದೆ ಪಟ್ಟಣದ ಗಣ್ಯವರ್ತಕ ಗಂಗಾಧರ ಘಟ್ಟದ ಮಾತನಾಡಿ, ಅಲ್ಲಿನ ಯುದ್ಧ ಪರಿಸ್ಥಿತಿ ನಮ್ಮ ಕುಟುಂಬದಲ್ಲೂ ಆತಂಕಕ್ಕೆ ಕಾರಣವಾಗಿದೆ. ಆದರೂ ಆತನ ಭವಿಷ್ಯದ ದೃಷ್ಟಿಯಿಂದ ಅಲ್ಲಿ ನ ಪರಿಸ್ಥಿತಿ ನೋಡಿಕೊಂಡು ಕರೆಸಿಕೊಳ್ಳುವ ನಿಲುವು ಹೊಂದಿದ್ದೇವೆ. ಸರ್ಕಾರಕ್ಕೂ ಈಗಾಗಲೇ ಮಾಹಿತಿ ನೀಡಿದ್ದೇವೆ. ಅವರಿಂದಲೂ ಸುರಕ್ಷಿತವಾಗಿ ಕರೆ ತರುವ ಭರವಸೆ ಸಿಕ್ಕಿದೆ ಎಂದರು.