ಕಾರ್ಕಳ: ಮನಮೆಚ್ಚುವಂತೆ, ಮಾಧವನನ್ನು ಮೆಚ್ಚಿಸುವಂತೆ ಶ್ರದ್ಧೆಯಿಂದ ಶಿಲ್ಪ ಕೆತ್ತನೆಯಲ್ಲಿ ತಲ್ಲೀನನಾಗುತ್ತಾನೋ ಆತನೇ ಶ್ರೇಷ್ಠ ಶಿಲ್ಪಿ ಎಂದು ಆನೆಗೊಂದಿ ಮಹಾಸಂಸ್ಥಾನದ ಶ್ರೀಮತ್ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ನುಡಿದರು.
ಅವರು ಶುಕ್ರವಾರ ಹೊಟೇಲ್ ಪ್ರಕಾಶ್‌ನ ಉತ್ಸವ ಸಭಾಂಗಣದಲ್ಲಿ ಕಾರ್ಕಳದ ವಿಜಯಶಿಲ್ಪ ಶಾಲೆಯಲ್ಲಿ ರಚನೆಯಾದ 10 ಶಿಲಾಪ್ರತಿಮೆಗಳನ್ನು ರಾಷ್ಟ್ರಪತಿ ಭವನಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಜ್ಞಾನ, ಗಣಿತ, ಧಾರ್ಮಿಕ ವಿಚಾರಗಳೆಲ್ಲವನ್ನೂ ಒಳಗೊಂಡಿದ್ದಲ್ಲಿ ಮಾತ್ರ ಸಾಂಪ್ರದಾಯಿಕ ಶಿಲ್ಪಿಯಾಗಲು ಸಾಧ್ಯ. ಕೆ. ಶಾಮರಾಯ ಆಚಾರ್ಯ ಅಂತಹ ಓರ್ವ ಶಿಲ್ಪಿ. ಅವರ ಪುತ್ರ ಸತೀಶ್ ಆಚಾರ್ಯ ಅವರೂ ಶಿಲ್ಪಕಲಾ ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತೋಷದ ವಿಚಾರವೆಂದು ಸ್ವಾಮೀಜಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಡಾ| ವೀರಪ್ಪ ಮೊಲಿ ಶಿಲಾಮೂರ್ತಿ ಹಸ್ತಾಂತರ ಕಾರ್ಯ ನೆರವೇರಿಸಿದರು. ಸರಕಾರದ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ, ಕಲಾವಿದ ವಿಠಲ್ ಭಂಡಾರಿ, ಕರಕುಶಲ ಇಲಾಖೆ ಅಭಿವೃದ್ಧಿ ಅಧಿಕಾರಿ ಅಫ್ಲಹ್ ಹಸನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಲ್ಪ ಗ್ರಾಮ ವಿಜಯ ಶಿಲ್ಪ ಶಾಲೆಯ ಶಿಲ್ಪಿ ಕೆ. ಸತೀಶ್ ಆಚಾರ್ಯ ಸ್ವಾಗತಿಸಿ, ಸುರೇಶ್ ಆಚಾರ್ಯ ನಿಟ್ಟೆ ಕಾರ್ಯಕ್ರಮ ನಿರೂಪಿಸಿದರು. ಅಭಿಷೇಕ್ ವಂದಿಸಿದರು.
ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಲಿ ಅವರು ಶಿಲ್ಪಕಲಾ ಅಕಾಡೆಮಿ ಸ್ಥಾಪಿಸಿ, ಜಕಣಾಚಾರಿ ಪ್ರಶಸ್ತಿ ಘೋಷಿಸಿ ಶಿಲ್ಪಕಲಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಶಾಸಕ ಸುನಿಲ್ ಕುಮಾರ್ ಅವರು ಕಾರ್ಕಳದಲ್ಲಿ ಜಕಣಾಚಾರಿ ಹೆಸರಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡುವಲ್ಲಿ ಸರಕಾರದ ಗಮನ ಸೆಳೆಯಬೇಕೆಂದು ಸ್ವಾಮೀಜಿ ಅಪೇಕ್ಷೆ ಪಟ್ಟರು.