ಬೆಂಗಳೂರು: ರಾಜ್ಯದಲ್ಲಿ ಮಲೇರಿಯಾ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆ ಸಫಲ ವಾಗಿದೆ. ಮಲೇರಿಯಾ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಸದ್ಯದಲ್ಲೇ ಮಲೇರಿಯಾ ಮುಕ್ತ ರಾಜ್ಯದ ಕನಸು ನನಸಾಗಲಿದೆ.
ಕೋವಿಡ್ ತುರ್ತು ಆರೋಗ್ಯ ಪರಿಸ್ಥಿತಿ ನಡುವೆ ಆರೋಗ್ಯ ಇಲಾಖೆ ಈ ಹಿಂದೆ ಮಲೇರಿಯಾ ನಿಯಂತ್ರಣಕ್ಕೆ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳಿಂದ ಮಲೇರಿಯಾ ಪ್ರಕರಣಗಳ ನಿಯಂತ್ರಣ ಸಾಧ್ಯವಾಗಿದೆ.
ರಾಜ್ಯದಲ್ಲಿ 1976ರಲ್ಲಿ 6.29ಲಕ್ಷ ಮಲೇರಿಯಾ ಪ್ರಕರಣಗಳು ವರದಿಯಾಗಿದ್ದರೆ 2003ರಲ್ಲಿ 1ಲಕ್ಷ ಪ್ರಕರಣಗಳು ವರದಿಯಾಗಿತ್ತು. 2021ರಲ್ಲಿ 888ಕ್ಕೆ ಇಳಿಕೆಯಾಗುವ ಮೂಲಕ 2025ರೊಳಗೆ ಮಲೇರಿಯಾ ಮುಕ್ತ ರಾಜ್ಯ ಗುರಿ ಸಾಧಿಸುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತಿದೆ.
ಮಲೇರಿಯಾ ಮುಕ್ತ ಜಿಲ್ಲೆ: 2021ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ, ಕೊಪ್ಪಳ, ಮೈಸೂರು ಜಿಲ್ಲೆಯಲ್ಲಿ ಶೂನ್ಯ ಮಲೇರಿಯಾ ಪ್ರಕರಣ ದಾಖಲಾಗಿದೆ. ಉಳಿದಂತೆ ಚಿಕ್ಕಮಗಳೂರು, ಕೊಡಗು, ಮಂಡ್ಯ, ಚಾಮರಾಜನಗರ, ಕಲಬುರಗಿ, ಬೀದರ್, ಬಳ್ಳಾರಿ, ಹಾವೇರಿ, ಗದಗ, ಧಾರವಾಡ, ಬಾಗಲಕೋಟೆ, ವಿಜಯಪುರ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು ನಗರದಲ್ಲಿ ಒಂದಂಕಿ ಪ್ರಕರಣ ದಾಖಲಾಗಿವೆ.
ಕಳೆದ 2 ವರ್ಷಗಳಿಗೆ ಹೋಲಿಸಿದರೆ 2021ರಲ್ಲಿ ಮೇಲಿನ ಜಿಲ್ಲೆಯಲ್ಲಿ ಪತ್ತೆಯಾದ ಮಲೇರಿಯಾ ಪ್ರಕರಣಗಳಲ್ಲಿ ಶೆ.80ರಷ್ಟು ಇಳಿಕೆಯಾಗಿದೆ. ಈ ಹಿಂದೆ ರಾಜ್ಯದ ಶೇ.80 ಮಲೇರಿಯಾ ಪ್ರಕರಣ ದಕ್ಷಿಣ ಕನ್ನಡ ಜಲ್ಲೆಯಲ್ಲಿ ಪತ್ತೆಯಾಗುತ್ತಿತ್ತು. 2019ರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಲ್ಲೆಗಳಲ್ಲಿ ಮಲೇರಿಯಾ ಪ್ರಕರಣಗಳ ಪ್ರಮಾಣ ಇಳಿಸಲು ಕೈಗೊಂಡ ಕ್ರಮಗಳಿಂದಾಗಿ 2020 ಹಾಗೂ 2021ರಲ್ಲಿ ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಶೇ.50ರಷ್ಟು ಮಲೇರಿಯಾ ಪ್ರಕರಣ ಇಳಿಕೆಯಾಗಿದೆ.
ರಾಜ್ಯದಲ್ಲಿ ಮಲೇರಿಯಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರದ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಮಾರ್ಗ ಸೂಚಿಯಂತೆ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುತ್ತಿದೆ. ಶೀಘ್ರ ಪತ್ತೆಗೆ ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಕಾರ್ಯ ಕರ್ತೆಯರು ಮನೆಮನೆಗೆ ಭೇಟಿ ನೀಡುವ ಮೂಲಕ ಜ್ವರ ಸಮೀಕ್ಷಾ ಹಾಗೂ ರಕ್ತಲೇಪನ ತೆಗೆಯುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಮಲೇರಿಯಾ ನಿಯಂತ್ರಣಕ್ಕೆ ಸಮುದಾಯಮಟ್ಟದಲ್ಲಿ ಜಾಗೃತಿ ಮೂಡಿಸಲಾಗಿದೆ.
-ಡಾ. ರಮೇಶ್ ಕೆ., ಜಂಟಿ ನಿರ್ದೇಶಕ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಆರೋಗ್ಯ ಇಲಾಖೆ