ದೇವನಹಳ್ಳಿ: ಟೈಲರ್ ಕ್ಷೇಮ ನಿಧಿ ಮಂಡಳಿ ರಚಿಸಿ, ಆ ಮೂಲಕ ಭವಿಷ್ಯನಿಧಿ ಮತ್ತು ಮಾಸಿಕ ಪಿಂಚಣಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ, ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್‌ನ ಜಿಲ್ಲಾ ಕ್ಷೇತ್ರ ಸಮಿತಿಯಿಂದ ನಗರದ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ವೇಳೆ ದೊಡ್ಡಬಳ್ಳಾಪುರ ಕ್ಷೇತ್ರ ಸಮಿತಿ ಅಧ್ಯಕ್ಷ ಕೆ.ಎಸ್.ಚಂದ್ರು ಮಾತನಾಡಿ, ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ಪುರುಷರು ಹೊಲಿಗೆ ಕೆಲಸವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆರ್ಥಿಕವಾಗಿ ಸದೃಢಗೊಳ್ಳಲು ಸರ್ಕಾರ ಯೋಜನೆ ರೂಪಿಸಬೇಕು. ರಾಜ್ಯ ಸರ್ಕಾರವು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿರಚಿಸಿರುವುದು ಸ್ವಾಗತಿಸುತ್ತೇವೆ. ಆದರೆ, ಹೊಲಿಗೆಯಂತ್ರದ ಮೂಲಕ ಜೀವನದ ಬದುಕು ಕಟ್ಟಿಕೊಂಡಿರುವ ಹಲವಾರು ಟೈಲರ್ ಗಳಿಗೆ ಯಾವುದೇ ಭದ್ರತೆ ಇಲ್ಲ ಎಂದರು.
ಪಿಂಚಣಿ ಜಾರಿಗೆ ಸರ್ಕಾರ ಮೀನಮೇಷ: ಪ್ರಮುಖ ಬೇಡಿಕೆಗಳಾದ ಭವಿಷ್ಯನಿಧಿ ಹಾಗೂ 60 ವರ್ಷ ತುಂಬಿದ ಟೈಲರ್‌ಗಳಿಗೆ ಮಾಸಿಕ ಪಿಂಚಣಿ ಜಾರಿ ಮಾಡುವಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿದೆ. ನಮ್ಮ ಸಂಘಟನೆಯು ರಾಜ್ಯ ಸಮಿತಿಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ರಾಜ್ಯದ ಹೆಚ್ಚಿನ ಪ್ರತಿನಿಧಿಗಳ ಒಕ್ಕೂರಲ ಕೂಗೂ ಕೂಡಲೇ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಮುಂದಾ ಗ ಬೇಕು ಎಂದು ಮನವಿ ಮಾಡಿದರು.
ಹೋರಾಟದ ಎಚ್ಚರಿಕೆ: ಪ್ರಧಾನ ಕಾರ್ಯದರ್ಶಿ ಪಿ.ಎಸ್. ವಾಮನರಾವ್ ಮಾತನಾಡಿ,ಸಮಾಜದ ಅತ್ಯುನ್ನತ ವೃತ್ತಿ ಮಾಡುವ ನಮಗೆ ಸ್ವಾತಂತ್ರ್ಯ ದೊರಕಿ 75ರ ಸಂಭ್ರಮದಲ್ಲಿದ್ದರೂ ನಮಗೆ ನ್ಯಾಯ ಸಿಕ್ಕಿಲ್ಲ. ನಮ್ಮ ನ್ಯಾಯೋಚಿತ ಹೋರಾಟಕ್ಕೆ ಸಮಾಜದ ಪ್ರತಿಯೋರ್ವಪ್ರಬುದ್ಧ ಜನತೆಯು ಸಂಪೂರ್ಣ ಸಹಕಾರ ನೀಡಿ ನಮ್ಮ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಬೇಡಿಕೆಯಲ್ಲಿ 7 ಅಂಶಗಳನ್ನು ನೀಡಲಾಗಿದೆ. ನಮ್ಮ ಈ ಹೋರಾಟಕ್ಕೆ ನ್ಯಾಯ ಸಿಗದ ಪಕ್ಷದಲ್ಲಿ ಉಗ್ರ ಹೋರಾಟವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದರು. ತಹಶೀಲ್ದಾರ್ ಎಚ್ .ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾ ಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ನ ದೊಡ್ಡಬಳ್ಳಾಪುರ ಸಮಿತಿಯ ಜಯಣ್ಣ, ನೆಲಮಂಗಲ ಸೋಮಶೇಖರ್, ನಾರಾಯಣ, ಎಂ. ಎಸ್.ನಂದೀಶ್, ಹೊಸಕೋಟೆ ರಾಧಮ್ಮ, ಚಂದ್ರ ಶೇಖರ್, ಶೋಭಾ ಮತ್ತಿತರರು ಇದ್ದರು.