ಬೆಂಗಳೂರು: ನಂಬಿದರೆ ನಂಬಿ ಬಿಟ್ಟರೆ ಬಿಡಿ ನಮ್ಮ ರಾಜ್ಯದಲ್ಲಿ ಇತ್ತಿಚಿಗೆ ನಡೆದಿದೆ ‘ಪಿಶಾಚಿನಿ ಮುಕ್ತಿ ಪೂಜೆ’. ಹೀಗೊಂದು ಪೂಜೆ ಇದೆ ಎಂದು ನಿಮಗೆ ಗೊತ್ತಿತ್ತೇ? ಇಲ್ಲವಾಗಿದ್ದಲ್ಲಿ ನೀವಿದನ್ನು ನಂಬಲೇ ಬೇಕು. ದೇಶದೆಲ್ಲೆಡೆ ಹೆಚ್ಚುತ್ತಿರುವ ಸ್ತ್ರೀಸ್ವಾತಂತ್ರ್ಯವಾದಕ್ಕೊಂದು ಮುಕ್ತಿಕೊಡುವ ನಿಟ್ಟಿನಲ್ಲಿ ‘ಸೇವ್ ಇಂಡಿಯನ್ ಫ್ಯಾಮಿಲಿ – ಕರ್ನಾಟಕ’ ಸಂಘಟನೆಯು ಸೆಪ್ಟಂಬರ್ 22ರಂದು ‘ಪಿಶಾಚಿನಿ ಮುಕ್ತಿ ಪೂಜೆ’ಯನ್ನು ಹಮ್ಮಿಕೊಂಡಿತ್ತು. ಅಚ್ಚರಿಯ ವಿಷಯವೆಂದರೆ 11ನೇ ಪುರುಷರ ವಾರ್ಷಿಕ ರಾಷ್ಟ್ರೀಯ ಸಮಾವೇಶದ ಸಂದರ್ಭದಲ್ಲಿ ಈ ‘ಪಿಶಾಚಿನಿ ಮುಕ್ತಿ ಪೂಜೆ’ಯನ್ನು ನಡೆಸುವ ನಿರ್ಣಯವನ್ನು ಕೈಗೊಳ್ಳಲಾಗಿತ್ತು.
ಈ ಪೂಜೆಯ ಪ್ರಮುಖ ವಿಧಿವಿಧಾನಗಳು ಕರ್ನಾಟಕದಲ್ಲಿ ನಡೆದಿದ್ದರೂ ದೇಶಾದ್ಯಂತ ಸುಮಾರು 50 ಕಡೆಗಳಲ್ಲಿ ಏಕಕಾಲದಲ್ಲಿ ಈ ಪೂಜೆ ನಡೆದಿರುವುದಾಗಿ ತಿಳಿದುಬಂದಿದೆ. ‘ಭಾರತೀಯ ಕುಟುಂಬಗಳನ್ನು ರಕ್ಷಿಸಿ’ ಎಂಬ ಶೀರ್ಷಿಕೆಯಲ್ಲಿ ಈ ಕಾರ್ಯಕ್ರಮ ನಡೆದಿದ್ದು ಹೋಮ ಕುಂಡದ ಮೂಲಕವೇ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿ ಈ ‘ಪಿಶಾಚಿ ಮುಕ್ತಿ ಹೋಮ’ವನ್ನು ನಡೆಸಲಾಗಿದೆ. ಮಾತ್ರವಲ್ಲದೇ ಈ ಸಂದರ್ಭದಲ್ಲಿ ಪಿಂಡ ಪ್ರಧಾನ ಕಾರ್ಯವನ್ನೂ ಸಹ ನಡೆಸಲಾಗಿರುವುದು ಇನ್ನೊಂದು ವಿಶೇಷ.
‘ನೀತಿಗೆಟ್ಟ ಆಧುನಿಕ ಭಾರತೀಯ ಮಹಿಳೆ’ ಎಂಬ ವಿಚಿತ್ರ ಹೆಸರಿನ ಫೇಸ್ಬುಕ್ ಪುಟದಲ್ಲಿ ಈ ಹೋಮ ನಡೆದಿರುವ ಕುರಿತಾಗಿ ಪತ್ರಿಕಾ ಪ್ರಕಟನೆಯೊಂದನ್ನು ಹೊರಡಿಸಲಾಗಿದೆ. ಇದರ ಬಳಿಕವೇ ಈ ‘ಪಿಶಾಚಿನಿ ಮುಕ್ತಿ ಪೂಜೆ’ ನಡೆದಿರುವ ಕುರಿತಾಗಿ ಬಾಹ್ಯ ಜಗತ್ತಿಗೆ ಮಾಹಿತಿ ಲಭಿಸಿತ್ತು. ಮತ್ತು ಈ ಫೊಸ್ಟ್ ಗೆ ಮಹಿಳೆಯರೂ ಸೇರಿದಂತೆ ಹಲವಾರು ನೆಟ್ಟಿಗರು ಖಾರವಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಇಷ್ಟು ಮಾತ್ರವಲ್ಲದೆ ‘ಎಸ್ ಭೋಸೇಕರ್’ ಎಂಬ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಈ ಪೂಜೆಯ ವಿಡಿಯೋ ತುಣುಕೊಂದನ್ನು ಸಹ ಹಂಚಿಕೊಳ್ಳಲಾಗಿದೆ. ಅಲ್ಲಿಗೆ ಕರ್ನಾಟಕದಲ್ಲಿ ‘ಪಿಶಾಚಿನಿ ಮುಕ್ತಿ ಪೂಜೆ’ ನಡೆದಿರುವುದಕ್ಕೆ ಪುರಾವೆ ಲಭಿಸಿದಂತಾಗಿದೆ. ಈ ಪೂಜೆಯಲ್ಲಿ ಪಿಂಡ ಪ್ರಧಾನ ಕ್ರಿಯೆ ನಡೆದಿರುವುದೂ ಸಹ ಇದೀಗ ಅಚ್ಚರಿಗೆ ಕಾರಣವಾಗಿದೆ. ಮಿ ಟೂ ಅಭಿಯಾನದ ಮುಕ್ತಿಗಾಗಿ ಈ ಪೂಜೆಯಲ್ಲಿ ಪಿಂಡ ಪ್ರಧಾನ ನೆರವೇರಿಸಲಾಗಿದೆ ಎಂದು ತಿಳಿದುಬಂದಿದೆ.
ಸಂಘಟನೆಯು ತನ್ನ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವಂತೆ ‘ದಿ ಸೇವ್ ಇಂಡಿಯನ್ ಫ್ಯಾಮಿಲಿ ಮೂಮೆಂಟ್’ ಎಂಬುದು ಕುಟುಂಬ ಬಾಂಧವ್ಯ ಮತ್ತು ಲಿಂಗ ಸಮಾನತೆಯಲ್ಲಿ ನಂಬಿಕೆ ಹೊಂದಿರುವ ಸುಮಾರು 40 ಸರಕಾರೇತರ ಸಂಸ್ಥೆಗಳ ಒಕ್ಕೂಟವಾಗಿದೆ. ಮಹಿಳಾವಾದಿ ಪಿಶಾನಿಗಳಿಂದ ತೊಂದರೆಯನ್ನನುಭವಿಸುತ್ತಿರುವ ಪುರುಷರಿಗೋಸ್ಕರ ಈ ಸಂಘಟನೆಯು ಸಹಾಯವಾಣಿಯೊಂದನ್ನೂ ಸಹ ನಡೆಸುತ್ತಿದೆ.