Advertisement

ರಾಜ್ಯ ಹಾಕಿಯಲ್ಲಿ ಪ್ರತಿಭಾ ಪಲಾಯನ!

08:11 AM Nov 30, 2017 | |

ಬೆಂಗಳೂರು: ಅದೊಂದು ಕಾಲವಿತ್ತು. ಕರ್ನಾಟಕದ ಆಟಗಾರರು ಭಾರತದ ಹಾಕಿ ತಂಡದಲ್ಲಿ ತುಂಬಿ ತುಳುಕುತ್ತಿದ್ದರು. ಅದೀಗ ಗತವೈಭವ ಮಾತ್ರ. ಈಗ ಕಾಲ ಬದಲಾಗಿದೆ. ಅಂತಾರಾಷ್ಟ್ರೀಯ ತಂಡದಲ್ಲಿ ರಾಜ್ಯದ ಆಟಗಾರರ ಸಂಖ್ಯೆ ಕುಸಿಯುತ್ತಿದೆ. ಇದಕ್ಕೆ
ಕಾರಣ ರಾಜ್ಯಮಟ್ಟದಲ್ಲಿ ಆಟಗಾರರನ್ನು ಬೆಳೆಸಲು, ಅವರ ನಿರುದ್ಯೋಗದ ಸಮಸ್ಯೆಯನ್ನು ಬಗೆಹರಿಸಲು ರಾಜ್ಯದಲ್ಲಿ ಸರ್ಕಾರವಾಗಲೀ, ಸಂಬಂಧಪಟ್ಟ ಬೇರೆ ಸಂಸ್ಥೆಗಳಾಗಲೀ ಗಮನ ಹರಿಸುತ್ತಿಲ್ಲ. ಇದರ ಪರಿಣಾಮ ರಾಷ್ಟ್ರೀಯ, ರಾಜ್ಯಮಟ್ಟದಲ್ಲಿ ಬೆಳಕಿಗೆ ಬರುವ ಪ್ರತಿಭೆಗಳು ಉದ್ಯೋಗವಿಲ್ಲದೇ ಒದ್ದಾಡುತ್ತಿವೆ. ದಿನೇ ದಿನೇ ಹಾಕಿಯನ್ನು ತೊರೆದು ಉದ್ಯೋಗ ಹುಡುಕಿಕೊಂಡು ಹೋಗುತ್ತಿದ್ದಾರೆ. ಹಾಕಿ ಕ್ರೀಡೆ ದುರ್ಬಲವಾಗುತ್ತಿದೆ.

Advertisement

ಹೊಟ್ಟೆ ಹೊರೆಯುವುದಕ್ಕಾಗಿ, ಬದುಕಿನ ಅನಿವಾರ್ಯತೆಗಾಗಿ ಈಗ ಹಾಕಿಯನ್ನೇ ಬಿಟ್ಟು ಖಾಸಗಿ ನೌಕರಿಯತ್ತ ಕೆಲವು ಹಾಕಿ ಪಟುಗಳು ವಲಸೆ ಹೋಗುತ್ತಿದ್ದಾರೆ. ಇದರಲ್ಲಿ ಹೆಚ್ಚಿನವರು ಪ್ರತಿಭಾವಂತರು. ಇದು ತೀವ್ರ ಆತಂಕಕ್ಕೆ ಕಾರಣವಾಗಿರುವ
ವಿಷಯ. ಇಂತಹದೊಂದು ಸ್ಫೋಟಕ ಸುದ್ದಿಯನ್ನು ಕರ್ನಾ ಟಕ ಹಾಕಿ ಸಂಸ್ಥೆ ಕಾರ್ಯದರ್ಶಿ ಎ.ಬಿ. ಸುಬ್ಬಯ್ಯ ಉದಯ ವಾಣಿಗೆ ತಿಳಿಸಿದ್ದಾರೆ.

ಪ್ರತಿಭಾವಂತ ಹಾಕಿ ಪಟುಗಳು ಖಾಸಗಿ ನೌಕರಿಗೆ ಹೋಗು ವುದನ್ನು ತಡೆಯುವುದು, ಕ್ರೀಡಾಕ್ಷೇತ್ರದಲ್ಲೇ ಮುಂದು ವರಿಸಿ ಕೊಂಡು ಹೋಗಲು ಅನುವು ಮಾಡಿಕೊಡುವುದು, ಜೀವನ ಕ್ಕೊಂದು ಭದ್ರತೆ ಕಲ್ಪಿಸಿ ಕೊಡುವುದು, ಇದೆಲ್ಲದರಲ್ಲೂ ರಾಜ್ಯ ಯುವ
ಸಬಲೀ ಕರಣ ಹಾಗೂ ಕ್ರೀಡಾ ಇಲಾಖೆ ಸಂಪೂರ್ಣ ವಿಫ‌ಲವಾಗಿರುವುದು ವಿಪರ್ಯಾಸವೇ ಸರಿ.

ಬರಡಾಗಲಿದೆ ಹಾಕಿ ತವರೂರು?: ಇಂದು ಹಾಕಿ ತವರೂರು ಎಂದೆನಿಸಿಕೊಂಡಿರುವ ಕರ್ನಾಟಕದಿಂದ ಹಾಕಿ ಪಟುಗಳೇ ತಯಾರಾಗುತ್ತಿಲ್ಲ. ಇದ್ದರೂ ಬೆರಳೆಣಿಕೆಯಷ್ಟು. ಇದು ಹೀಗೆಯೇ ಸಾಗಿದರೆ ಮುಂದೊಂದು ದಿನ ರಾಜ್ಯದಿಂದ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಯಾವೊಬ್ಬ ಆಟಗಾರನೂ ಇರುವುದಿಲ್ಲ. ರಾಜ್ಯದಲ್ಲಿ ಹಾಕಿ ಸಂಪೂರ್ಣವಾಗಿ ನೆಲಕಚ್ಚುವ ಭೀತಿ
ಇದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಈಗಾಗಲೇ ಅಂತಾ ರಾಷ್ಟ್ರೀಯ ತಂಡದಲ್ಲಿ ರಾಜ್ಯದ ಒಬ್ಬಿಬ್ಬರು ಮಾತ್ರ ಸಕ್ರಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ರಾಜ್ಯ ಸರ್ಕಾರವೇ ನೇರ ಹೊಣೆ: ಹಾಕಿ ಅಭಿವೃದ್ದಿಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಯುವಸಬಲೀಕರಣ ಉದ್ಯೋಗ ನೀಡುವಂತಹ ಯೋಜನೆ ಪ್ರಕಟಿಸಿಲ್ಲ. ಒಟ್ಟಾರೆ ರಾಜ್ಯದಲ್ಲಿ ಹಾಕಿ ಬೆಳವಣಿಗೆ ಕುಂಠಿತವಾಗಲು ರಾಜ್ಯ ಸರ್ಕಾರ ಒಂದು
ರೀತಿಯಲ್ಲಿ ಕಾರಣವಾಗಿದೆ. ಪರಿಣಾಮ ರಾಜ್ಯದಲ್ಲಿ ಇಂದು ಹಾಕಿ ಕುಸಿಯುತ್ತಿದೆ. ಇದನ್ನು ತಡೆಗಟ್ಟಲು ರಾಜ್ಯಾದ್ಯಂತ ವಿವಿಧ ಕಾರ್ಯಗಾರಗಳನ್ನು ಹಮ್ಮಿಕೊಂಡು ಪ್ರತಿಭಾಶೋಧ ನಡೆಸಬೇಕಿದೆ. 

Advertisement

ಕ್ಲಬ್‌ಗಳು ಬಂದಾಗಿರುವುದರಿಂದ ನಿರುದ್ಯೋಗ
ರಾಜ್ಯದಲ್ಲಿ ಉದ್ಯೋಗದ ಸಮಸ್ಯೆಗೆ ಕಾರಣ ಪ್ರಾಯೋಜಕರ ಕೊರತೆ. ಸರ್ಕಾರದ ದಿವ್ಯ ನಿರ್ಲಕ್ಷ್ಯ. ಹಾಕಿ ಕರ್ನಾಟಕ ಮುಖ್ಯವಾಗಿ ಪ್ರಾಯೋಜಕರ ಕೊರತೆ ಎದುರಿಸುತ್ತಿದೆ. ಹಿಂದೆ ಐಟಿಐ, ಎಚ್‌ ಎಎಲ್‌, ಕೋಸ್ಟಲ್‌ ಸೇರಿದಂತೆ ಪ್ರಮುಖ ಕ್ಲಬ್‌ಗಳು ಹಾಕಿ ಪಟುಗಳನ್ನು ಖರೀದಿಸುತ್ತಿದ್ದವು. ಇಂದು ಸುಮಾರು 8-10 ಕ್ಲಬ್‌ಗಳು ಬಾಗಿಲು ಮುಚ್ಚಿದೆ. ಇರುವುದರಲ್ಲಿ ಕೆಎಸ್‌ಪಿ (ಕರ್ನಾಟಕ
ಸ್ಟೇಟ್‌ ಪೊಲೀಸ್‌) ಏಕೈಕ ಹಾಗೂ ಅತ್ಯಂತ ಹಳೆಯ ಕ್ಲಬ್‌. ಆದರೆ ಅದು ಕೂಡ ಇತ್ತೀಚೆಗೆ ಹೊಸ ಆಟಗಾರರನ್ನು ತಂಡಕ್ಕೆ ಖರೀದಿ ಮಾಡುತ್ತಿಲ್ಲ. ಹಳೆ ಆಟಗಾರರೇ ಅಲ್ಲಿ ಈಗಲೂ ಆಡುವುದನ್ನು ಕಾಣಬಹುದಾಗಿದೆ. ಒಟ್ಟಾರೆ ಇದನ್ನೆಲ್ಲ ನೋಡುವುದಾದರೆ ರಾಜ್ಯ ಹಾಕಿಯಲ್ಲಿ ಹಲವಾರು ಸಮಸ್ಯೆಗಳಿವೆ ಎನ್ನುತ್ತಾರೆ ಏರ್‌ ಇಂಡಿಯಾ ಉದ್ಯೋಗಿ ರಾಜ್ಯದ ಹಾಕಿ ಆಟಗಾರ ವಿನಯ್‌. 

ಮಹಿಳಾ ಹಾಕಿ ಪಟುಗಳ ಸ್ಥಿತಿ ಶೋಚನೀಯ
ಕರ್ನಾಟಕ ಹಾಕಿ ಸಂಸ್ಥೆಯಡಿಯಲ್ಲಿ ಆಡಿ ರಾಜ್ಯ, ರಾಷ್ಟ್ರ ಮಟ್ಟಗಳಲ್ಲಿ ಪ್ರತಿನಿಧಿಸಿದ ನೂರಾರು ಹಾಕಿ ಪಟುಗಳಲ್ಲಿ ಸರ್ಕಾರಿ ನೌಕರಿ ಪಡೆದವರ ಸಂಖ್ಯೆ ಶೇ.10ಕ್ಕಿಂತಲೂ ಕಡಿಮೆ. ಇದರೊಳಗೆ ಕೆಲವರು ಖಾಸಗಿ ನೌಕರಿ ಪಡೆದುಕೊಂಡಿದ್ದಾರೆ. ಕೆಲವರು ಸರ್ಕಾರಿ ಉದ್ಯೋಗ ಸಿಗದ ಕಾರಣಕ್ಕೆ ಅರ್ಧದಲ್ಲೇ ಹಾಕಿಯನ್ನು ಬಿಟ್ಟಿದ್ದಾರೆ. ರಾಜ್ಯದ ಮಹಿಳಾ ಹಾಕಿ ಆಟಗಾರ್ತಿಯರಲ್ಲಿ ಶೇ.99ರಷ್ಟು ಮಂದಿಗೆ ಸರ್ಕಾರಿ ಉದ್ಯೋಗವಿಲ್ಲ. ರಾಜ್ಯದಲ್ಲಿ ಪುರುಷರ ಹಾಕಿಪಟುಗಳಿಗೆ ಹೋಲಿಸಿದರೆ ಮಹಿಳಾ ಹಾಕಿ ಪಟುಗಳ ಪರಿಸ್ಥಿತಿ ಶೋಚನೀಯವಾಗಿದೆ. ಸ್ವತಃ ಈ ಬಗ್ಗೆ ಎಬಿ ಸುಬ್ಬಯ್ಯ ಮಾತನಾಡಿ ಹೇಳಿದ್ದು ಹೀಗೆ: ಹಾಕಿ ಇಂಡಿಯಾಕ್ಕೆ ಆಡಿದ ಎಲ್ಲರಿಗೂ ಸರ್ಕಾರಿ ನೌಕರಿ ದೊರಕಿದೆ. ಆದರೆ ಕರ್ನಾಟಕ ತಂಡವನ್ನು ರಾಷ್ಟ್ರೀಯ ಕೂಟದಲ್ಲಿ ಪ್ರತಿನಿಧಿಸಿದವರಿಗೆ ಸರ್ಕಾರಿ ನೌಕರಿ ಸಿಕ್ಕಿರುವುದು ಕೆಲವರಿಗೆ ಮಾತ್ರ. ವರ್ಷದಲ್ಲಿ ಹಲವಾರು ಮಂದಿ ನಿರುದ್ಯೋಗಿಗಗಳಾಗುತ್ತಿದ್ದಾರೆ.

ಹಾಕಿ ಇಂಡಿಯಾಕ್ಕೆ ಆಡಿದ ಎಲ್ಲರಿಗೂ ಸರ್ಕಾರಿ ನೌಕರಿ ದೊರಕಿದೆ. ಆದರೆ ಕರ್ನಾಟಕ ತಂಡವನ್ನು ರಾಷ್ಟ್ರೀಯ ಕೂಟದಲ್ಲಿ ಪ್ರತಿನಿಧಿಸಿದ ಆಟಗಾರನಿಗೆ ಸರ್ಕಾರಿ ನೌಕರಿ ಸಿಕ್ಕಿರುವುದು ಕೆಲವರಿಗೆ ಮಾತ್ರ. ಮಹಿಳಾ ತಂಡದಲ್ಲಿ ಯಾರಿಗೂ ಸರ್ಕಾರಿ ಕೆಲಸ ಆಗಿಲ್ಲ. ವರ್ಷದಲ್ಲಿ ಹಲವಾರು ಮಂದಿ ನಿರುದ್ಯೋಗಿಗಗಳಾಗುತ್ತಿದ್ದಾರೆ.
 ● ಎ.ಬಿ.ಸುಬ್ಬಯ್ಯ, ಕರ್ನಾಟಕ ಹಾಕಿ ಸಂಸ್ಥೆ ಕಾರ್ಯದರ್ಶಿ

ಸುಮಾರು ಸಲ ರಾಜ್ಯವನ್ನು ರಾಷ್ಟ್ರೀಯ ಕೂಟದಲ್ಲಿ ಪ್ರತಿನಿಧಿಸಿದೆ. ಆದರೆ ಸರ್ಕಾರಿ ಉದ್ಯೋಗ ಸಿಗಲೇ ಇಲ್ಲ. ಬಳಿಕ
ಹೊಟ್ಟೆಪಾಡಿಗಾಗಿ ಖಾಸಗಿ ಕೆಲಸಕ್ಕೆ ಸೇರಿಕೊಂಡೆ. 

 ● ಹೆಸರುಹೇಳಲಿಚ್ಛಿಸದ ರಾಜ್ಯ ಹಾಕಿಪಟು

ಮಹಿಳಾ ಹಾಕಿ ಆಟಗಾರ್ತಿಯರಿಗೆ ರಾಜ್ಯದಲ್ಲಿ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ. ರಾಜ್ಯ ತಂಡ ಪ್ರತಿನಿಧಿಸಿದರೂ ನಮಗೆ
ಉದ್ಯೋಗ ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಕುಟುಂಬ ನಿರ್ವಹಣೆಗಾಗಿ ಹಾಕಿ ಬಿಡಬೇಕಾಗಿ ಬಂತು.

 ● ಹೆಸರು ಹೇಳಲಿಚ್ಛಿಸದ ಮಹಿಳಾ ಆಟಗಾರ್ತಿ 

ಹಾಕಿಯೆಂದರೆ ಕರ್ನಾಟಕ ಎನ್ನುವ ಒಂದು ಕಾಲವಿತ್ತು. ಕಾಲ ಚಲಿಸಿದಂತೆ ದೀಪದಲ್ಲಿ ಎಣ್ಣೆ ಖಾಲಿಯಾಗುತ್ತಿದೆ. ಬೆಳಕು ಮಂದವಾಗುತ್ತಿದೆ. ರಾಜ್ಯದಲ್ಲಿ ಹಾಕಿ ಪ್ರತಿಭೆಗಳ ಸಂಖ್ಯೆಯೇ ಕುಸಿಯುತ್ತಿದೆ. ಉದ್ಯೋಗವಿಲ್ಲದೇ ಆರ್ಥಿಕ ಅಭದ್ರತೆಗೆ ಸಿಲುಕಿ ಆಟಗಾರರು ಹಾಕಿಯಿಂದ ದೂರಾಗುತ್ತಿದ್ದಾರೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ರಾಜ್ಯ ಹಾಕಿಯ ಸಮಸ್ಯೆಗಳನ್ನು ಚಿತ್ರಿಸುವ ಸರಣಿ ಲೇಖನ ಇಂದಿನಿಂದ ಆರಂಭ.

 ● ಹೇಮಂತ್‌ ಸಂಪಾಜೆ 

Advertisement

Udayavani is now on Telegram. Click here to join our channel and stay updated with the latest news.

Next