Advertisement

ಸ‌ರಕಾರದ ಗೊಂದಲ: ಆಡಳಿತ ವ್ಯವಸ್ಥೆ ಹಳಿತಪ್ಪದಂತಿರಲಿ

12:42 AM Apr 02, 2021 | Team Udayavani |

ಸುಸ್ಥಿರ ಅಭಿವೃದ್ಧಿಗೆ ಸ್ಥಿರ ಮತ್ತು ಸುಗಮ ಆಡಳಿತ ಮೂಲ ಬುನಾದಿ. ಆಡಳಿತ ವ್ಯವಸ್ಥೆ ಸ್ಥಿರ ಮತ್ತು ಸುಗಮವಾಗಿ ಸಾಗಬೇಕಾದರೆ ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ಪ್ರಜ್ಞಾಪೂರ್ವಕ ಸಮನ್ವಯ ಇರಬೇಕು. ಶಾಸಕಾಂಗ ಎಷ್ಟು ಜಾಗೃತವಾಗಿರುತ್ತದೋ  ಕಾರ್ಯಾಂಗ ಅಷ್ಟೇ ಚುರುಕುತನದಿಂದ ಕೆಲಸ ಮಾಡುತ್ತದೆ. ಆದರೆ ಕೊರೊನಾ 2ನೇ ಅಲೆ, ಉಪ ಚುನಾವಣೆ, ಸಿ.ಡಿ. ಪ್ರಕರಣ, ಮುಖ್ಯಮಂತ್ರಿಯವರು ತಮ್ಮ ಇಲಾ ಖೆ ಯ ಲ್ಲಿ ಹಸ್ತಕ್ಷೇಪ ಮಾಡಿ ದ್ದಾರೆ ಎಂಬ ಆರೋ ಪದ ಕಾರ ಣ ದಿಂದಾಗಿ ಸಚಿವರೊಬ್ಬರ ಬಂಡಾಯ ಮತ್ತು ಇದರ ಸುತ್ತ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ಆಡಳಿತದ ಮೇಲಿನ ಸರಕಾರದ ನಿಯಂತ್ರಣ ಸಡಿಲಗೊಳ್ಳುವ ಲಕ್ಷಣಗಳು ದಟ್ಟವಾಗುತ್ತಿವೆ.

Advertisement

ಸರಕಾರದ ಹಂತದಲ್ಲಿನ ಗೊಂದಲಗಳು, ಅಸ್ಥಿರ ವಾತಾವರಣ ಯಾವತ್ತೂ ಅಧಿಕಾರಶಾಹಿ ವರ್ಗಕ್ಕೆ “ವರದಾನ’ ಇದ್ದಂತೆ. ಇದನ್ನು ಎಲ್ಲ ಅಧಿಕಾರಿಗಳಿಗೆ ಅನ್ವಯಿಸಿ ನೋಡುವುದು ಎಷ್ಟು ಸಮಂಜಸ ಅಲ್ಲವೋ ಇಂತಹ ಸಂದರ್ಭವನ್ನು ಬಹುತೇಕ ಅಧಿಕಾರಿಗಳು ತಮ್ಮ “ಪುರುಸೂತ್ತಿನ’ ಕಾಲವಾಗಿ ಬಳಸಿಕೊಳ್ಳುತ್ತಾರೆ ಅನ್ನುವುದು ಅಷ್ಟೇ ಸಮಂಜಸ ಮಾತು. ರಾಜಕೀಯ ಮತ್ತು ಸರಕಾರದಲ್ಲಿನ ಸದ್ಯದ ವಿದ್ಯಮಾನಗಳು ಅಧಿಕಾರಿಗಳ ಪಾಲಿಗೆ “ಕೆಲಸ ಸಹಿತ ರಜೆ’ ಎಂಬಂತೆ ಮಾಡಿದೆ ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ. ಮುಖ್ಯವಾಗಿ ಸರಕಾರದ ತೀರ್ಮಾನಗಳನ್ನು ಕೆಳ ಹಂತಕ್ಕೆ ಕೊಂಡೊಯ್ಯಬೇಕಾದ ಸಚಿವಾಲಯ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳು ಕಾಲ ಸಾಗ ಹಾಕುವ ಸ್ಥಿತಿಯಲ್ಲಿರುವಂತೆ ಕಾಣುತ್ತದೆ.

ಹೇಳಿ-ಕೇಳಿ ಇದು ಬಜೆಟ್‌ ವರ್ಷದ ಆರಂಭ. ಎಪ್ರಿಲ್‌ 1ರಿಂದ ಹೊಸ ಬಜೆಟ್‌ ಅನುಷ್ಠಾನ ಪ್ರಾರಂಭವಾಗುತ್ತದೆ. ಇದೇ ಹೊತ್ತಲ್ಲಿ ಸರಕಾರ ಬೇರೆ ವಿದ್ಯಮಾನಗಳನ್ನು ನಿಭಾಯಿಸುವ ಅನಿವಾರ್ಯಕ್ಕೆ ಸಿಲುಕಿಕೊಂಡರೆ ಸಹ ಜವಾಗಿ ಆಡಳಿತ ಮತ್ತು ಅಭಿವೃದ್ಧಿಯ ವೇಗಕ್ಕೆ ತಡೆ ಬೀಳುತ್ತದೆ. ಆರ್ಥಿಕ ವರ್ಷದ ಮೊದಲ ಮೆಟ್ಟಿಲು ಹತ್ತಬೇಕಾದ ಸಮಯದಲ್ಲಿ ಸರಕಾರಕ್ಕೆ ಅಡೆ-ತಡೆಗಳು ಎದುರುಗೊಂಡರೆ, ಅದರ ಪರಿಣಾಮಗಳನ್ನು ಇಡೀ ಆರ್ಥಿಕ ವರ್ಷ ಎದುರಿಸಬೇಕಾಗುತ್ತದೆ. ಆದ್ದರಿಂದ ಸರಕಾರ ತತ್‌ಕ್ಷಣ ಎಚ್ಚೆತ್ತುಕೊಳ್ಳಲೇ ಬೇಕು. ಆಡಳಿತದ ಮೇಲಿನ ನಿಯಂತ್ರಣ ಬಿಗಿಗೊಳಿಸಿ ಕಾರ್ಯಾಂಗಕ್ಕೆ ಕೆಲಸ ನೀಡಬೇಕು. ಜನರ ಆಶಯಗಳಿಗೆ ಸ್ಪಂದಿಸುವ ಕೆಲಸ ತುರ್ತಾಗಿ ಆಗಬೇಕು. ಕೊರೊನಾ ಮಾಹಾಮಾರಿಯ ಎರಡನೇ ಅಲೆ ಸರಕಾರದ ಮುಂದೆ ಹೊಸ ಸವಾಲುಗಳನ್ನು ತಂದೊಡ್ಡಿದೆ.

ಮೂರು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪ ಚುನಾವಣೆಗಳ ಕಾರಣಕ್ಕೆ ಚುನಾವಣ ನೀತಿ ಸಂಹಿತೆ ನೆಪದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಒಂದಿಷ್ಟು ಹಿನ್ನಡೆ ಆಗಿದೆ.  ಶಾಸಕ ರಮೇಶ್‌ ಜಾರಕಿಹೊಳಿಯವರ ಸಿ.ಡಿ.ಪ್ರಕರಣ, ಇದರ ನಡುವೆ ಸ್ವತಃ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಹಸ್ತಕ್ಷೇಪದ ವಿರುದ್ಧ ಅವರದೇ ಸಂಪುಟದ ಹಿರಿಯ ಸಚಿವ ಕೆ.ಎಸ್‌. ಈಶ್ವರಪ್ಪ ಬಂಡಾಯ ಎದ್ದು ರಾಜ್ಯಪಾಲರು ಮತ್ತು ಬಿಜೆಪಿ ಹೈಕಮಾಂಡ್‌ಗೆ ದೂರು ಕೊಟ್ಟಿದ್ದು ಆಡಳಿತ ಪಕ್ಷ ಮತ್ತು ಖುದ್ದು ಮುಖ್ಯಮಂತ್ರಿಯವರನ್ನು ನೈತಿಕವಾಗಿ ಕುಗ್ಗಿಸಿದೆ. ಈ ವಿಚಾರಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಸರಕಾರವನ್ನು “ಘೆರಾವ್‌’ ಮಾಡುತ್ತಿವೆ. ಆಡಳಿತ ಮತ್ತು ವಿಪಕ್ಷ ಪರಸ್ಪರ ಕಚ್ಚಾಟದಲ್ಲಿ ತೊಡಗಿಸಿಕೊಂಡಿರುವಾಗ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಕಾರ್ಯಾಂಗವನ್ನು ಸಜ್ಜುಗೊಳಿಸುವುದು ಯಾರು? ಇದು ಅಧಿಕಾರಿ ವರ್ಗದ “ಸ್ವೇಚ್ಛೆ’ ಮತ್ತು “ಜಾಣಮರೆವು’ಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಈ ಎಲ್ಲ ಬೆಳವಣಿಗೆಗಳು ಆಡಳಿತ ವ್ಯವಸ್ಥೆ  ಹಾದಿ ತಪ್ಪುವಂತೆ ಮಾಡುತ್ತಿವೆ.  ಹೀಗಾಗಿ ಸರಕಾರವೂ ಸಮನ್ವಯದಿಂದ ಕೆಲಸ ಮಾಡಲಿ.

Advertisement

Udayavani is now on Telegram. Click here to join our channel and stay updated with the latest news.

Next