Advertisement

ಆರ್ಥಿಕ ಅಭಿವೃದ್ಧಿಗೆ ಬೂಸ್ಟರ್‌ ಡೋಸ್‌; ಖಾಸಗಿ, ಕೇಂದ್ರದ ಸಹಯೋಗದಲ್ಲಿ ಕಾರ್ಯಕ್ರಮ

01:23 AM Mar 05, 2022 | Team Udayavani |

ಕೋವಿಡ್‌ ಮಹಾಮಾರಿ ಸೇರಿ ರಾಜ್ಯ ದಲ್ಲಿ ಹಲವು ಕಾರಣಗಳಿಂದ ಮಂಕಾದ ಆರ್ಥಿಕತೆಗೆ ಪೂರಕವಾಗಿ ವಿವಿಧ ಅಭಿವೃದ್ಧಿ ಯೋಜನೆಗಳ ಮೂಲಕ ಉತ್ತೇಜನ ನೀಡುವಲ್ಲಿ ಮುಖ್ಯ ಮಂತ್ರಿ ಬಸ ವ ರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಯತ್ನಿಸಿದ್ದಾರೆ. ಇದಕ್ಕಾಗಿ ಕೆಲವೆಡೆ ಖಾಸಗಿ ಸಹಭಾಗಿತ್ವ ಮತ್ತೆ ಹಲವೆಡೆ ಕೇಂದ್ರದ ಸಹಯೋಗದಲ್ಲಿ ಹತ್ತಾರು ಕಾರ್ಯಕ್ರಮಗಳನ್ನು ಪ್ರಕಟಿಸಿದ್ದಾರೆ.

Advertisement

ಈ ನಿಟ್ಟಿನಲ್ಲಿ ಹೈಸ್ಪೀಡ್‌ ರೈಲು ಒಳಗೊಂಡಂತೆ ರೈಲು ಮಾರ್ಗಗಳು ಮತ್ತು ಹೆದ್ದಾರಿಗಳ ಅಭಿವೃದ್ಧಿ, ಮಾದರಿ ನವನಗರಗಳ ನಿರ್ಮಾಣ, ಇಂಧನ ಬಲವರ್ಧನೆ, ಬಂದರುಗಳ ವಿಸ್ತರಣೆ, ಜವಳಿ ಪಾರ್ಕ್‌, ಸೆಮಿಕಂಡಕ್ಟರ್‌ ತಯಾರಿಕೆಗೆ ಹೂಡಿಕೆದಾರರ ಆಕರ್ಷಣೆ, ಬೆಂಗಳೂರಿನಾಚೆಗೆ ಸ್ಟಾರ್ಟ್‌ಅಪ್‌ ಪ್ರೋತ್ಸಾಹ ಮತ್ತು ಕರ್ನಾಟಕ ಎಕ್ಸಿಲರೇಷನ್‌ ನೆಟ್‌ವರ್ಕ್‌ ಸ್ಥಾಪನೆಯಂತಹ ಹೊಸ ಪ್ರಯೋಗಗಳಿಗೆ ಸರಕಾರ ನಿರ್ಧರಿಸಿದೆ.

ನವಕರ್ನಾಟಕದ ಪರಿಕಲ್ಪನೆಯಲ್ಲಿ ನವನಗರಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ನವನಗರಗಳು ಪ್ರತಿ ಕಂದಾಯ ವಿಭಾಗಗಳಿಗೆ ತಲಾ ಒಂದು ಆಯ್ಕೆ ಮಾಡಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಹೀಗೆ ಆಯ್ಕೆಯಾದ ನಗರಗಳಲ್ಲಿ ಮೂಲ ಸೌಲಭ್ಯ, ವಸತಿ, ಶಿಕ್ಷಣ, ಆರೋಗ್ಯ, ವಾಣಿಜ್ಯ ಕೈಗಾರಿಕಾ ಪ್ರದೇಶ ಗಳನ್ನು ವಿಶೇಷವಾಗಿ ಅಳವಡಿಸಿ, ಭವಿಷ್ಯದ ನಗರಗಳನ್ನಾಗಿ ರೂಪಿಸಲಾಗುವುದು. ಇದಕ್ಕಾಗಿ ಅಂತಾರಾಷ್ಟ್ರೀಯ ನಗರ ಯೋಜನಾ ಪರಿಣಿತರ ನೆರವು ಪಡೆಯಲು ನಿರ್ಧರಿಸಲಾಗಿದೆ. ಇದು ಮುಖ್ಯಮಂತ್ರಿಗಳು ಈ ಹಿಂದೆ ಆಗಾಗ್ಗೆ ಹೇಳುತ್ತಿದ್ದ “ನವಕರ್ನಾಟಕದಿಂದ ನವಭಾರತ ನಿರ್ಮಾಣ’ ಧ್ಯೇಯಕ್ಕೆ ಪೂರಕ ಯೋಜನೆ ಆಗಿದೆ.

ರಾಜ್ಯದಲ್ಲಿ ವಾಯುಮಾರ್ಗ ಸಂಪರ್ಕ ವ್ಯವಸ್ಥೆ ಬಲಪಡಿಸಲು ರಾಜ್ಯದ ಪ್ರವಾಸಿ ತಾಣಗಳಲ್ಲಿ ಮತ್ತದೇ ಖಾಸಗಿ ಸಹಭಾಗಿತ್ವದಲ್ಲಿ ಹೆಲಿಪೋರ್ಟ್‌ಗಳನ್ನು ನಿರ್ಮಿಸುವುದಾಗಿ ಘೋಷಿಸಲಾಗಿದೆ. ಮಡಿಕೇರಿ, ಚಿಕ್ಕಮಗಳೂರು, ಹಂಪಿಯಲ್ಲಿ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಈ ಹೆಲಿಪೋರ್ಟ್‌ಗಳನ್ನು ಅಭಿವೃದ್ಧಿಪಡಿಸ ಲಾಗುತ್ತಿದೆ. ಇದಲ್ಲದೆ, ಕೇಂದ್ರದ ನೆರವಿನಲ್ಲಿ ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಿಸಲಾಗುವುದು. ಜತೆಗೆ ದಾವಣಗೆರೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳ ಸ್ಥಾಪನೆಗೆ ಕಾರ್ಯಸಾಧ್ಯತಾ ವರದಿ ತಯಾರಿಸಲು ತೀರ್ಮಾನಿಸಲಾಗಿದೆ. ಅಷ್ಟೇ ಅಲ್ಲ, ರಾಯಚೂರಿನಲ್ಲಿ ಸುಮಾರು 186 ಕೋಟಿ ರೂ. ವೆಚ್ಚದಲ್ಲಿ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣ ನಿರ್ಮಿಸಲಾಗುವುದು. ಜಿಲ್ಲಾ ಖನಿಜ ನಿಧಿ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಆರ್ಥಿಕ ನೆರವಿನಲ್ಲಿ ಇದನ್ನು ಕೈಗೆತ್ತಿಕೊಳ್ಳುತ್ತಿದ್ದು, ಈ ಸಂಬಂಧ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ.

ವಿಶೇಷ ಹೂಡಿಕೆ ಅಧಿನಿಯಮ ರಚನೆ: ರಾಜ್ಯದಲ್ಲಿ ದೊಡ್ಡ ಗಾತ್ರದ ಹೂಡಿಕೆ ಪ್ರದೇಶಗಳು ಮತ್ತು ಕೈಗಾರಿಕಾ ವಸಾಹತುಗಳ ಸ್ಥಾಪನೆ, ಕಾರ್ಯಾಚರಣೆ, ನಿಯಂತ್ರಣ ಹಾಗೂ ನಿರ್ವಹಣೆಗಾಗಿ “ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ’ ರಚಿಸಲು ಉದ್ದೇಶಿಸಿದ್ದು, ಈ ಪೈಕಿ ಆರಂಭದಲ್ಲಿ ತುಮಕೂರು ಮತ್ತು ಧಾರವಾಡ ಜಿಲ್ಲೆಗಳಲ್ಲಿ ಅಧಿಸೂಚಿಸಲಾಗುವುದು. ಇದರಿಂದ ಎರಡನೇ ಹಂತದ ನಗರಗಳಲ್ಲಿ ಬಂಡವಾಳ ಹರಿದುಬರಲಿದೆ.
ಚಿನ್ನ ಮತ್ತು ಆಭರಣದ ಕುಶಲಕರ್ಮಿಗಳ ಹಾಗೂ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಲಿಂಕೇಜ್‌ ಸೌಲಭ್ಯ ಒದಗಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಮೆಗಾ ಜ್ಯುವೆಲರಿ ಪಾರ್ಕ್‌ ಸ್ಥಾಪಿಸಲಾಗುವುದು. ಇದರಿಂದ ಸುಮಾರು ಹತ್ತು ಸಾವಿರ ಜನರಿಗೆ ಉದ್ಯೋಗಾವಕಾಶ ಲಭಿಸಲಿದೆ. ಬೀದರ್‌ನಲ್ಲಿ ಕೇಂದ್ರದ ಸಹಯೋಗದಲ್ಲಿ 90 ಕೋಟಿ ರೂ. ವೆಚ್ಚದಲ್ಲಿ ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್ ಪೆಟ್ರೋಕೆಮಿಕಲ್ಸ್‌ ಎಂಜಿನಿಯರಿಂಗ್‌ ಹಾಗೂ ಟೆಕ್ನಾಲಜಿ ಕೇಂದ್ರ (ಸಿಐಪಿಇಟಿ) ಆರಂಭಿಸಲು ಉದ್ದೇಶಿಸಲಾಗಿದೆ. ಧಾರವಾಡದಲ್ಲಿ ಎಫ್ಎಂಸಿಜಿ ಕ್ಲಸ್ಟರ್‌ ಅಭಿವೃದ್ಧಿಪಡಿಸಿ, ಇದರಲ್ಲಿ ಬರುವ ಕೈಗಾರಿಕೆಗಳಿಗೆ ವಿಶೇಷ ಪ್ರೋತ್ಸಾಹಕ ಪ್ಯಾಕೇಜ್‌ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಜೆಟ್‌ನಲ್ಲಿ ತಿಳಿಸಿದ್ದಾರೆ.

Advertisement

ಯೋಜನೆಗಳಲ್ಲ; ಬರೀ ಪ್ರಸ್ತಾವನೆಗಳು!: ಕೇಂದ್ರವು ಈಗಾಗಲೇ 460 ಕಿ.ಮೀ. ಉದ್ದದ ಚೆನ್ನೈ-ಬೆಂಗಳೂರು- ಮೈಸೂರು ಹೈಸ್ಪೀಡ್‌ ರೈಲು ಕಾರಿಡಾರ್‌ ಅನುಷ್ಠಾನಕ್ಕಾಗಿ ರಾಜ್ಯ ಸರಕಾರವು ಕೇಂದ್ರದೊಂದಿಗೆ ಕೈಜೋಡಿಸಲಿದೆ. ಜತೆಗೆ 55 ಕಿ.ಮೀ. ಉದ್ದದ ಗದಗ-ಯಲವಿಗಿ ನೂತನ ರೈಲು ಮಾರ್ಗ ಯೋಜನೆಯನ್ನು 640 ಕೋಟಿ ರೂ. ಅಂದಾಜು ವೆಚ್ಚದಲ್ಲಿ ರಾಜ್ಯ ಸರಕಾರದಿಂದ ಭೂಸ್ವಾಧೀನ ವೆಚ್ಚ ಭರಿಸಿ, ಜಾರಿಗೊಳಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

ಉತ್ತರ ಕನ್ನಡದ ಕೇಣಿ-ಬೇಲೆಕೇರಿಯಲ್ಲಿ ಗ್ರೀನ್‌ಫೀಲ್ಡ್‌ ಬಂದರು ಅಭಿವೃದ್ಧಿಗೆ ಪ್ರಸ್ತಾಪಿಸಲಾಗಿದೆ. ಮೊದಲ ಬಾರಿಗೆ ರಾಜ್ಯ ಮತ್ತು ಕೇಂದ್ರ ಸಂಬಂಧಿತ ಸಂಸ್ಥೆಗಳ ಸಹಯೋಗದಲ್ಲಿ ಕಾರವಾರದಲ್ಲಿ ಜಲಸಾರಿಗೆ ಮತ್ತು ಮೀನುಗಾರಿಕೆ ತರಬೇತಿ ಸಂಸ್ಥೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಜತೆಗೆ ಬೈಂದೂರು ಮತ್ತು ಮಲ್ಪೆ ಪ್ರದೇಶಗಳಲ್ಲಿ ವಿವಿಧೋದ್ದೇಶ ಬಂದರುಗಳನ್ನು ನಿರ್ಮಿಸಲು ಕಾರ್ಯಸಾಧ್ಯತಾ ವರದಿ ತಯಾರಿಕೆಗೆ ತೀರ್ಮಾನಿಸಲಾಗಿದೆ.

ಈ ಮಧ್ಯೆ ಕರಾವಳಿ ಪ್ರದೇಶದಲ್ಲಿ ಬಂದರು ಅಭಿವೃದ್ಧಿ ಮತ್ತು ಕಡಲತೀರದ ವ್ಯಾಪಾರಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಲು ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಕೇಂದ್ರವು ಕೈಗೆತ್ತಿಕೊಂಡ 1,880 ಕೋಟಿ ರೂ. ವೆಚ್ಚದ ಸಾಗರಮಾಲಾ ಯೋಜನೆ ಅಡಿ 24 ಯೋಜನೆಗಳನ್ನು ಕೈಗೊಳ್ಳುತ್ತಿದೆ. ಇದರ ಅಡಿ ಕಾರವಾರ ಬಂದರಿನ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಪ್ರಧಾನಮಂತ್ರಿ ಮತ್ಸé ಸಂಪದ ಯೋಜನೆಯಡಿ 250 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಮೀನುಗಾರಿಕಾ ಬಂದರನ್ನು ನಿರ್ಮಿಸಲು ಪ್ರಸ್ತಾವಿಸಲಾಗಿದೆ.

ಸಾವಿರ ಕೆರೆಗೆ
ನೂರು ಕೋಟಿ ರೂ.
ರಾಜ್ಯದ 33 ಸಾವಿರ ಗ್ರಾಪಂ ಕೆರೆಗಳನ್ನು ಸಮೀಕ್ಷೆ ಮಾಡಿ, ಪ್ರಸ್ತುತ ಆರಂಭಿಕ ಹಂತವಾಗಿ ಸಾವಿರ ಕೆರೆಗಳನ್ನು ಗುರುತಿಸಲಾಗಿದೆ. ಹೀಗೆ ಆಯ್ಕೆಯಾದ ಪ್ರತಿ ಕೆರೆಯನ್ನು ತಲಾ ಹತ್ತು ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ನೂರು ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇದಲ್ಲದೆ, ಕೋವಿಡ್‌ ಸಂದರ್ಭದಲ್ಲಿ ರಾಜ್ಯದ 2,814 ಗ್ರಾಪಂಗಳಿಗೆ ಆರೋಗ್ಯ ಕಿಟ್‌ ವಿತರಿಸಲು ಪಂಚಾಯತ್‌ ಆರೋಗ್ಯ ಕಿಟ್‌ ವಿತರಿಸುವ ಪಂಚಾಯತ್‌ ಆರೋಗ್ಯ ಯೋಜನೆಯನ್ನು ಉಳಿದ 3,146 ಗ್ರಾಪಂಗಳಿಗೂ ವಿಸ್ತರಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

2 ವರ್ಷಗಳಲ್ಲಿ 25
ಲಕ್ಷ ನಲ್ಲಿ ಸಂಪರ್ಕ
ಜಲಜೀವನ್‌ ಮಿಷನ್‌ ಅಡಿ ಮುಂದಿನ ಎರಡು ವರ್ಷಗಳಲ್ಲಿ ತಲಾ 25 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲು ಸರಕಾರ ಉದ್ದೇಶಿಸಿದೆ. 2024ರ ಒಳಗೆ ದೇಶದ ಎಲ್ಲ ಗ್ರಾಮೀಣ ಮನೆಗಳಿಗೆ ನಲ್ಲಿ ಸಂಪರ್ಕದ ಮೂಲಕ ಕುಡಿಯುವ ನೀರು ಒದಗಿಸುವ ಜಲಜೀವನ್‌ ಮಿಷನ್‌ ಜಾರಿಯಲ್ಲಿದೆ. ಇದರಡಿ ಈವರೆಗೆ ರಾಜ್ಯದಲ್ಲಿ 3,592 ಕೋಟಿ ವೆಚ್ಚದಲ್ಲಿ 21.28 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿದ್ದು, 2022-23ನೇ ಸಾಲಿನಲ್ಲಿ ಏಳು ಸಾವಿರ ಕೋಟಿ ವೆಚ್ಚದ ಗುರಿ ಹೊಂದಲಾಗಿದೆ.

ಮುಖ್ಯಾಂಶಗಳು
1. ಧಾರವಾಡದ ನವಲಗುಂದ, ಹಾವೇರಿಯ ರಾಣೆಬೆನ್ನೂರಿನಲ್ಲಿ ಪಿಪಿಪಿಯಲ್ಲಿ ಜವಳಿ ಪಾರ್ಕ್‌. 5 ಸಾವಿರ ಜನರಿಗೆ ಉದ್ಯೋಗ ನಿರೀಕ್ಷೆ
2.ಬಳ್ಳಾರಿಯಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌ ಆರಂಭಿಸಲು ತೀರ್ಮಾನ
3.ಕಲಬುರಗಿ ಮತ್ತು ವಿಜಯಪುರದಲ್ಲಿ ಮೆಗಾಟೆಕ್ಸ್‌ಟೈಲ್‌ ಪಾರ್ಕ್‌ಗೆ ಪ್ರಸ್ತಾವನೆ
4.ರಾಜ್ಯದ 8 ಜಿಲ್ಲೆಗಳಲ್ಲಿ ಪಿಪಿಪಿಯಲ್ಲಿ ಸುಮಾರು 5 ಸಾವಿರ ಮೆ.ವಾ. ಸಾಮರ್ಥ್ಯದ ಹೈಬ್ರಿಡ್‌ ಪಾರ್ಕ್‌ ಸ್ಥಾಪನೆಗೆ ಸಂಬಂಧಿಸಿದಂತೆ ಸಾಧ್ಯಾಸಾಧ್ಯತೆಗಳ ಪರಿಶೀಲನೆ
5.ರಾಷ್ಟ್ರೀಯ ಗ್ರೀನ್‌ ಹೈಡ್ರೋಜನ್‌ ಮಿಷನ್‌ ನೀತಿಗೆ ಪೂರಕವಾಗಿ ರಾಜ್ಯದಲ್ಲಿ ಗ್ರೀನ್‌ ಹೈಡ್ರೋಜನ್‌ ನೀತಿ ರೂಪಿಸುವ ಉದ್ದೇಶ.

Advertisement

Udayavani is now on Telegram. Click here to join our channel and stay updated with the latest news.

Next