Advertisement

ಧಾರ್ಮಿಕ ದತ್ತಿ ಇಲಾಖೆಯಿಂದ ಮುಕ್ತಿ

12:58 AM Mar 05, 2022 | Team Udayavani |

ಸರಕಾರದ ನಿಯಂತ್ರಣದಲ್ಲಿರುವ ರಾಜ್ಯದ ದೇವಾಲಯಗಳನ್ನು ಮುಕ್ತಗೊಳಿಸಬೇಕು. ಸ್ವಂತತ್ರ್ಯವಾಗಿ ಕಾರ್ಯನಿರ್ವಹಿಸಲು ಅವಕಾಶ ಕೊಡಬೇಕು ಎಂಬ ಬಹುಚರ್ಚಿತ ವಿಷಯ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದೇವಾಲಯಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತ ಗೊಳಿಸಲು ವಿಶೇಷ ಯೋಜನೆ ರೂಪಿಸುವುದಾಗಿ ಹೇಳಿದ್ದಾರೆ.

Advertisement

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಾಲಯಗಳಿಗೆ ಸ್ವಾಯತ್ತತೆ ನೀಡಿ, ಅಭಿವೃದ್ಧಿ ಕಾಮಗಾರಿಗಳ ವಿವೇಚನೆಯನ್ನು ದೇವಾಲಯಗಳಿಗೆ ಪ್ರತ್ಯಾಯೋಜಿಸಲು(ಅಧಿಕಾರ) ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ನೌಕರರಿಗೆ ನೆರವಾಗಲು ಪ್ರಸ್ತುತ ತಸ್ತೀಕ್‌ ಮೊತ್ತವನ್ನು 48 ಸಾವಿರ ರೂ. ನಿಂದ 60 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಜತೆಗೆ ದೇವಾಲಯಗಳ ವಿವಿಧ ಸೇವೆಗಳನ್ನು ಭಕ್ತಾದಿಗಳಿಗೆ ಆನ್‌ಲೈನ್‌ ಮೂಲಕ ಲಭ್ಯಪಡಿಸಲು “ಇಂಟಿಗ್ರೇಟೆಡ್‌ ಟೆಂಪಲ್‌ ಮ್ಯಾನೆಜ್‌ಮೆಂಟ್‌ ಸಿಸ್ಟಂ’ ತಂತ್ರಾಂಶ ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಯಾತ್ರಾರ್ಥಿಗಳಿಗೆ ಸಹಾಯಧನ: ಶಿಕ್ಷಣ, ಆರೋಗ್ಯ ಹಾಗೂ ಸಮಾಜ ಸೇವೆ ವಲಯಗಳಲ್ಲಿ ಉತ್ತಮ ಕೊಡುಗೆ ನೀಡುತ್ತಿರುವ ಮಠಗಳು ಮತ್ತು ಸಂಸ್ಥೆಗಳಿಗೆ ಸರಕಾರದಿಂದ ನೆರವು ನೀಡಲಾಗುವುದು. ಹಾಗೆಯೇ ಆಂಧ್ರಪ್ರದೇಶದಲ್ಲಿರುವ ಪ್ರಸಿದ್ಧ ಯಾತ್ರಾ ಕ್ಷೇತ್ರ ಶ್ರೀಶೈಲದಲ್ಲಿ ಕರ್ನಾಟಕದ ಯಾತ್ರಿಗಳಿಗಾಗಿ “ಯಾತ್ರಿ ನಿವಾಸ ಸಂಕೀರ್ಣ’ವನ್ನು 85 ಕೋಟಿ ರೂ. ವೆಚ್ಚದಲ್ಲಿ ಎರಡು ಹಂತಗಳಲ್ಲಿ ನಿರ್ಮಿಸಲು ಯೋಜಿಸಿದ್ದು, ಮೊದಲನೇ ಹಂತದ ಕಾಮಗಾರಿಯನ್ನು 45 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು.

ಮಹಾರಾಷ್ಟ್ರದ ಪಂಡರಾಪುರಕ್ಕೆ ಹೋಗುವ ರಾಜ್ಯದ ಭಕ್ತಾದಿಗಳು ತಂಗಲು ಅತಿಥಿ ಗೃಹ ಅಭಿವೃದ್ಧಿ ಪಡಿಸಲಾಗುತ್ತದೆ. ಜತೆಗೆ ಪುಣ್ಯ ಕ್ಷೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ಅನುಕೂಲವಾಗಲು ಕೆಎಸ್‌ಟಿಡಿಸಿಯಿಂದ ರಿಯಾಯಿತಿ ದರದಲ್ಲಿ ಪ್ಯಾಕೆಜ್‌ಗಳನ್ನು ರೂಪಿಸಲಾಗಿದೆ. ಪ್ರಮುಖವಾಗಿ ಕಾಶಿ ಯಾತ್ರೆ ಕೈಗೊಳ್ಳುವ 30 ಸಾವಿರ ಯಾತ್ರಾರ್ಥಿಗಳಿಗೆ ಸರಕಾರದಿಂದ ತಲಾ 5 ಸಾವಿರ ರೂ.ಗಳ ಸಹಾಯಧನ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಉಲ್ಲೇಖೀಸಿದ್ದಾರೆ.

Advertisement

ಆಡಳಿತ ಸುಧಾರಣೆ:  ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವಾ ವಲಯಕ್ಕೂ ಹೆಚ್ಚು ಒತ್ತು ನೀಡಿರುವ ಮುಖ್ಯಮಂತ್ರಿಯವರು  2022-23ನೇ ಸಾಲಿನಲ್ಲಿ ಬರೋಬ್ಬರಿ 56,710 ಕೋಟಿ ರೂ. ಅನುದಾನ ಒದಗಿಸುವುದಾಗಿ ಹೇಳಿದ್ದಾರೆ.

ಡ್ರೋನ್‌ ಸರ್ವೆಗೆ ಒತ್ತು
ರಾಜ್ಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೃಷಿ ಜಮೀನು ಮತ್ತು ಇತರೆ ಸ್ವತ್ತುಗಳ ಡ್ರೋನ್‌ ಆಧಾರಿತ ಸರ್ವೆ ಕಾರ್ಯವನ್ನು ರಾಜ್ಯಾದ್ಯಂತ 287 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಿದೆ. ಮೂರು ವರ್ಷದೊಳಗಾಗಿ ಪೂರ್ಣಗೊಳ್ಳಲಿರುವ ಈ ಕಾರ್ಯದಿಂದ ವಿದ್ಯುನ್ಮಾನ ಪಹಣಿ ಮತ್ತು ನಕ್ಷೆಗಳನ್ನು ಒದಿಗಸಲಾಗುವುದು ಎಂದು ಮುಖ್ಯ ಮಂತ್ರಿಗಳು ತಮ್ಮ ಬಜೆಟ್‌ನಲ್ಲಿ  ಪ್ರಸ್ತಾಪಿಸಿದ್ದಾರೆ.

ಪತ್ರಿಕೆಗಳಿಗೆ ಪ್ರೋತ್ಸಾಹ
ಪತ್ರಿಕೋದ್ಯಮ ಉತ್ತೇಜಿಸಲು ನಿಯಮಿತವಾಗಿ 8 ಪುಟಗಳಲ್ಲಿ ಪ್ರಕಟಗೊಳ್ಳುವ ಪ್ರಾದೇಶಿಕ ಪತ್ರಿಕೆಗಳಿಗೆ ಪ್ರೋತ್ಸಾಹ ನೀಡುವುದು. 20 ಸಾವಿರಕ್ಕೂ ಹೆಚ್ಚು ಪ್ರಸಾರ ಹೊಂದಿರುವ ವರ್ಣ ಪುಟಗಳಲ್ಲಿ ಪ್ರಕಟಗೊಳ್ಳುವ ಪ್ರಾದೇಶಿಕ ಪತ್ರಿಕೆಗಳನ್ನು ಸದೃಢಗೊಳಿಸಲು ಹೊಸ ಯೋಜನೆ.ಹಿಂದುಳಿತ ವರ್ಗಗಳ ಮಾನ್ಯತೆ ಪಡೆದ ಪತ್ರಕರ್ತರಿಗೆ ಮಾಧ್ಯಮ ಕಿಟ್‌ ಹಾಗೂ ಹಿಂದುಳಿದ ವರ್ಗಗಳ ಒಡೆತನದ ಪತ್ರಿಕೆಗಳಿಗೆ ಪ್ರತಿ ತಿಂಗಳು ಎರಡು ಪುಟ ಜಾಹೀರಾತು ನೀಡಲಾಗುವುದು.

ಪ್ರಮುಖಾಂಶಗಳು
1. ಪ್ರವಾಹದಿಂದ ಹಾನಿಗೊಳಗಾದ ಬೆಳೆಗಳಿಗೆ ರಾಜ್ಯ ಸರಕಾರದಿಂದ ಹೆಚ್ಚುವರಿಯಾಗಿ 2,453 ಕೋಟಿ ರೂ.ಇನ್‌ಪುಟ್‌ ಸಬ್ಸಿಡಿ ವಿತರಿಸಲಾಗಿದೆ.

2.”ಕಂದಾಯ ಇಲಾಖೆ ಮನೆ ಬಾಗಿಲಿಗೆ’ ಯೋಜನೆ ಮೂಲಕ ಸಾರ್ವಜನಿಕರಿಗೆ ನೀಡುತ್ತಿರುವ ಪಹಣಿ, ಅಟ್ಲಾಸ್‌, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲಾಗುವುದು.

3.ಆಸಿಡ್‌ ದಾಳಿಗೊಳಗಾದ ಮಹಿಳೆಯರಿಗೆ ಪ್ರಸ್ತುತ ನೀಡುತ್ತಿರುವ ಮಾಸಿಕ ಪಿಂಚಣಿ ಮೊತ್ತವನ್ನು 3 ಸಾವಿರ ರೂ.ನಿಂದ ಹತ್ತು ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಜತೆಗೆ ಈ ಮಹಿಳೆಯರಿಗೆ ಹೊಸ ಕಾರ್ಯಕ್ರಮ ರೂಪಿಸಲಾಗುತ್ತದೆ.

4.ಉಪ ನೋಂದಣಾಧಿಕಾರಿಗಳ ಕಚೇರಿಗಳ ಮಾಹಿತಿ ತಂತ್ರಜ್ಞಾನ ಉಪಕರಣಗಳು ಹಾಗೂ ಮೂಲಸೌಕರ್ಯವನ್ನು 406 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಲಾಗುವುದು. ಜತೆಗೆ ಉಪ ನೊಂದಣಾಧಿಕಾರಿಗಳ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ.

5.ಫ್ರೂಟ್ಸ್ ಮತ್ತು ಕಾವೇರಿ ತಂತ್ರಾಂಶಗಳನ್ನು ಸಂಯೋಜನೆಗೊಳಿಸಿ ರೈತರು ಬೆಳೆ ಸಾಲ ನೊಂದಾಯಿಸಲು ಉಪ ನೊಂದಾಣಾಧಿಕಾರಿಗಳ ಕಚೇರಿಗೆ ಅಲೆಯುವುದನ್ನು ತಪ್ಪಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next