ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದರೂ ಕರಾವಳಿಯ ರೈತರು, ಕೃಷಿಕರಿಗೆ ನೇರವಾಗಿ ಅನುಕೂಲವಾಗುವ ಯೋಜನೆಗಳನ್ನು ಒಳಗೊಂಡಿಲ್ಲ.
ಕೃಷಿ ಯಂತ್ರೋಪಕರಣಗಳ ಬಳಕೆಗೆ ಪ್ರೋತ್ಸಾಹ ಮತ್ತು ಇಂಧನ ವೆಚ್ಚದ ಹೊರೆ ಕಡಿಮೆ ಮಾಡಲು ಪ್ರತೀ ಎಕ್ರೆಗೆ 250 ರೂ.ಗಳಂತೆ ಗರಿಷ್ಠ 5 ಎಕ್ರೆಗೆ ಡೀಸೆಲ್ ಸಹಾಯಧನ ನೀಡಲು ರೈತಶಕ್ತಿ ಯೋಜನೆಗೆ 500 ಕೋ.ರೂ.ಗಳನ್ನು ಒದಗಿಸಲಾಗಿದೆ. ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪನೆ, ಜಾನುವಾರುಗಳ ಆರೋಗ್ಯ ರಕ್ಷಣೆ, ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್ ಸಹಿತವಾಗಿ ಬಜೆಟ್‌ನಲ್ಲಿ ಘೋಷಿಸಲಾಗಿರುವ ಹಲವು ಯೋಜನೆಗಳು ರೈತರಿಗೆ ಅನುಕೂಲಕಾರಿಯಾಗಿದೆ.
ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲಾಗಿದೆ. ಕೃಷಿ, ತೋಟಗಾರಿಕೆ ವಿಶ್ವವಿದ್ಯಾನಿಲಯಗಳ ಮೂಲಕ ತಲಾ ಸಾವಿರ ಎಕ್ರೆ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಸಾರಜನಕ ಸ್ಥಿರೀಕರಣ ಹಾಗೂ ಜೈವಿಕ ವಿಶ್ಲೇಷಣೆ ಅಧ್ಯಯನಗಳ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುವುದು. ರಾಜ್ಯದ 2 ಲಕ್ಷ ಹೆಕ್ಟೇರ್ ಪ್ರದೇಶವನ್ನು ಸಾವಯವ ಕೃಷಿಯಡಿಯಲ್ಲಿ ತಂದಿರುವುದು.. ಹೀಗೆ ಸಾವಯವ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಿರುವುದರಿಂದ ಭೂಮಿ ಫಲವತ್ತತೆ ದೀರ್ಘಕಾಲ ಉಳಿಯುತ್ತದೆ.
ನೀರಾವರಿಗೆ ಸಂಬಂಧಿಸಿದ ಸಬ್ಸಿಡಿ ಘೋಷಣೆ, ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಒತ್ತು ನೀಡಿರುವುದು ಕೃಷಿಕರ ಆದಾಯ ಹೆಚ್ಚುವ ಜತೆಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಾಗಲಿದೆ. ಒಂದು ಉತ್ಪನ್ನದಿಂದ ಹಲವು ಉತ್ಪನ್ನ ಪಡೆಯಬಹುದಾಗಿದೆ. ಕರಾವಳಿಯ ರೈತರು ಅಥವಾ ಕೃಷಿಕರ ಹಿತದೃಷ್ಟಿಯಿಂದ ಜಾರಿಯಾಗಲೇ ಬೇಕಿದ್ದ ಕೆಲವು ಯೋಜನೆಗಳು ಜಾರಿಗೆ ಬಂದಿಲ್ಲ. ವಾರಾಹಿ ಯೋಜನೆ ವರ್ಷದಿಂದ ವರ್ಷಕ್ಕೆ ಹಿಗ್ಗುತ್ತಿದೆ. ಆದರೆ ನಿರ್ದಿಷ್ಟ ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸುವ ಪ್ರಸ್ತಾವವಾಗಿಲ್ಲ. ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಅನುದಾನ ನೀಡಲಾಗಿದೆ. ಕರಾವಳಿಯ ಕಬ್ಬು ಬೆಳೆಗಾರರ ಆಶಾಕಿರಣವಾಗಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸುವ ಬಗ್ಗೆ ಯಾವುದೇ ಘೋಷಣೆಯಾಗಿಲ್ಲ. ಹಾಸನ ಮೊದಲಾದ ಕಡೆಗಳಲ್ಲಿ ಕಾಡಾನೆ ಹಾವಳಿ ತಪ್ಪಿಸಲು ಯೋಜನೆ ರೂಪಿಸಲಾಗಿದೆ.
ಕರಾವಳಿಯ ಕೃಷಿಕರು ಕಾಡು ಪ್ರಾಣಿಗಳಿಂದ ಅನುಭವಿಸುತ್ತಿರುವ ನಷ್ಟ, ಸಮಸ್ಯೆಯನ್ನು ತಪ್ಪಿಸುವ ಕ್ರಮ ಆಗಿಲ್ಲ. ಬಹುಮುಖ್ಯವಾಗಿ ಭತ್ತ ಕಟಾವು ಆದ ಕೂಡಲೇ ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಪ್ರಸ್ತಾವಿಸಿಲ್ಲ. ಕಟಾವು ಆಗಿ ತಿಂಗಳು ಕಳೆದರೂ ಬೆಂಬಲ ಬೆಲೆಯಡಿ ಖರೀದಿ ಪ್ರಕ್ರಿಯೆ ಆರಂಭವಾಗುವುದಿಲ್ಲ. ಇದರಿಂದ ಕರಾವಳಿ ರೈತರು ಅನಿವಾರ್ಯವಾಗಿ ಭತ್ತ ಬೇರೆಡೆಗೆ ಮಾರಾಟ ಮಾಡಬೇಕಾಗುತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರತ್ಯೇಕ ಅನುದಾನ ಮೀಸಲಿಟ್ಟು ಕಟಾವು ಮುಗಿದ ತತ್‌ಕ್ಷಣವೇ ಬೆಂಬಲ ಬೆಲೆಯಡಿ ಖರೀದಿ ಪ್ರಕ್ರಿಯೆ ಶುರು ಮಾಡಲು ಕ್ರಮ ಕೈಗೊಳ್ಳಬೇಕಿತ್ತು. ಹೀಗೆ ಕರಾವಳಿಯ ರೈತರಿಗೆ ಅನುಕೂಲವಾಗುವಂಥ ಕೆಲವೊಂದು ಕ್ರಮಗಳನ್ನು ಬಜೆಟ್‌ನಲ್ಲಿ ತೆಗೆದುಕೊಳ್ಳಬಹುದಿತ್ತಾದರೂ ಇತ್ತ ಮುಖ್ಯಮಂತ್ರಿ ದೃಷ್ಟಿ ಹಾಯಿಸಿಲ್ಲ. ಒಟ್ಟಾರೆಯಾಗಿ ಕೃಷಿ, ನೀರಾವರಿಗೆ ಅನುದಾನ ಹಂಚಿಕೆ, ವಿದ್ಯುತ್ ಪೂರೈಕೆ ಇತ್ಯಾದಿ ಯೋಜನೆಗಳನ್ನು ಘೋಷಿಸಲಾಗಿದ್ದು ಇದು ಕೃಷಿ ವಲಯಕ್ಕೆ ಪೂರಕವಾಗಿವೆ.
-ಸತ್ಯನಾರಾಯಣ ಉಡುಪ
ಪ್ರಧಾನ ಕಾರ್ಯದರ್ಶಿ, ಭಾರತೀಯ ಕಿಸಾನ್ ಸಂಘ ಉಡುಪಿ ಜಿಲ್ಲೆ