ಬೆಂಗಳೂರು: ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ನಲ್ಲಿ ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಜೆಟ್ಟಿ ನಿರ್ಮಾಣ ಸೇರಿದಂತೆ ಮೀನುಗಾರಿಕೆಗೆ ಹಲವು ಆದ್ಯತೆಗಳನ್ನು ನೀಡಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ್ದ ಬಜೆಟ್ ನಲ್ಲಿ ಮೀನುಗಾರಿಕೆ ನೀಡಿದ ಅನುದಾನದ ವಿವರ ಇಲ್ಲಿದೆ..
1)ಮೀನುಗಾರಿಕೆ ದೋಣಿಗಳಿಗೆ ಇಸ್ರೋ ಅಧಿಕೃತಗೊಳಿಸಿರುವ ಡಿಎಟಿ ಉಪಕರಣ ಅಳವಡಿಸಿಕೊಳ್ಳಲು ಶೇ.50ರಷ್ಟು ಸಹಾಯಧನ, 3 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ.
2)ಒಳನಾಡು ಮತ್ತು ಹಿನ್ನೀರು ಜಲಸಂಪನ್ಮೂಲದಲ್ಲಿ ಸಿಗಡಿ ಮತ್ತು ಮೀನು ಕೃಷಿಗೆ ಪ್ರೋತ್ಸಾಹ. 400 ಘಟಕಗಳಿಗೆ ಸಹಾಯಧನ ನೀಡಲು 2 ಕೋಟಿ ರೂಪಾಯಿ ಅನುದಾನ.
3)ಒಳನಾಡಿನ ಕೆರೆಗಳಲ್ಲಿನ ಮೀನುಗಾರಿಕೆ ಗುತ್ತಿಗೆಗಳನ್ನು ಸಂಘ ಸಂಸ್ಥೆಗಳ ಬದಲು ಸ್ಥಳೀಯ ಮೀನುಗಾರರಿಗೆ ಮೀಸಲಿಡುವ ಕುರಿತು ಪರಿಶೀಲನೆ.
4)ಮತ್ಸ್ಯಾಶ್ರಯ ಯೋಜನೆ ಮುಂದುವರಿಕೆ: ಪ್ರಗತಿಯಲ್ಲಿರುವ 2500 ಮನೆಗಳನ್ನು ಪೂರ್ಣಗೊಳಿಸಲು ಕ್ರಮ.
5)ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಮೀನುಗಾರಿಕೆ ಚಟುವಟಿಕೆಗಳ ಅಭಿವೃದ್ಧಿಗೆ ಜೆಟ್ಟಿ ನಿರ್ಮಾಣ, ತ್ಯಾಜ್ಯ ನಿರ್ವಹಣಾ ಘಟಕಕ್ಕಾಗಿ 15 ಕೋಟಿ ರೂಪಾಯಿ ಅನುದಾನ
6)ರಾಜ್ಯದಲ್ಲಿ ಡೀಸೆಲ್ ಮತ್ತು ಸೀಮೆಎಣ್ಣೆ ಪಾಸ್ ಬುಕ್ ಪಡೆದಿರುವ ದೋಣಿಗಳಿಗೆ ಡೀಸೆಲ್, ಸೀಮೆಎಣ್ಣೆ ಸಬ್ಸಿಡಿಗಾಗಿ 148.5 ಕೋಟಿ ರೂ. ಮೀಸಲು.