Advertisement

ಕೋವಿಡ್ ನಿಯಂತ್ರಣದಲ್ಲಿ ಹೇಗಿದೆ ರಾಜ್ಯದ ಹೆಜ್ಜೆ?

03:26 AM May 29, 2020 | Hari Prasad |

ಭಾರತದಲ್ಲಿ ಕೋವಿಡ್ ಪರೀಕ್ಷೆಗಳ ಪ್ರಮಾಣ ಹೆಚ್ಚುತ್ತಿರುವ ವೇಳೆಯಲ್ಲೇ ಟೆಸ್ಟ್‌ ಪಾಸಿಟಿವಿಟಿ ದರ 5 ಪ್ರತಿಶತಕ್ಕೆ ಏರಿದೆ. ಅಂದರೆ, ದೇಶದಲ್ಲಿ 100 ಕೋವಿಡ್ ಪತ್ತೆ ಪರೀಕ್ಷೆಗಳನ್ನು ನಡೆಸಿದಾಗ, ಅದರಲ್ಲಿ 5 ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ.

Advertisement

ಆದರೆ, ಟೆಸ್ಟ್‌ ಪಾಸಿಟಿವಿಟಿ ರೇಟ್‌ ಎಲ್ಲ ರಾಜ್ಯಗಳಲ್ಲೂ ಒಂದೇ ತೆರನಾಗಿಲ್ಲ. ಒಂದೆಡೆ ಮಹಾರಾಷ್ಟ್ರದಲ್ಲಿ ಅದು 14 ಪ್ರತಿಶತವಿದ್ದರೆ, ಕೆಲವು ದಿನಗಳಿಂದ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗಿದ್ದರೂ ಕೂಡ, ಟೆಸ್ಟ್‌ ಪಾಸಿಟಿವಿಟಿ ರೇಟ್‌ ಕೇವಲ 1 ಪ್ರತಿಶತವಿದ್ದು, ಸೋಂಕು ನಿಯಂತ್ರಣದಲ್ಲಿ ರಾಜ್ಯದ ಪ್ರಯತ್ನ ಉತ್ತಮವಾಗಿದೆ ಎನ್ನುವುದಕ್ಕೆ ಉದಾಹರಣೆಯಾಗಿ ನಿಲ್ಲುತ್ತಿದೆ.

ರಾಜ್ಯದ ಟೆಸ್ಟ್‌ ಪಾಸಿಟಿವಿಟಿ ದರ ಕೇವಲ 1 ಪ್ರತಿಶತ!
ಲಾಕ್‌ಡೌನ್‌ ನಾಲ್ಕನೇ ಚರಣದ ಆರಂಭದಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹಾಗೂ ಮರಣ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ, ಟೆಸ್ಟ್ ಪಾಸಿಟಿವಿಟಿ ದರ ನಮ್ಮಲ್ಲಿ 1 ಪ್ರತಿಶತವಿರುವುದು ಗಮನಾರ್ಹ.

ಅಂದರೆ, ಸೋಂಕು ವ್ಯಾಪಕವಾಗಿ ಹರಡಿಲ್ಲ ಎನ್ನುವ ಶುಭ ಸಮಾಚಾರವನ್ನು ಈ ಸಂಖ್ಯೆ ಕೊಡುತ್ತಿದೆ. ಇದಕ್ಕೆ ಹೋಲಿಸಿದರೆ ರಾಷ್ಟ್ರೀಯ ಸರಾಸರಿ 5 ಪ್ರತಿಶತದಷ್ಟಿದೆ! ಕರ್ನಾಟಕದಲ್ಲಿ 1 ಪ್ರತಿಶತವಿದೆ ಅಂದರೆ, 100 ಜನರನ್ನು  ಪರೀಕ್ಷಿಸಿದಾಗ ಅವರಲ್ಲಿ ಒಬ್ಬರು ಪಾಸಿಟಿವ್‌ ಎಂದು ಪತ್ತೆಯಾಗುತ್ತಾರೆ.

ದೇಶದಲ್ಲೇ ಅತ್ಯಂತ ಕೆಟ್ಟ ಟೆಸ್ಟ್ ಪಾಸಿಟಿವಿಟಿ ದರವಿರುವುದು ಮಹಾರಾಷ್ಟ್ರದಲ್ಲಿ. ಆ ರಾಜ್ಯದಲ್ಲಿ ಟೆಸ್ಟ್ ಪಾಸಿಟಿವಿಟಿ ದರ 14ರಷ್ಟಿದೆ. ಅಂದರೆ 100 ಜನರನ್ನು ಪರೀಕ್ಷಿಸಿದಾಗ ಅವರಲ್ಲಿ 14 ಜನರಲ್ಲಿ ರೋಗ ಪತ್ತೆಯಾಗುತ್ತಿದೆ.

Advertisement

ಹೋರಾಟದಲ್ಲಿ ಬೆಂಗಳೂರೇ ಮುಂದೆ
ಕೋವಿಡ್‌-19 ತಡೆಗೆ ರಾಜ್ಯ ರಾಜಧಾನಿ ಬೆಂಗಳೂರಿನ ಸಮರ್ಥ ಕಾರ್ಯವೈಖರಿಗೆ ಕೇಂದ್ರ ಸರಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ನಾಲ್ಕು ನಗರಗಳನ್ನು ಕೇಂದ್ರವು ಮಾದರಿಯಾಗಿ ಗುರುತಿಸಿದ್ದು, ಅದರಲ್ಲಿ ಬೆಂಗಳೂರೇ ನಂಬರ್‌ ಒನ್ ಸ್ಥಾನದಲ್ಲಿದೆ. ವೆಂಟಿಲೇಟರ್‌ಗಳ ಬಳಕೆಯಲ್ಲಿ ತೋರಿದ ಜಾಣ್ಮೆ, ಚಿಕಿತ್ಸೆ ತಡವಾಗದಂತೆ ತೆಗೆದುಕೊಳ್ಳಲಾದ ಕ್ರಮಗಳನ್ನು ಆಧರಿಸಿ  ಬೆಂಗಳೂರನ್ನು ಗುರುತಿಸಲಾಗಿದೆ.

ಮಂಡ್ಯ, ದಾವಣಗೆರೆಯಲ್ಲಿ ಅಧಿಕ ಟೆಸ್ಟ್‌ ಪಾಸಿಟಿವಿಟಿ ದರ
ಜಿಲ್ಲಾವಾರು ಟೆಸ್ಟ್ ಪಾಸಿಟಿವಿಟಿ ದರ ನೋಡಿದರೆ, ರಾಜ್ಯದಲ್ಲಿ  8 ಜಿಲ್ಲೆಗಳಲ್ಲಿ 1.5 ಪ್ರತಿಶತಕ್ಕಿಂತಲೂ ಅಧಿಕವಿದೆ. ಅದರಲ್ಲೂ ಮಂಡ್ಯದಲ್ಲಿ ಮೇ 23ರ ವೇಳೆಗೆ ಟೆಸ್ಟ್ ಪಾಸಿಟಿವಿಟಿ ದರ 2.6 ಪ್ರತಿಶತದಷ್ಟು ದಾಖಲಾಗಿದ್ದರೆ, ದಾವಣಗೆರೆಯಲ್ಲಿ 2.5 ಪ್ರತಿಶತ, ಉಡುಪಿಯಲ್ಲಿ 1.9 ಪ್ರತಿಶತ, ಯಾದಗಿರಿಯಲ್ಲಿ 1.7 ಪ್ರತಿಶತ, ಹಾಸನದಲ್ಲಿ 1.6 ಪ್ರತಿಶತ ದಾಖಲಾಗಿದೆ. ಪ್ರಸಕ್ತ ರಾಜ್ಯದಲ್ಲಿ 80 ಪ್ರತಿಶತಕ್ಕೂ ಅಧಿಕ ಹೊಸ ಪ್ರಕರಣಗಳು ಅನ್ಯ ರಾಜ್ಯಗಳಿಂದ ಅಥವಾ ದೇಶಗಳಿಂದ ಹಿಂದಿರುಗಿರುವವರಲ್ಲೇ ಪತ್ತೆಯಾಗಿವೆ.

ಮಧ್ಯಮ ಆದಾಯದ ದೇಶಗಳಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣ
ಚೀನದಿಂದ ಆರಂಭವಾದ ಕೋವಿಡ್‌-19 ಹಾವಳಿಯು ತದನಂತರ ಉತ್ತರ ಅಮೆರಿಕ ಮತ್ತು ಯುರೋಪ್‌ನ ಶ್ರೀಮಂತ ರಾಷ್ಟ್ರ ಗಳಿಗೆ ವೇಗವಾಗಿ ಹರಡಿತು. ಮಾರ್ಚ್‌ 2ನೇ ವಾರದಿಂದೀಚೆಗೆ ಈ ಶ್ರೀಮಂತ ರಾಷ್ಟ್ರಗಳಲ್ಲಿ ಕೋವಿಡ್ ಬೆಳವಣಿಗೆ ದರ ಕಡಿಮೆಯಾಗುತ್ತಿದ್ದು, ಈಗ ಬ್ರೆಜಿಲ್, ಭಾರತ ಮತ್ತು ರಷ್ಯಾದಂಥ ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರಗಳು ಅದರ ಹಾಟ್‌ ಸ್ಪಾಟ್‌ಗಳಾಗಿ ಬದಲಾಗುತ್ತಿವೆ.

ಅದರಲ್ಲೂ ಬ್ರೆಜಿಲ್‌ನ ಸಾವೋ ಪೌಲೋ ನಗರಿ ಹಾಗೂ ಭಾರತದ ಮುಂಬೈ ನಗರಿಯು ಅತಿ ಹೆಚ್ಚು ಸಂಕಷ್ಟಕ್ಕೆ ಈಡಾಗಿದ್ದು, ಈಗಾಗಲೇ ಇವೆರಡೂ ನಗರಿಗಳ ಆಸ್ಪತ್ರೆಗಳು ತುಂಬಿ, ವೆಂಟಿಲೇಟರ್‌ಗಳು, ಐಸಿಯು ಬೆಡ್‌ಗಳ ಕೊರತೆ ಆರಂಭವಾಗಿದೆ. ಕೋವಿಡ್ ಹಾವಳಿಯೀಗ ಉತ್ತರ ಅಮೆರಿಕ ಹಾಗೂ ಏಷ್ಯನ್‌ ರಾಷ್ಟ್ರಗಳಲ್ಲಿ ಅಧಿಕವಾಗಲಾರಂಭಿಸಿದೆ.

ಮಾಲಿನ್ಯಕ್ಕೂ ಮರಣ ಪ್ರಮಾಣಕ್ಕೂ ಸಂಬಂಧವಿದೆಯೇ
ಹಾರ್ವರ್ಡ್‌ ವಿಶ್ವವಿದ್ಯಾಲಯದ ಒಂದು ಸಂಶೋಧನೆಯು, ಅಮೆರಿಕದ ಯಾವ ಪ್ರದೇಶಗಳಲ್ಲಿ ಕಳೆದ 15-20 ವರ್ಷಗಳಿಂದ ವಾಯುಮಾಲಿನ್ಯ ಅಧಿಕವಿತ್ತೋ, ಅಲ್ಲಿ ಕೋವಿಡ್ ನಿಂದಾಗುವ ಮರಣ ಪ್ರಮಾಣವೂ ಅಧಿಕ ದಾಖಲಾಗುತ್ತಿದೆ ಎನ್ನುತ್ತದೆ.

ಕೋವಿಡ್ ಅತಿಹೆಚ್ಚು ಹಾನಿ ಮಾಡಿರುವುದು ವಾಯುಮಾಲಿನ್ಯಕ್ಕೆ ಕುಖ್ಯಾತವಾದ ನ್ಯೂಯಾರ್ಕ್‌ ನಗರಿಗೇ ಎನ್ನುವುದನ್ನು ಮರೆಯುವಂತಿಲ್ಲ. ಇಟಲಿಯ ಲೊಂಬಾರ್ಡಿ ಪ್ರದೇಶ ಕೂಡ ಹಲವು ವರ್ಷ ಗಳಿಂದ ವಾಯುಮಾಲಿನ್ಯದಿಂದ ಬಳಲುತ್ತಿದ್ದು, ಎಪ್ರಿಲ್‌ 26ರ ವೇಳೆಗೆ ಇಟಲಿಯಲ್ಲಿ 26 ಸಾವಿರ ಮಂದಿ ಮೃತಪಟ್ಟಿದ್ದರೆ, ಅವರಲ್ಲಿ 13 ಸಾವಿರ ಜನ ಲೊಂಬಾರ್ಡಿ ಪ್ರದೇಶದವರಾಗಿದ್ದರು.

ವಾಯುಮಾಲಿನ್ಯಕ್ಕೂ ಮಹಾಮಾರಿಯ ಪರಿಣಾಮದ ನಡುವಿನ ಸಂಬಂಧದ ಬಗ್ಗೆ ಅಧ್ಯಯನಗಳು ಈಗಷ್ಟೇ ನಡೆದಿರುವುದಲ್ಲ. 2003ರಲ್ಲಿ ಸಾರ್ಸ್‌ ಜಗದಗಲ ವ್ಯಾಪಿಸಿದಾಗಲೂ, ಹೆಚ್ಚು ವಾಯುಮಾಲಿನ್ಯ ಇರುವ ನಗರಗಳಿಗೇ ಅದು ಅಧಿಕವಾಗಿ ಕಾಡಿತ್ತು.

ವಾಯುಮಾಲಿನ್ಯ ಅಧಿಕವಿರುವ ಪ್ರದೇಶಗಳಲ್ಲಿ ಜನರಿಗೆ ಶ್ವಾಸಕೋಶದ ತೊಂದರೆ, ಹೃದ್ರೋಗ ಸೇರಿದಂತೆ, ಅನೇಕ ಸಮಸ್ಯೆಗಳು ಇರುತ್ತವೆ, ಅಲ್ಲದೇ ಅವರ ರೋಗ ನಿರೋಧಕ ಶಕ್ತಿಯೂ ಕಡಿಮೆಯಿರುತ್ತದೆ ಎನ್ನುವುದು ಈ ಸಂಶೋಧನೆಯ ಒಟ್ಟು ಸಾರ. ಗಮನಾರ್ಹ ಸಂಗತಿಯೆಂದರೆ, ಭಾರತದಲ್ಲೂ ವಾಯುಮಾಲಿನ್ಯಕ್ಕೆ ಕುಖ್ಯಾತವಾದ ನಗರಗಳಲ್ಲಿ ಕೋವಿಡ್ ಕಂಟಕ ಅಧಿಕವಾಗುತ್ತಿದೆ (ಆದಾಗ್ಯೂ ದೆಹಲಿಗಿಂತ ಮುಂಬೈ ಹೆಚ್ಚು ಪೀಡಿತವಾಗಿದೆ).

Advertisement

Udayavani is now on Telegram. Click here to join our channel and stay updated with the latest news.

Next