ಬೆಂಗಳೂರು: 2017-18ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಸೋಮವಾರ ನಿರ್ದೇಶಕಿ ಶಾಲಿನಿ ರಜನೀಶ್ ಅವರು ಪ್ರಕಟಿಸಿದ್ದು, ಈ ಬಾರಿ ಶೇ.71.93ರಷ್ಟು ಫಲಿತಾಂಶ ದಾಖಲಾಗಿದೆ. ನಿರೀಕ್ಷೆಯಂತೆ ಉಡುಪಿ ಪ್ರಥಮ, ಉತ್ತರ ಕನ್ನಡ ದ್ವಿತೀಯ, ಚಿಕ್ಕೋಡಿ ತೃತೀಯ ಹಾಗೂ ಯಾದಗಿರಿ ಕೊನೆಯ ಸ್ಥಾನ ಪಡೆದಿದೆ.
ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ.78.01ರಷ್ಟು ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್ಸ್ ಆಗಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ಕಳೆದ ಬಾರಿ ಶೇ67.87ರಷ್ಟು ಫಲಿತಾಂಶ ಬಂದಿತ್ತು.
ಮಾರ್ಚ್ 23ರಿಂದ ಏಪ್ರಿಲ್ 6ರವರೆಗೆ ನಡೆದ ಎಸ್ಸೆಎಸ್ಸೆಲ್ಸಿ ಪರೀಕ್ಷೆಯಲ್ಲಿ ಒಟ್ಟು 8,54,424 ವಿದ್ಯಾರ್ಥಿಗಳು ಬರೆದಿದ್ದರು. ಏಪ್ರಿಲ್ 15ರಿಂದ 25ರವರೆಗೆ ಉತ್ತರ ಪತ್ರಿಕೆ ಮೌಲ್ಯಮಾಪನ ನಡೆದಿತ್ತು.
ನಾಳೆ ರಾಜ್ಯದ ಎಲ್ಲಾ ಪ್ರೌಢಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಇಂದು ಪ್ರೌಢಶಿಕ್ಷಣ ಮಂಡಳಿ ವೆಬ್ ಸೈಟ್ ನಲ್ಲಿ ಮಧ್ಯಾಹ್ನ 1ಗಂಟೆಗೆ ಫಲಿತಾಂಶ ಲಭ್ಯವಾಗಲಿದೆ ಎಂದು ತಿಳಿಸಿದರು.
ಫಲಿತಾಂಶ ನೋಡಲು ಈ ಕೆಳಗಿನ ವೆಬ್ ತಾಣಗಳಿಗೆ ಭೇಟಿ ಕೊಡಿ: : //karresults.nic.in/ ಮತ್ತು //kseeb.kar.nic.in/